ಇಂದು ರಾತ್ರಿ ಸಂಭವಿಸಲಿರುವ ಖಗ್ರಾಸ ಚಂದ್ರಗ್ರಹಣ ವೀಕ್ಷಿಸಲು ವಿಜ್ಞನಾಸಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ.
ಚಂದ್ರ ಗ್ರಹಣದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಶೀಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವನ್ನು ಸಂಜೆ 4.30 ಕ್ಕೆ ಮುಚ್ಚಲಾಗಿದೆ. ನಾಳೆ ಬೆಳಗ್ಗೆ ಶುದ್ಧೀಕರಣದ ನಂತರ ತೆರೆಯಲಾಗುವುದು. ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಕನಸವಾಡಿ ಕ್ಷೇತ್ರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯವನ್ನು ಸಂಜೆ 4 ಗಂಟೆಗೆ ಮುಚ್ಚಲಾಗಿದೆ. ನಾಳೆ ಬೆಳಗಿನ ಜಾವ ಸ್ವಾಮಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿ, ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಗಳಲ್ಲಿ ಪೂಜೆ, ದರ್ಶನ, ಅನ್ನಸಂತಾರ್ಪಣೆ ಕಾರ್ಯಕ್ರಮಗಳನ್ನು ಇಂದು ಮಧ್ಯಾಹ್ನದ ನಂತರ ರದ್ದುಪಡಿಸಲಾಗಿದೆ. ಇನ್ನು ಶೃಂಗೇರಿ ಶಾರದಾ ಪೀಠದಲ್ಲಿ ಎಂದಿನಂತೆ ದೇವರ ದರ್ಶನ, ಪೂಜಾ ಕಾರ್ಯಕ್ರಮಗಳು ಇರಲಿದ್ದು, ಮಠದ ಯಜ್ಞ ಶಾಲೆಯಲ್ಲಿ ಇಂದು ರಾತ್ರಿ 10 ರಿಂದ 12 ಗಂಟೆಯವರಗೆ ಚಂದ್ರ ಗ್ರಹಣ ಶಾಂತಿ ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾರದ ಪೀಠದ ಆಡಳಿತ ಮಂಡಳಿ ತಿಳಿಸಿದೆ.

