ಅಡಿಕೆ ಬೆಳೆಗಾರರಿಗೆ ಪರ್ಯಾಯ ಆದಾಯದ ಮೂಲವಾಗಿರುವ ಅಡಿಕೆ ಹಾಳೆತಟ್ಟೆ ಬಳಕೆಗೆ ಮಡಿಕೇರಿ ನಗರಸಭೆ ನಿರ್ಬಂಧ ಹೇರಿರುವುದು ಕೊಡಗಿನಲ್ಲಿ ಚರ್ಚೆಗೆ ಕಾರಣವಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ತೆಗೆದುಕೊಂಡ ನಿರ್ಧಾರಕ್ಕೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ಹಾಳೆತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್, ಆಹಾರ ಕಂಟೈನರ್‌ಗಳು ಹಾಗೂ ಕೆಲವು ಗಾತ್ರದ ನೀರಿನ ಬಾಟಲಿಗಳ ಬಳಕೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತರ ಆದೇಶದಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ಆದೇಶದ ಪ್ರತಿಗಳನ್ನು ನೀಡಿ ಮಾಹಿತಿ ನೀಡಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಸ್ಥಳೀಯ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಅಡಿಕೆ ಹಾಳೆತಟ್ಟೆ ಯಾಕೆ ವಿರೋಧಕ್ಕೆ ಕಾರಣವಾಯಿತು? : ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆಗಳನ್ನು ಕೊಡಗಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಸಾರ್ವಜನಿಕ ಅನ್ನಸಂತರ್ಪಣೆ, ಸರ್ಕಾರಿ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ಹೋಟೆಲ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪರಿಸರದ ಮೇಲೆ ಹಾನಿಯಾಗುತ್ತದೆ ಎನ್ನುವುದು ಕಾರಣವಾಯಿತು. ಆದರೆ ಬಳಕೆಯ ನಂತರ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತದೆ. ಮಣ್ಣಿನಲ್ಲಿ ಕೊಳೆಯುವ ವಸ್ತುವಾಗಿರುವುದರಿಂದ ಅಡಿಕೆ ಹಾಳೆ ತಟ್ಟೆಯನ್ನು ಪ್ಲಾಸ್ಟಿಕ್‌ನೊಂದಿಗೆ ಸಮಾನವಾಗಿ ನೋಡುವುದು ಸರಿಯಲ್ಲ ಎಂಬುದು ವ್ಯಾಪಾರಿಗಳು ಹಾಗೂ ಸಾರ್ವಜನಿಕರ ವಾದ.
ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ನಿಷೇಧದಿಂದ ಏನು ಪ್ರಯೋಜನ? : ಮಡಿಕೇರಿಗೆ ಹೊರ ಜಿಲ್ಲೆ ಅಥವಾ ಹೊರ ಪ್ರದೇಶಗಳಿಂದ ಬರುವವರು ಇಂತಹ ವಸ್ತುಗಳನ್ನು ಹೊರಗಿನಿಂದ ತಂದು ಬಳಸುವುದನ್ನು ನಗರಸಭೆಯ ವ್ಯಾಪ್ತಿಯಲ್ಲಿನ ನಿಷೇಧದಿಂದ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಇದಲ್ಲದೆ, ನಗರಸಭೆ ವ್ಯಾಪ್ತಿಯ ಹೊರಗಿರುವ ಪ್ರದೇಶಗಳಲ್ಲಿ ಬಳಕೆ ಮುಂದುವರಿದರೆ ನಗರಸಭೆಯೊಳಗೆ ಮಾತ್ರ ನಿಷೇಧ ಹೇರಿರುವುದರಿಂದ ತ್ಯಾಜ್ಯ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ತ್ಯಾಜ್ಯ ಸಮಸ್ಯೆಗೆ ನಿಷೇಧವೇ ಪರಿಹಾರವೇ? : ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ವ್ಯಕ್ತವಾದ ಅಭಿಪ್ರಾಯದ ಪ್ರಕಾರ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಮಡಿಕೇರಿಯಲ್ಲಿ ಮೊದಲು ತ್ಯಾಜ್ಯ ಸಂಗ್ರಹಣೆ, ಮೂಲದಲ್ಲೇ ಕಸ ವಿಂಗಡಣೆ, ವೈಜ್ಞಾನಿಕ ವಿಲೇವಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಮರ್ಪಕ ಕಸದ ಬುಟ್ಟಿಗಳ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ. ಅಂದರೆ, ಒಂದು ವಸ್ತುವನ್ನು ನಿಷೇಧಿಸುವುದರ ಜೊತೆಗೆ ಅದು ಏಕೆ ತ್ಯಾಜ್ಯವಾಗುತ್ತಿದೆ ಎಂಬುದನ್ನೂ ನೋಡಬೇಕಾಗಿದೆ.
ಅಡಿಕೆ ಬೆಳೆಗಾರರಿಗೆ ಮತ್ತೊಂದು ಪ್ರಶ್ನೆ : ಅಡಿಕೆ ತೋಟದಲ್ಲಿ ಅಡಿಕೆ ಮಾತ್ರ ಆದಾಯದ ಮೂಲವಲ್ಲ. ಅಡಿಕೆ ಹಾಳೆ ಮತ್ತು ತೋಟದಿಂದ ಸಿಗುವ ಇತರ ಉಪ ಉತ್ಪನ್ನಗಳಿಗೂ ಮಾರುಕಟ್ಟೆ ರೂಪುಗೊಂಡಿದೆ. ಅಡಿಕೆ ಹಾಳೆಯಿಂದ ತಟ್ಟೆ, ಬಟ್ಟಲು ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಗಳು ಗ್ರಾಮೀಣ ಭಾಗದಲ್ಲಿ ಪರ್ಯಾಯ ಉದ್ಯೋಗ ಮತ್ತು ಹೆಚ್ಚುವರಿ ಮೌಲ್ಯವರ್ಧನೆಯ ಅವಕಾಶ ಒದಗಿಸುತ್ತವೆ. ಹೀಗಾಗಿ ಅಡಿಕೆ ತಟ್ಟೆಯ ಬಳಕೆಗೆ ನಿರ್ಬಂಧ ಹೇರಿದಾಗ, ಅದರ ಪರಿಣಾಮ ಕೇವಲ ನಗರಸಭೆಯ ತ್ಯಾಜ್ಯ ನಿರ್ವಹಣೆಗೆ ಸೀಮಿತವಾಗುವುದಿಲ್ಲ. ಅಡಿಕೆ ಎಲೆ ಸಂಗ್ರಹಿಸುವವರು, ತಟ್ಟೆ ತಯಾರಿಸುವವರು, ಸಣ್ಣ ವ್ಯಾಪಾರಿಗಳು ಹಾಗೂ ಬಳಕೆದಾರರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಪರಿಸರದ ಹೆಸರಿನಲ್ಲಿ ಅಡಿಕೆ ತಟ್ಟೆ ನಿಷೇಧ ಸರಿಯೇ..? : ಅಡಿಕೆ ಹಾಳೆಯ ತಟ್ಟೆ ಜೈವಿಕವಾಗಿ ಕೊಳೆಯುವ ವಸ್ತು ಎಂಬ ಕಾರಣಕ್ಕೆ ಅದು ಯಾವುದೇ ತ್ಯಾಜ್ಯ ನಿರ್ವಹಣೆಯ ಅಗತ್ಯವಿಲ್ಲದ ವಸ್ತು ಎಂದರ್ಥವಲ್ಲ. ದೊಡ್ಡ ಪ್ರಮಾಣದಲ್ಲಿ ಒಂದೇ ಕಡೆ ಬಳಕೆಯಾದರೆ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿ ವ್ಯವಸ್ಥೆ ಬೇಕಾಗುತ್ತದೆ. ಹೀಗಾಗಿ ಚರ್ಚೆ ‘ಅಡಿಕೆ ಹಾಳೆ ತಟ್ಟೆ ಒಳ್ಳೆಯದೇ, ಕೆಟ್ಟದೇ?’ ಎನ್ನುವುದರಲ್ಲಿ ಮಾತ್ರ ಅಲ್ಲ. ‘ಅದನ್ನು ಬಳಸಿದ ನಂತರ ವೈಜ್ಞಾನಿಕವಾಗಿ ಹೇಗೆ ನಿರ್ವಹಿಸಬೇಕು?’ ಅಡಿಕೆ ಹಾಳೆತಟ್ಟೆಯಲ್ಲಿ ಫಂಗಸ್ ಬಾರದಂತೆ ಹೇಗೆ ದಾಸ್ತಾನು ಮಾಡಬೇಕು, ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕಡೆಗೆ ಹೆಜ್ಜೆ ಇಡಬೇಕಿದೆ. ಇಂದು ಮುಂದುವರಿದ ಎಲ್ಲಾ ದೇಶಗಳಲ್ಲೂ ಪ್ಲಾಸ್ಟಿಕ್ ಬದಲಿಗೆ ಅಡಿಕೆ ಹಾಳೆತಟ್ಟೆಯಂತಹ ವಸ್ತುಗಳೇ ಹೆಚ್ಚು ಬಳಕೆಯಾಗುತ್ತಿರುವುದು ಕೂಡಾ ಗಮನಾರ್ಹವಾದ ವಿಷಯ.
ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ ಬೇಕು; ಮಾರುಕಟ್ಟೆಯೂ ಬೇಕು : ಅಡಿಕೆ ಹಾಳೆ ತಟ್ಟೆಯ ಈ ಬೆಳವಣಿಗೆ ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಂದೇಶವನ್ನೂ ನೀಡುತ್ತದೆ. ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ ಮಾಡುವುದರಿಂದ ರೈತನಿಗೆ ಹೆಚ್ಚುವರಿ ಆದಾಯ ಸಿಗಬಹುದು. ಆದರೆ ಅದಕ್ಕೆ ಸ್ಥಿರ ಮಾರುಕಟ್ಟೆ, ಬಳಕೆಯ ಅವಕಾಶ ಮತ್ತು ನೀತಿ ಬೆಂಬಲವೂ ಅಗತ್ಯ. ಅಡಿಕೆ ಹಾಳೆಯಿಂದ ಉತ್ಪನ್ನ ತಯಾರಿಸುವ ಗ್ರಾಮೀಣ ಉದ್ಯಮ ಬೆಳೆಯಬೇಕಾದರೆ, ಅದರ ಬಳಕೆ ಹೆಚ್ಚಬೇಕು. ಅದೇ ಸಮಯದಲ್ಲಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನೂ ಸಮರ್ಥವಾಗಿ ನಿರ್ವಹಿಸಬೇಕು. ಹೀಗಾಗಿ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆಯೂ ಬೇಕು, ಪರಿಸರಕ್ಕೆ ಪರಿಹಾರವೂ ಬೇಕು. ಎರಡನ್ನೂ ಸಮತೋಲನಗೊಳಿಸುವ ನೀತಿಯೇ ಅಗತ್ಯ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Madikeri municipal authorities have banned the use and sale of arecanut leaf plates, paper cups, paper plates, food containers and certain plastic water bottles within the municipal limits. Traders and the public have opposed the move, arguing that areca leaf plates are biodegradable and widely used in religious, public and government events. They have instead called for better waste segregation, collection and scientific disposal, along with a broader district-level approach.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್‌ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…