ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು

May 11, 2025
7:15 AM
ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ. ಧನಾತ್ಮಕ ವಿಚಾರಗಳನ್ನು ಹತ್ತಿರ ಸುಳಿಯಗೊಡದಿರುವುದು ಸ್ವ-ಭಾವ. ಅದಕ್ಕೆ ‘ಮತ್ತೊಬ್ಬರು’ ಬಲಿಯಾಗಬೇಕು ಅಷ್ಟೇ! ಕಿವಿ ಕಚ್ಚುವ ಬುದ್ಧಿ ಅದರ ಗುಣ. ವಿಷ ಸರ್ಪಕ್ಕಿಂತಲೂ ತೀಕ್ಷ್ಣ. ಸರ್ಪ ಕಚ್ಚಿದರೆ ವ್ಯಕ್ತಿ ಸಾಯುತ್ತಾನೆ. ಆದರೆ ಸದಾ ಕಿವಿ ಕಚ್ಚುವವರು ನಿತ್ಯ ಸಾಯಿಸುತ್ತಿರುತ್ತಾರೆ.

ಒಬ್ಬನ ಉತ್ಕರ್ಷವನ್ನು ಸಹಿಸದ ಮಂದಿ ಹೇಗಾದರೂ ಮಾಡಿ ಅಪಕರ್ಷದತ್ತ ಸೆಳೆಯುವ ಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕಲ್ಪಿತ ಸಂಗತಿಗಳನ್ನು ಹರಿಯಬಿಟ್ಟು ಖುಷಿ ಪಡುತ್ತಾರೆ. ಒಂದು ವಿಷಯವನ್ನು ಹತ್ತಾರು ರೂಪದಲ್ಲಿ ನವಮಾಧ್ಯಮಗಳಲ್ಲಿ ಹರಿಯಬಿಡುತ್ತಾರೆ. ಇಲ್ಲಸಲ್ಲದ ಮಾತುಗಳಿಂದ ಮನಸ್ಸಿಗೆ ಅಸ್ವಸ್ಥತೆಯನ್ನು ತರುವ ಮಂದಿ ದೂರ ಇಲ್ಲ, ನಮ್ಮ ಮಧ್ಯೆಯೇ ಇದ್ದಾರೆ. ಅವರು ಅಪ್ಪಟ ಸ್ನೇಹಿತನಂತೆ ‘ಫೋಸ್’ ಕೊಡುತ್ತಿರಬಹುದು. ಅಭಿಮಾನಿಯಂತೆ ಸುತ್ತುತ್ತಿರಬಹುದು. ಆಪದ್ಭಾಂದವನಂತೆ ನಟಿಸುವ ಧೂರ್ತರಿರಬಹುದು. ಮಾತುಮಾತಿಗೂ ಪ್ರಶಂಸೆಯನ್ನು ಹರಿಯಬಿಡುವ ವಿಚಿತ್ರ ಸನ್ನಿಯುಳ್ಳವರಿರಬಹುದು. ಮಾತಿಗಿಂತ ಮೊದಲೇ ಬಾಯಿತುಂಬಾ ನಕ್ಕು ನಗೆಪಾಟಲಾಗುವವರು.. ಹೀಗೆ ಯಾವ ರೂಪದಿಂದ ಕಾಲೆಳೆಯುತ್ತಾರೋ ಗೊತ್ತಾಗದು.

Advertisement
Advertisement

ಈಚೆಗೆ ಓರ್ವ ಭಾಷಣಗಾರರು ಮಾತಿನ ಮಧ್ಯೆ ವಿನೋದಕ್ಕೆ ಹೇಳಿದರು, “ಮಂಥರೆಯಂಥವರು ಪ್ರತಿ ಮನೆಯಲ್ಲಿರಬೇಕು.”! ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ‘ಮಂಥರೆಯಂತಹ ಮನೆಹಾಳಿ ಮನಸ್ಸು ಪುರುಷ, ಮಹಿಳೆ ಯಾರಲ್ಲೇ ಇರಲಿ ಆ ಮನೆಯ ಅವಸ್ಥೆ ಹೇಗಿದ್ದೀತು?’  ಹಿಂದೆಲ್ಲಾ ಕೂಡುಕುಟುಂಬಗಳಿದ್ದಾಗ ಮನೆಯಲ್ಲಿ ಹತ್ತಿಪ್ಪತ್ತು ಸದಸ್ಯರಿರುತ್ತಿದ್ದರು. ಅಲ್ಲಿ ವೈಮನಸ್ಸುಗಳು ರಾಚುತ್ತಿರಲಿಲ್ಲ. ಇದ್ದರೂ ಪ್ರಕಟವಾಗುತ್ತಿರಲಿಲ್ಲ. ಯಾಕೆ ಹೇಳಿ? ಮಂಥರೆಯಂತಹವರು ಅಲ್ಲಿಲ್ಲ. ಋಣಾತ್ಮಕ ವಿಚಾರಗಳು ಪ್ರಕಟವಾಗದಂತೆ ಹಿರಿಯರಲ್ಲಿ ಎಚ್ಚರವಿತ್ತು. ಹಿರಿಯರ ಮಾತನ್ನು ಪಾಲಿಸುವ ಕಿರಿಯರಿದ್ದರು.

ರಾಮಾಯಣದ ‘ಮಂಥರೆ’ಗೆ ವೈಯಕ್ತಿಕವಾದ ಕಾಮನೆಗಳು ಇದ್ದಿರಲಿಲ್ಲ. ರಾಣಿ ಕೈಕೆಯಿ ಮತ್ತು ಭರತನಿಗೆ ಅನ್ಯಾಯವಾಗುತ್ತದೆ ಎನ್ನುವ ಕಾರಣದಿಂದ ಅಯೋಧ್ಯೆಯ ಕುಟುಂಬದಲ್ಲಿ ಹುಳಿ ಹಿಂಡಿದಳು. ಪರಿಣಾಮ..? ಬದುಕಿನಲ್ಲಿ ನಾವು ಏನು ಮಾಡದಿದ್ದರೂ ತೊಂದರೆಯಿಲ್ಲ. ಚಾಡಿ ಮಾತಿನಿಂದ ಇನ್ನೊಬ್ಬರ ಬದುಕಿಗೆ ಎರವಾಗುವುದು ಬೇಡ. ಮಂಥರೆಯಂತಹ ಗಯ್ಯಾಳಿಗಳು ಹುಟ್ಟಿ ಬಾರದಿರಲಿ.

ರಾಜಕೀಯ ಕ್ಷೇತ್ರಕ್ಕೆ ಬರೋಣ. ನಮ್ಮ ರಾಜಕಾರಣಿಯು ‘ತಾನು ಧನಾತ್ಮಕ ವಿಚಾರಗಳನ್ನು ಮಾತನಾಡಲಾರೆ’ ಎಂದು ಶಪಥವನ್ನೇ ಮಾಡಿರುವಂತಿದೆ. ಶುಷ್ಕ ಮಾತುಗಳ ಭಾಷಣ ಹೊರತು, ಉತ್ತಮ ಸಂದೇಶ ನೀಡುವ ಮಾತುಗಳಿಗೆ ಬಡತನ ಬಂದಿದೆ. ಹಗುರ ಮಾತುಗಳು, ಢಾಳು ವಿಚಾರಗಳು, ಬೈಗುಳಗಳು, ಮೂದಲಿಕೆಗಳು.. ಬಟಾಬಯಲಾಗಿವೆ. ಇದಕ್ಕಾಗಿ ಮಾಧ್ಯಮಗಳು ಕಾಯುತ್ತಿರುತ್ತವೆ.

ಇನ್ನೊಬ್ಬರ ವೈಯಕ್ತಿಕ ಬದುಕಿನಲ್ಲಿ ತನಗೆ ಸಂಬಂಧವಿಲ್ಲದಿದ್ದರೂ ಮೂಗುತೂರಿಸುವ ಮಂದಿ ಎಷ್ಟಿಲ್ಲ. ಅವರಿಗೆ ಪರದೂಷಣೆಯೇ ಮಂತ್ರ. ‘ತಾನು ಮಾತ್ರ ಸರಿ, ಮಿಕ್ಕುಳಿದವರೆಲ್ಲಾ ಗಮಾರರು’ ಎಂಬ ಭಾವನೆ. ‘ತಾನು ಹೇಳಿದ್ದೇ ಅಂತಿಮ. ತಾನೊಬ್ಬ ಪ್ರಾಮಾಣಿಕ ವ್ಯಕ್ತಿ. ನೇರ ನಡೆ ನುಡಿ ತನ್ನ ಸ್ವಭಾವ.’ ಹೀಗೆ ಹೆಗಲು ಮುಟ್ಟಿಕೊಳ್ಳುತ್ತಾ, ಬೆನ್ನುತಟ್ಟಿಕೊಳ್ಳುತ್ತಾ ಇರುವ ಕಾರ್ಯಸಾಧಕರ ಸಮಾಜದಲ್ಲಿ ನಿಜ ಪ್ರಾಮಾಣಿಕತೆಗೆ ಬೆಲೆಯಿಲ್ಲ.

Advertisement

ನನ್ನ ಮಗಳ ಮದುವೆಯ ಸಂದರ್ಭ. ನಿಶ್ಚಿತಾರ್ಥವನ್ನು ಸೀಮಿತ ಬಂಧುಗಳ ಸಾಕ್ಷಿಯಾಗಿ ಮಾಡಬೇಕೆನ್ನುವ ದೂರದೃಷ್ಟಿಯಿತ್ತು. ಹಾಗಾಗಲಿಲ್ಲ. ಏನಿಲ್ಲವೆಂದರೂ ಇನ್ನೂರೈವತ್ತು ಮುನ್ನೂರು ಮಂದಿಯ ಬಾಯಿ ಸಿಹಿಮಾಡಿದ ಸಂತೃಪ್ತಿಯಿತ್ತು. ಇದು ನನ್ನ ಖಾಸಗಿ ಬದುಕಿನ ಒಂದೆಳೆ. (ಇಲ್ಲಿ ನಾನು, ನನ್ನ ಎನ್ನುವ ಪದಗಳು ವಾಕ್ಯದ ಪೋಣಿಕೆಗಾಗಿ ಮಾತ್ರ. ಅಹಮಿಕೆ ಅಲ್ಲ) ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮ್ಮನಸ್ಸಿನ ಸ್ನೇಹಿತರು, ಬಂಧುಗಳು ಹರಸಿದ್ದರು. ಇವರ ಮಧ್ಯೆ ಮಗುಮ್ಮಾಗಿ ಇರುವ ಒಂದಷ್ಟು ಮಂದಿಯ ‘ಮಂಥರೆ ಮನಸ್ಸಿನ’ ವಿಕಾರಗಳಿಗೆ ಕಿವಿಯಾಗಬೇಕಾಯಿತು. “ಕಾರಂತರಲ್ಲಿ ತುಂಬಾ ಹಣವಿದೆ. ಇಲ್ಲದಿದ್ದರೆ ಇಷ್ಟು ಗೌಜಿ ಮಾಡಲು ಸಾಧ್ಯವೇ’, ‘ಒಂದು ವಾಹನ ತೆಕ್ಕೊಳ್ಳಲು ಗತಿಯಿಲ್ಲ. ಇಷ್ಟು ಗೌಜಿ ಬೇಕಿತ್ತಾ’, ‘ಇಷ್ಟು ದುಂದುವೆಚ್ಚ ಯಾಕೆ ಬೇಕು. ಸರಳವಾಗಿ ಮಾಡಬಹುದಲ್ಲಾ,’.. ಹೀಗೆ ಹತ್ತಾರು ಧ್ವನಿಗಳು. ನನ್ನಲ್ಲಿ ಹಣ ಇದೆ. ಸರಿ, ಏನೀಗ? ಅದು ಬೆವರಿನ ಸಂಪಾದನೆ. ಅದಕ್ಕೆ ಹೊಟ್ಟೆ ನೋವು ಯಾಕೆ? ಸಂಕಟ ಯಾಕೆ? ವಾಹನ ಬೇಕೋ ಬೇಡ್ವೋ ಎಂದು ನಿರ್ಧರಿಸಬೇಕಾದವರು ಯಾರು? ಕಾರ್ಯಕ್ರಮದಲ್ಲಿ ಹೊಟ್ಟೆತುಂಬಾ ಉಂಡು, ತೇಗಿದ ಬಳಿಕ ‘ದುಂದುವೆಚ್ಚ’ ಎನ್ನಲು ಏನು ಯೋಗ್ಯತೆ, ಅರ್ಹತೆ? ‘ಏನೇ ಆಗಲಿ ಮಾರಾಯ್ರೆ. ಮಗಳಿಗೆ ಸಕಾಲದಲ್ಲಿ ಮದುವೆ ಮಾಡಿದ್ರಲ್ಲಾ. ಉತ್ತಮ ಕೆಲಸ’ ಎಂದು ಹೇಳಲು ನಾಲಗೆಯ ಶಕ್ತಿ ಯಾಕೆ ಕ್ಷೀಣವಾಯಿತು?

ಕೆಲವು ಕಚೇರಿಗಳ ವಿದ್ಯಮಾನಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಂಸ್ಥೆ ಕುರಿತು, ಅಲ್ಲಿನ ವರಿಷ್ಠರ ಕುರಿತು ಹಗುರ ಮಾತನಾಡುವ ಮಂದಿ. ‘ಅವರ ಚಾರಿತ್ರ್ಯವನ್ನು, ಶೀಲವನ್ನು ಶಂಕಿಸುವ’ ಮಂಥರೆ ಮನಸ್ಸು. ಸಿಬ್ಬಂದಿಯೋರ್ವನಿಗೆ ಆ ಸಂಸ್ಥೆಯಲ್ಲಿ ಉದ್ಯೋಗ ಎನ್ನುವುದು ಹೊಟ್ಟೆಪಾಡು. ದುಡಿಯುವ ಸಂಸ್ಥೆಗೆ ಕಲ್ಲೇಟು ನೀಡುವ ಮನಃಸ್ಥಿತಿ ಯಾಕೆ? ಯಾರೇ ಆಗಲಿ, ಶೀಲವನ್ನು ಶಂಕಿಸಿದರೆ ಸುಮ್ಮನಿರಲು ಸಾಧ್ಯವೇ? ಇಂತಹ ಸನ್ನಿವೇಶದಲ್ಲಿ ಹೇಳಿದವನ/ಳ ಚಾರಿತ್ರ್ಯವೂ ಪ್ರಶ್ನಾತೀತ. ಒಂದು ನೆನಪಿಟ್ಟುಕೊಳ್ಳಬೇಕು, ಚಾರಿತ್ರ್ಯವನ್ನು ಯಾರು ಸಂಶಯಿಸುತ್ತಾರೋ ಅಂತಹವರ ಚಾರಿತ್ರ್ಯವು ಹಳಿಯಲ್ಲಿರುವುದಿಲ್ಲ!

ಇದು ಕಲಿಯುಗ. ಮಂಥರೆಯದು ತ್ರೇತಾಯುಗ. ಮಂಥರೆ ಬಿಟ್ಟು ಹೋದ ಗುಣಗಳನ್ನು ‘ಪಕ್ವತೆ’ಗಳೆಂದು ಸ್ವೀಕರಿಸಿ ಬದುಕಿನಲ್ಲಿ ಮಿಳಿತಗೊಳಿಸಿದ್ದೇವೆ. ಅದು ಬದ್ಧತೆಯ ರೂಪದಲ್ಲಿ ‘ನಿಧಾನ ವಿಷ’ವಾಗಿ ಬದುಕನ್ನು ನುಂಗುತ್ತಿದೆ. ನಮ್ಮ ವಾಹಿನಿಗಳನ್ನು ನೆನಪಿಸಿಕೊಳ್ಳಿ. ಸ್ಟುಡಿಯೊದೊಳಗೆ ‘ಮಂಥರೆ’ಯ ಮನಸ್ಸು ಆವರಿಸಿದಂತೆ ಕಾಣುವುದಿಲ್ವಾ.

ಯಕ್ಷಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರು ಶ್ರೀರಾಮ ಪಾತ್ರಧಾರಿಯಾಗಿ ಒಂದು ಮಾತನ್ನು ಹೇಳಿದ್ದರು,  “ಭರತನಂತಹ ಒಬ್ಬ ಮಗನನ್ನು ಹೆರಬೇಕಾದ್ರೆ ಆ ತಾಯಿಯ ಗರ್ಭದಲ್ಲಿ ನಂಜು ಇದೆ ಅಂತ ಬುದ್ಧಿ ಇದ್ದವರು ಹೇಳಲಾರರು.” ಹಾಗಾದರೆ ನಂಜು ಎಲ್ಲಿ ಸೇರಿತು. ಮಂಥರೆಯ ರೂಪದಲ್ಲಿ ನಂಜು ವಿಷವಾಯಿತು.

ವಿಷತುಂಬಿದ ಸರ್ಪವು ಸ್ನೇಹಕ್ಕೆ ಯೋಗ್ಯ. ಆದರೆ ಚಾಡಿಕೋರರು ಸರ್ಪಕ್ಕಿಂತ ಸಾವಿರ ಪಟ್ಟು ವಿಷವನ್ನು ತನ್ನೊಳಗೆ ಇಟ್ಟುಕೊಂಡುದರಿಂದ ಅವರಿಂದ ದೂರವಿರುವುದು ಲೇಸು.

Advertisement

“ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ, ಇನ್ನಷ್ಟು ಬರಹಗಳನ್ನು ಓದಿರಿ.. | ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿ..

ಯಾರಿವಳು, ಮಂಥರೆ? ದಶರಥನ ಪತ್ನಿ ಕೈಕೆಯಿ. ಇವಳ ದಾಸಿ ಮಂಥರೆ. ಕೈಕೆಯಿಯ ತಂದೆ ಅಶ್ವಪತಿ ಮಹಾರಾಜ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸಿಕ್ಕಿದ ಮಗು. ಆ ಮಗು ವಿಕಾರ ಸ್ವರೂಪದ್ದಾಗಿತ್ತು. ಮಾನವೀಯ ನೆಲೆಯಲ್ಲಿ ಮಗುವನ್ನು ಸಾಕಿದ. ಎಳವೆಯಿಂದಲೇ ಕೈಕೆಯಿ ಮತ್ತು ಮಂಥರೆ ಗಾಢ ಸ್ನೇಹಿತೆಯರಾಗಿ ಬೆಳೆದರು. ಕೈಕೆಯಿಯು ಅಯೋಧ್ಯೆಯ ಸೊಸೆಯಾಗುವಾಗ ಮಂಥರೆ ಕೂಡಾ ದಾಸಿಯಾಗಿ ಜತೆಗೆ ಬಂದಿದ್ದಳು. ರಾಣಿಯ ದಾಸಿಯಾದುದರಿಂದ ಅವಳಿಗೆ ಮುಕ್ತ ಪ್ರವೇಶವಿತ್ತು.

ಹುಟ್ಟುವಾಗಲೇ ಕುಬ್ಜೆಯಾಗಿದ್ದಳು. ಅವಳ ವಿಕಾರ ಸ್ವರೂಪದಿಂದಾಗಿ ಅರಮನೆಯಲ್ಲಿ ನಗೆಪಾಟಲಾಗಿದ್ದಳು. ತನಗೆ ಸಂಬಂಧಪಡದ ವಿಚಾರದಲ್ಲಿ ಮಾತನಾಡುವ ವಾಚಾಳಿ. ಅಯೋಧ್ಯೆಯ ರಾಜಕೀಯ, ಹಿರಿಯ-ಕಿರಿಯ ರಾಣಿಯರ ವೈಯಕ್ತಿಕ ವಿಚಾರಗಳನ್ನು ತನ್ನ ಮೂಗಿನ ನೇರಕ್ಕೆ ವಿಮರ್ಶಿಸುತ್ತಿದ್ದಳು. ಕೈಕೆಯ ಕಿವಿಯನ್ನೂ ತುಂಬಿಸುತ್ತಿದ್ದಳು. ಅವಳಿಗೆ ಕೈಕೆಯಿ ಮತ್ತು ಭರತ ಇವರಿಬ್ಬರ ಹೊರತು ಮಿಕ್ಕೆಲ್ಲಾ ಗೌಣ. ಅವಳದು ಋಣಾತ್ಮಕ ವಿಚಾರಗಳ ಗೂಡು.

ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಲು ದಶರಥನು ಮಂತ್ರಿ ಸುಮಂತ್ರ ಹಾಗೂ  ಗುರುಗಳಾದ ವಶಿಷ್ಟರೊಂದಿಗೆ ಸಮಾಲೋಚಿಸುತ್ತಾನೆ. ಇದನ್ನು ಮಂಥರೆಯು ಆಲಿಸಿ, “ರಾಮ ಪಟ್ಟಕ್ಕೇರಿದರೆ, ಸೀತೆ ಮಹಾರಾಣಿಯಾಗುತ್ತಾಳೆ. ಕೌಸಲ್ಯೆ ರಾಜಮಾತೆಯಾಗುತ್ತಾಳೆ. ನೀನು, ನಿನ್ನ ಮಗ ಅವರ ಊಳಿಗ ಮಾಡಬೇಕಾಗುತ್ತದೆ. ನಿನ್ನ ಪ್ರತಿಷ್ಠೆ ನಾಶವಾಗುತ್ತದೆ.” ಹೀಗೆ ರಾಣಿಯ ಮನಪರಿವರ್ತನೆ ಆಗುವಷ್ಟು ಋಣಾತ್ಮಕ ವಿಚಾರಗಳನ್ನು ತುಂಬಿಸಿದ್ದರಿಂದ ಆಕೆ ಮಂಥರೆಯ ಕೈಗೊಂಬೆಯಾದಳು.

“ಹಿಂದೆ ಶಂಬರಾಸುರ ಕಾಳಗದಲ್ಲಿ ದಶರಥ ಮಹಾರಾಜ ಎರಡು ವರಗಳನ್ನು ನೀಡಿದ್ದು ನೆನಪಿದೆಯೇ. ಅದು ರಾಜನಲ್ಲೇ ನ್ಯಾಸವಾಗಿದೆ. ಅದನ್ನು ಈಗ ಬಳಸು,” ಎಂದಳು. ತನ್ನ, ಮಗನ ಭವಿತವ್ಯವನ್ನು ಲಕ್ಷಿಸಿದ ಕೈಕೆಯಿ ಮಲಿನಾಂಬರಭೂಷಿತೆಯಾಗಿ ಕೋಪಾಗಾರವನ್ನು ಸೇರಿದಳು. ದಶರಥನಿಗೆ ದಿಗಿಲಾಯಿತು. ಮಡದಿಯನ್ನು ಒಲಿಸಲು ಯತ್ನಿಸಿದನು. “ಹಿಂದೆ ನೀವು ನೀಡಿದ ವರಗಳು ಈಗ ಬೇಕು. ಒಂದನೇ ವರವಾಗಿ ಭರತನಿಗೆ ಪಟ್ಟ, ಎರಡನೇ ವರವಾಗಿ ರಾಮನು ಹದಿನಾಲ್ಕು ವರುಷ ಕಾಡಿಗೆ ತೆರಳಬೇಕು,” ಎಂದಳು.

Advertisement

ದಶರಥನಿಗೆ ಚಿಕ್ಕು ತೋಚದಾಯಿತು. ನಿಂತಲ್ಲೇ ಕುಸಿದನು. ವಿಚಾರ ತಿಳಿದ ಶ್ರೀರಾಮನು, “ನಿಮ್ಮ ಮಾತೇನು? ತಂದೆಯವರ ಮಾತೇನು? ಅಕ್ಷರಶಃ ಪಾಲಿಸುತ್ತೇನೆ.” ಎಂದು ವನವಾಸಕ್ಕೆ ಸಿದ್ಧನಾದನು. ಸೀತೆಯೂ ಹಿಂಬಾಲಿಸಿದಳು. ಲಕ್ಷ್ಮಣನೂ ಜತೆ ಸೇರಿದನು. ಮೂವರಿಗೂ ನಾರುಡೆಯನ್ನು ಕೈಕೆಯಿಯೇ ನೀಡಿದಳು.

ವಶಿಷ್ಟರ ನಿಮಂತ್ರಣದಂತೆ ಭರತನು ಅಯೋಧ್ಯೆ ಸೇರುತ್ತಾನೆ. ವಿಚಾರ ತಿಳಿದು ಮರುಗುತ್ತಾನೆ. ತಾಯಿಯ ತಲೆಯನ್ನು ಕಡಿಯಲು ಉದ್ಯುಕ್ತನಾಗುತ್ತಾನೆ. ಮಂಥರೆಯನ್ನು ಹಿಂಸಿಸುತ್ತಾನೆ. ವಶಿಷ್ಟರ ಮಧ್ಯಪ್ರವೇಶದಿಂದ ಭರತನ ಕ್ರೋಧ ಕಡಿಮೆಯಾಗುತ್ತದೆ. ಮೃತನಾಗಿದ್ದ ದಶರಥ ಮಹಾರಾಜನ ಕಳೇಬರವನ್ನು ವಿದ್ಯುಕ್ತವಾಗಿ ದಹನ ಮಾಡಿ, ಅಪರ ಸಂಸ್ಕಾರದತ್ತ ಮನ ಮಾಡುತ್ತಾನೆ. ರಾಮನನ್ನು ಕರೆತರಲು ಚಿತ್ರಕೂಟದತ್ತ ಧಾವಿಸುತ್ತಾನೆ. ಆತನ ಪಾದುಕೆಯೊಂದಿಗೆ ಬಂದು ನಂದಿಗ್ರಾಮದಲ್ಲಿ ರಾಜ್ಯವನ್ನಾಳುತ್ತಾನೆ.

ಇಲ್ಲಿ ಮಂಥರೆಯು ಚಾಡಿಕೋರಳಾಗಿ, ಗೃಹಚ್ಛಿದ್ರ ಮಾಡುವ ಮನಸ್ಥಿತಿ ಹೊಂದಿದವಳಾಗಿ, ಮಾತಿನ ನಿಪುಣತ್ವದಲ್ಲಿ ಕೈಕೆಯನ್ನು ಬಲೆಗೆ ಕೆಡವಿ ತನ್ನ ಕುಟಿಲ ಬುದ್ಧಿಗೆ ರೂಪಕವಾಗಿ ಕಾಣುತ್ತಾಳೆ.

“ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ, ಇನ್ನಷ್ಟು ಬರಹಗಳನ್ನು ಓದಿರಿ.. | ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿ..

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
May 16, 2025
9:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group