ಪ್ರವಾಸಿತಾಣಗಳು ಸ್ವಚ್ಛತೆಯಿಂದ ಕೂಡಿದ್ದರೆ ನೋಡಲು ತುಂಬಾ ಸೊಗಸಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಾಗುತ್ತದೆ. ಈ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳಿಗೂ ಯಾವುದೇ ತೊಂದರೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣವನ್ನು ಪ್ಲಾಸ್ಟಿಕ್ ತ್ಯಾಜ್ಯಮುಕ್ತವಾಗಿಸಲು ಅರಣ್ಯ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ.
ಪಶ್ಚಿಮಘಟ್ಟಗಳ ಸದಾ ಹರಿದ್ವರ್ಣ ಕಾಡುಗಳ ನಡುವೆ ಬೆಳೆದು ನಿಂತಿರುವ ಶಿಖರಗಳು ಮತ್ತು ಅವುಗಳಿಗೆ ಹೊಂದಿಕೊಂಡಿರುವ ನೈಸರ್ಗಿಕ ಗುಹೆಗಳು, ಈ ಸ್ಥಳದ ಬಗ್ಗೆ ಇರುವ ರೋಮಾಂಚಕ ಪೌರಾಣಿಕ ಕಥೆಗಳು ಜನರ ಆಕರ್ಷಣೆಗೆ ಕಾರಣವಾಗಿವೆ. ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ಲಾಸ್ಟಿಕ್ ಬಾಟಲ್ ಗಳು, ಪ್ಲಾಸ್ಟಿಕ್ ಪೇಪರ್ ನಲ್ಲಿ ಕಟ್ಟಿದ ತಿಂಡಿ ತಿನಿಸುಗಳ ಪೊಟ್ಟಣದ ಪೇಪರ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ ತೊಟ್ಟಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಅಲ್ಲಲ್ಲಿ ಶೌಚಾಲಯಗಳು, ಕಸದ ಬುಟ್ಟಿಗಳನ್ನು ಹಾಗೂ ಸೂಚನಾ ಫಲಕಗಳನ್ನು ಹಾಕಲಾಗಿದೆ.
ಹೀಗಿದ್ದರೂ ಪ್ಲಾಸ್ಟಿಕ್ ಬಾಟಲಿಗಳನ್ನಾಗಲಿ ಅಥವಾ ಪ್ಲಾಸ್ಟಿಕ್ ಪೊಟ್ಟಣಗಳನ್ನಾಗಲಿ ಯಾರಾದರೂ ಎಸೆದಿದ್ದರೆ ಗಸ್ತುತಿರುಗುವ ಗ್ರಾಮ ಅರಣ್ಯ ಸಮಿತಿಯವರು ಅದನ್ನು ತೆಗೆದು ಕಸದ ತೊಟ್ಟಿಗೆ ಹಾಕುತ್ತಾರೆ. ಈ ನಿಟ್ಟಿನಲ್ಲಿ ಪ್ರವಾಸಿತಾಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
“ದ ರೂರಲ್ ಮಿರರ್.ಕಾಂ” ವ್ಯಾಟ್ಸಪ್ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..
ಯಾಣದಲ್ಲಿ ಪ್ಲಾಸ್ಟಿಕ್ ಸ್ವಚ್ಚತೆಗೆ ಕೆಲಸ ಮಾಡುತ್ತಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮಸ್ಥರೂ ಸಹ ಸಹಕಾರ ನೀಡುತ್ತಿದ್ದಾರೆ ಎಂದು ಗ್ರಾಮ ಅರಣ್ಯ ಸಮಿತಿಯ ಶೈಲಾ ಪಟಗಾರ ಹೇಳುತ್ತಾರೆ.
ಯಾಣ ಪ್ರವಾಸಿತಾಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಅರಣ್ಯ ಇಲಾಖೆ ಮಹತ್ವಪೂರ್ಣ ಹೆಜ್ಜೆ ಇಟ್ಟಿರುವುದು ಪ್ರಶಂಸನೀಯ ಎಂದು ಪ್ರವಾಸಿಗ ಡಾ. ವೆಂಕಟೇಶ್ ಹೇಳುತ್ತಾರೆ.