ಕೊರೋನಾ ಮಹಾಮಾರಿ ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ. ಹೀಗಾಗಿ ಗ್ರಾಮಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಸೀಲ್ ಡೌನ್ , ಲಾಕ್ಡೌನ್ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು. ಆದರೆ ಈ ಸಮಯವನ್ನು ಸಾಮಾಜಿಕ ಕೆಲಸ ಕಾರ್ಯ ಮಾಡುವ ಮನಸ್ಸುಳ್ಳ ಮಂದಿ ಉತ್ತಮವಾಗಿ ಬಳಕೆ ಮಾಡಿಕೊಂಡರು. ಅದಕ್ಕೆ ಉದಾಹರಣೆ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿತ್ತು ಹಾಗೂ ಪಾಸಿಟಿವಿಟಿ ರೇಟ್ ಕೂಡಾ ಹೆಚ್ಚಿದ್ದ ಕಾರಣ ಇಡೀ ಗ್ರಾಮ ಸೀಲ್ ಡೌನ್ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ ಕಳೆದ ಸೋಮವಾರದಿಂದ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭ ಗುತ್ತಿಗಾರು ಗ್ರಾ ಪಂ ಅಧ್ಯಕ್ಷೆ , ಕೆಲವು ಸದಸ್ಯರು , ಪಿಡಿಒ ಅವರೂ ಕೂಡಾ ಸಾಮಾಜಿಕವಾಗಿ ತೊಡಗಿಸಿಕೊಂಡರು. ಗ್ರಾಮದ ಜನರ ಸುರಕ್ಷತೆಯಲ್ಲಿ ತೊಡಗಿಸಿಕೊಂಡರು.
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊದಲನೇ ವಾರ್ಡ್ ನ ಸದಸ್ಯೆ ಲತಾ ಕುಮಾರಿ ಹಾಗೂ ಭರತ್ ಕೆವಿ ಅವರು ಬೆಳಗ್ಗೆ 6 ಗಂಟೆಗೇ ಸೀಲ್ ಡೌನ್ ಮಾಡಿರುವ ಗೇಟ್ ಬಳಿಗೆ ಬಂದು ಕೆಲಸ ನಿರ್ವಹಿಸಿ ಗ್ರಾಮದ ಜನರ ಸುರಕ್ಷತೆಯಲ್ಲಿ ತೊಡಗಿಸಿಕೊಂಡರೆ ಹಿರಿಯ ಸದಸ್ಯೆ ಶಾರದಾ ಎಂ ಕೆ ಅವರು ವಾರ್ಡ್ ಒಳಗಿನ ಜನರ ಆರೋಗ್ಯದ ಕಾಳಜಿ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಗಮನಹರಿಸಿದರು. ಗ್ರಾ ಪಂ ಸದಸ್ಯ ವಸಂತ ಅವರು ವಾರ್ಡ್ ನ ವಿವಿದೆಡೆ ನಡೆಸಲಾದ ಗೇಟ್ ಗಳ ಅಳವಡಿಕೆ ಹಾಗೂ ಇತರ ಕಾರ್ಯಗಳ ಬಗ್ಗೆ ನೋಡಿಕೊಂಡರು. ಅದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಲತಾ ಕುಮಾರಿ ಅವರು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಿ ಬೆಳಗ್ಗೆಯೇ ಬಂದು ಊರಿನ ಹಿತಕ್ಕಾಗಿ ಸರಕಾರದ ನಿಯಮದಂತೆ ಕಟ್ಟುನಿಟ್ಟಾಗಿ ಕೆಲಸ ಮಾಡಿರುವುದು ಗಮನ ಸೆಳೆದಿತ್ತು.
ಸಾರ್ವಜನಿಕರು ಕೂಡಾ ಸಾಮಾಜಿಕವಾಗಿ ಕೆಲಸ ಮಾಡಿದರು. ಚತ್ರಪ್ಪಾಡಿ ಬಳಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತು ವಾಹನ ಓಡಾಟ ಕಷ್ಟವಾಗುತ್ತಿತ್ತು. ಹೀಗಾಗಿ ಇಲ್ಲಿ ಚರಂಡಿ ದುರಸ್ತಿ ಕಾರ್ಯವನ್ನು ರವೀಂದ್ರ ಆಜಡ್ಕ ಹಾಗೂ ಯುವಕರಾದ ನಿಶ್ಚಿತ್ ರಾಂ ತುಪ್ಪದಮನೆ, ಅಜಯ್ ಸಂಪ್ಯಾಡಿ, ಶ್ರವಣ್ ಸಂಪ್ಯಾಡಿ, ಶ್ರೇಯಸ್ ಸಂಪ್ಯಾಡಿ ತೊಡಗಿಸಿಕೊಂಡರು. ಈ ಸಮಯದಲ್ಲಿ ಯುವಕರನ್ನು ಕೂಡಾ ಸಾಮಾಜಿಕ ಕೆಲಸ ಕಾರ್ಯಗಳಿಗೆ ಹಾಗೂ ಧನಾತ್ಮಕ ವಿಚಾರಗಳ ಕಡೆಗೆ ಸೆಳೆಯುವಂತೆ ಮಾಡಿತು.
ಗುತ್ತಿಗಾರು ಗ್ರಾ ಪಂ ಅಧ್ಯಕ್ಷೆ ರೇವತಿ ಅವರು ಗುತ್ತಿಗಾರು ಬಸ್ ನಿಲ್ದಾಣ ಸ್ವಚ್ಛತೆ ಸೇರಿದಂತೆ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡರು. ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅವರು ಕೂಡಾ ಪೇಟೆ ಸ್ವಚ್ಛತಾ ಕಾರ್ಯ, ನೀರಿನ ಟ್ಯಾಂಕ್ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಉಳಿದಂತೆ ಕೊರೋನಾ ಕಾರ್ಯಪಡೆ ಸದಸ್ಯರು ಸಹಕರಿಸಿದರು. ನಡುಗಲ್ಲಿನಲ್ಲಿ ವಿಜಯ ಕುಮಾರ್ ಚಾರ್ಮತ ಅವರ ನೇತೃತ್ವದಲ್ಲಿ ಕೂಡಾ ಸಾಮಾಜಿಕ ಕೆಲಸಗಳು ನಡೆದವು.
ಗ್ರಾ ಪಂ ಪಿಡಿಒ ಶ್ಯಾಮ ಪ್ರಸಾದ್ ಅವರು ಕೂಡಾ ಗ್ರಾಮದ ಗಡಿಗಳಲ್ಲಿ ನಿಂತು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.