ಕರಾವಳಿ ಜಿಲ್ಲೆಯಿಂದ ರಾಜಧಾನಿ ಸಂಪರ್ಕ ಮಾಡುವ ರಾಷ್ಟ್ರೀಯ ಹೆದ್ದಾರಿ….!. ಈ ಹೆದ್ದಾರಿ ಬಗ್ಗೆ ಇಲಾಖೆಗಳು, ಸರ್ಕಾರಗಳು ಬಹಳ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಕರಾವಳಿ ಜಿಲ್ಲೆಯಿಂದ ರಾಜಧಾನಿ ಸಂಪರ್ಕದ ಅತೀ ಅಗತ್ಯವಾಗಿ ಸುವ್ಯವಸ್ಥಿತವಾಗಿ ಈ ಹೆದ್ದಾರಿ ಇರಬೇಕಾಗಿತ್ತು. ಏಕೆಂದರೆ ಇಡೀ ರಾಜ್ಯದ ವಾಣಿಜ್ಯ- ವ್ಯವಹಾರಗಳ ಅಭಿವೃದ್ಧಿಗೆ ಈ ರಸ್ತೆ ಅತೀ ಅಗತ್ಯವಿದೆ. ಆದರೆ ಕಳೆದ ಹಲವು ವರ್ಷಗಳಿಂದ ಈ ಹೆದ್ದಾರಿ ಮಾತ್ರಾ ಸಂಕಷ್ಟದಲ್ಲಿಯೇ ಇದೆ…!.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮತ್ತೆ ಅವ್ಯವಸ್ಥೆಯಿಂದ ಕೂಡಿದೆ. ಅದರಲ್ಲೂ ಶಿರಾಡಿ ಘಾಟಿಯಲ್ಲಿ ಕಾಂಕ್ರೀಟೀಕರಣಗೊಂಡ ಭಾಗದ ನಂತರ ಮಾರನಹಳ್ಳಿಯಿಂದ ಸುಮಾರು ಹಾಸನ ಜಿಲ್ಲೆಯ ಆಲೂರುವರೆಗೂ ಅವ್ಯವಸ್ಥೆಯಿಂದ ಕೂಡಿದೆ. ಅಲ್ಲಿಂದ ಹಾಸನವರೆಗೂ ಅಲ್ಪಸ್ವಲ್ಪ ದುರಸ್ತಿಯಲ್ಲಿದೆ. ಶಿರಾಡಿಯಿಂದ-ಬಿಸಿರೋಡ್ ವರೆಗೂ ಎಂದೂ ಮುಗಿಯದ ಕಾಮಗಾರಿಯಾಗಿದೆ..!. ಹೀಗಾಗಿ ಮಂಗಳೂರು ಬೆಂಗಳೂರು ಹೆದ್ದಾರಿಯ ಅವ್ಯವಸ್ಥೆ ಎಂದೂ ಮಗಿಯದ ಗೋಳಾಗಿದೆ. ಸರ್ಕಾರಗಳು, ಜನಪ್ರತಿನಿಧಿಗಳೂ , ಅಧಿಕಾರಿಗಳೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಕರಾವಳಿ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಬೆಂಗಳೂರು ಸಂಪರ್ಕ ಹೆದ್ದಾರಿ ಅತೀ ವ್ಯವಸ್ಥಿತವಾಗಿರಬೇಕಾಗಿತ್ತು. ಏಕೆಂದರೆ ಕರಾವಳಿ ಜಿಲ್ಲೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳಿಗೆ ಸರಕು ಸಾಗಾಣಿಕೆ ಅಗತ್ಯವಾಗಿ ಆಗಲೇಬೇಕಿದೆ. ಅದರ ಜೊತೆಗೆ ತೈಲಗಳ ಸಾಗಾಟ, ಗ್ಯಾಸ್ ಪೂರೈಕೆಯೂ ಅಗತ್ಯವಾಗಿದೆ. ಹೀಗಾಗಿ ಘನ ವಾಹನಗಳ ಓಡಾಟ ಅನಿವಾರ್ಯ ಹಾಗೂ ಅಗತ್ಯ. ಆದರೆ ಈ ಸರ್ಕಾರಗಳು ಕಳೆದ ಸುಮಾರು 20 ವರ್ಷಗಳಿಂದಲೂ ಸಕಲೇಶಪುರ-ಬಿಸಿರೋಡ್ ವರೆಗೆ ರಸ್ತೆ ಸುಧಾರಣೆಗೆ ಭಾರೀ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮಳೆಗಾಲ ರಾಜಧಾನಿ ಸಂಪರ್ಕದ ಎಲ್ಲಾ ಹೆದ್ದಾರಿಗಳು ಸಂಕಷ್ಟಕ್ಕೆ ಒಳಗಾಗುತ್ತವೆ.
ಶಿರಾಡಿ ಘಾಟ್ ಅವ್ಯವಸ್ಥೆಯಿಂದ ಕೂಡಿತ್ತು, ಅದು ಎರಡು ಹಂತದ ಕಾಂಕ್ರೀಟ್ ಕಾಮಗಾರಿಯಲ್ಲಿ ಪೂರ್ತಿಯಾಗಿತ್ತು. ಅದಾದ ನಂತರ ಮಾರನಹಳ್ಳಿಯಿಂದ ಸಕಲೇಶಪುರದವರೆಗೆ ಈಗ ಸಂಪೂರ್ಣ ಹದಗೆಟ್ಟಿದೆ. ಸಕಲೇಶಪುರದಿಂದ ಆಲೂರವರೆಗೆ ಅಲ್ಲಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ಅಲ್ಲೂ ಸಂಚಾರಕ್ಕೆ ಸಂಕಷ್ಟವಾಗಿದೆ. ಇಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭವಾಯಿತು, ಹಾಸನ ಮತ್ತು ಮಾರನಹಳ್ಳಿ ನಡುವಿನ ಸುಮಾರು ಚತುಷ್ಪಥವನ್ನು ಆರಂಭಿಕ ಅಂದಾಜು ವೆಚ್ಚದಲ್ಲಿ 574 ಕೋಟಿ ರೂಪಾಯಿಯಲ್ಲಿ ನಿಗದಿ ಮಾಡಿದರೂ ಶೇ. 50% ಕಾಮಗಾರಿ ಪೂರ್ಣಗೊಂಡಿಲ್ಲ. ಶಿರಾಡಿ -ಬಿಸಿ ರೋಡ್ ನಡುವಿನ ಗುತ್ತಿಗೆದಾರರು ಬದಲಾದರೂ ಕಾಮಗಾರಿ ವೇಗ ಮಾತ್ರಾ ಪಡೆದಿಲ್ಲ. ಈಗ ವಾಹನ ಚಾಲಕರಿಗೆ ಶಿರಾಡಿಯಿಂದ ಮುಂದೆ ಓಡಾಡುವುದು ಸವಾಲಾಗಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳ ಓಡಾಟ ಇರುತ್ತದೆ. ಎಲ್ಲಾ ವಾಹನಗಳ ಇಂಧನ, ವಾಹನಗಳ ಬಿಡಿಭಾಗಗಳ ಸವಕಳಿ ಸೇರಿದಂತೆ ಇತರ ವೆಚ್ಚಗಳ ಬಗ್ಗೆ ಈ ಸರ್ಕಾರಗಳು, ಜನಪ್ರತಿನಿಧಿಗಳು ಯೋಚನೆ ಮಾಡಿದ್ದಾರೆಯೇ ? ಇದೆಲ್ಲಾ ರಾಷ್ಟ್ರೀಯ ನಷ್ಟ ಅಲ್ಲವೇ ಎನ್ನುವುದು ವಾಹನ ಚಾಲಕರ ಪ್ರಶ್ನೆ.
ಈಚೆಗೆ ಕೆಲವು ಖಾಸಗಿ ವಾಹನಗಳು ಹಾಸನದಿಂದ ನಂತರ ರಸ್ತೆ ಬದಲಾಯಿಸುತ್ತಾರೆ ಕೆಲವರು ಬಿಸಲೆ-ಸುಬ್ರಹ್ಮಣ್ಯದ ಮೂಲಕ ಸಂಚರಿಸಿದರೆ ಇನ್ನೂ ಕೆಲವು ಘನವಾಹನಗಳು ಮೂಡಿಗೆರೆ-ಚಾರ್ಮಾಡಿ ಮೂಲಕ ಮಂಗಳೂರು ತಲಪುತ್ತಾರೆ. ಕಳೆದ ಹಲವು ವರ್ಷಗಳಿಂದಲೂ ಇದೇ ಅವ್ಯವಸ್ಥೆ ಮುಂದುವರಿದಿದೆ. ಸರ್ಕಾರಗಳು ಇನ್ನೂ ಈ ಹೆದ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈಗ ಅಲ್ಲಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಯುತ್ತಿದ್ದರೂ ವೇಗ ಪಡೆಯುತ್ತಿಲ್ಲ. ಇದೇ ಮಾದರಿಯಲ್ಲಿ ಹೆದ್ದಾರಿ ಕಾಮಗಾರಿ ನಡೆದರೂ ಇನ್ನೂ ಹಲವು ವರ್ಷಗಳ ಕಾಲ ಜನರು ಸಂಕಷ್ಟ ಪಡಬೇಕಾಗಬಹುದು ಎನ್ನುವುದು ಪ್ರಯಾಣಿಕರ ಅಳಲು.
Shiradi-Hassan Road Condition pic.twitter.com/54tiGepSIQ
— theruralmirror (@ruralmirror) December 13, 2021
Advertisement