ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಸುವ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ಕೊಂಚ ಏರಿಕೆ ಕಂಡಿದೆ. ಏಪ್ರಿಲ್ ತಿಂಗಳಿನಿಂದ ಬತ್ತಿ ಹೋಗಿದ್ದ ನೇತ್ರಾವತಿ ನದಿಯಲ್ಲಿ ಒಳಹರಿವು ಗುರುವಾರ ಸುರಿದ ಭಾರೀ ಮಳೆಯಿಂದ ಮತ್ತೆ ಆರಂಭಗೊಂಡಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ನೇತ್ರಾವತಿಯಲ್ಲಿ ನೀರಿನ ಹರಿವು
ಗುರುವಾರ ಸಾಯಂಕಾಲದಿಂದ ತಡರಾತ್ರಿಯವರೆಗೂ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಏಪ್ರಿಲ್ 6 ರಿಂದ ಸಂಪೂರ್ಣ ಬತ್ತಿ ಹೋಗಿದ್ದ ನೇತ್ರಾವತಿ ನದಿಯು ಹರಿವು ಆರಂಭಿಸಿದೆ.
ತುಂಬೆ ಡ್ಯಾಂ ನಲ್ಲಿ ಹೆಚ್ಚಿದ ನೀರು
ನೇತ್ರಾವತಿ ಹರಿವು ಹೆಚ್ಚಿದ್ದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡಿದೆ. ಈ ವಾರದ ಆರಂಭದಲ್ಲಿ 4.03 ಮೀಟರ್ಗೆ ನೀರು ಇಳಿಕೆ ಆಗಿತ್ತು. ಈ ಕಾರಣದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿತ್ತು. ರೇಷನಿಂಗ್ ಮೂಲಕ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.
4.03 ಮೀಟರ್ಗೆ ಇಳಿದ ನೀರಿನ ಪ್ರಮಾಣ
ತುಂಬೆ ಡ್ಯಾಂನಲ್ಲಿ ಈ ವಾರದ ಆರಂಭಕ್ಕೆ 4.03 ಮೀಟರ್ಗೆ ನೀರು ಇಳಿಕೆ ಆಗಿದೆ. ಪಶ್ಚಿಮ ಘಟ್ಟಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ನೀರಿನ ಒಳ ಹರಿವು ಇಲ್ಲದಂತೆ ಆಗಿದೆ. ಹೀಗಾಗಿ ಮಂಗಳೂರಿನಲ್ಲಿ ಸದ್ಯ ಎರಡು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಈ ನಿಯಮದಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ.
ಈ ಹಿಂದೆ ತುಂಬೆ ಡ್ಯಾಂನಿಂದ ನೀರು ಪೂರೈಕೆ ವ್ಯತ್ಯಯವಾದಾಗ, ಬೇಸಿಗೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿತ್ತು. ಪಾಲಿಕೆ ವ್ಯಾಪ್ತಿಯ 60 ವಾರ್ಡ್ಗಳಲ್ಲಿ ಹಲವು ಟ್ಯಾಂಕರ್ಗಳ ಮೂಲಕ ಅಗತ್ಯವಿದ್ದಲ್ಲಿಗೆ ನೀರು ಪೂರೈಸುತ್ತಿತ್ತು.
ಆದರೆ, ಈ ಬಾರಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬಾವಿಗಳಲ್ಲೂ ನೀರು ಇಲ್ಲವಾಗಿದೆ. ಇರುವ ಬಾವಿಗಳ ನೀರು ಕೆಸರಿನಿಂದ ತುಂಬಿದ್ದು, ನೀರು ಇನ್ನೇನು ಬತ್ತಿ ಹೋಗುವುದರಲ್ಲಿದೆ. ಹೀಗಾಗಿ ಹಣ ಕೊಡ್ತೀವಿ ಅಂದ್ರೂ ಕುಡಿಯುವ ನೀರಿನ ಪೂರೈಕೆ ಜಟಿಲವಾಗುತ್ತಿದೆ.
ಕೆರೆಗಳಲ್ಲಿ ನೀರು ಇದ್ರೂ ನೋ ಯೂಸ್!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗುಜ್ಜರಕೆರೆ, ಕಾವೂರು ಕೆರೆ ಹೀಗೆ ಹಲವು ಕೆರೆಗಳಿದ್ರೂ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧೀಕರಣ ವ್ಯವಸ್ಥೆ ಇಲ್ಲಿದಿರುವುದರಿಂದ ಅದನ್ನು ಪೂರೈಸುವಂತಿಲ್ಲ.
ಹೀಗಾಗಿ ವಸತಿ ಸಮುಚ್ಚಯ, ವಾಣಿಜ್ಯ ಮಳಿಗೆಗಳು ಸಮರ್ಪಕ ನೀರು ಇಲ್ಲದೇ ಸಂಕಷ್ಟಪಡುವಂತಾಗಿದೆ. ಒಟ್ಟಿನಲ್ಲಿ ಮಹಾನಗರ ಪಾಲಿಕೆ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಮಳೆ ಸುರಿಯುವುದನ್ನೇ ಮುಂದೆ ನೋಡ್ತಿದೆ.