ಶಸ್ತ್ರಾಸ್ತ್ರಗಳನ್ನು ಆಮದು ಮಾಡುಕೊಳ್ಳುವ ಟಾಪ್ ರಾಷ್ಟ್ರಗಳಲ್ಲಿ ಭಾರತ ಮೊದಲನೇಯ ಸ್ಥಾನದಲ್ಲಿದೆ. ಆದರೆ ಈಗ ಭಾರತ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ದೇಶವಾಗಿ ನಿಧಾನವಾಗಿ ಹೊರಹೊಮ್ಮುತ್ತಿದೆ. ಇದರ ಭಾಗವಾಗಿ ಈಗ ಭಾರತ ವಿಶ್ವದ 12 ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಲು ಮಾತುಕತೆ ನಡೆಸುತ್ತಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಡಿಆರ್‌ಡಿಒ ವಿಜ್ಞಾನಿಗಳು 1989ರಲ್ಲೇ ಅಗ್ನಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು. ಈ ಸಂದರ್ಭದಲ್ಲಿ ಧ್ವನಿಗಿಂತ ವೇಗವಾಗಿ ಸಂಚರಿಸುವ ಸೂಪರ್ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲು ಭಾರತ ಮುಂದಾಯಿತು. ಆದರೆ ಅದಕ್ಕೆ ಬೇಕಾದ ತಂತ್ರಜ್ಞಾನ ಭಾರತದ ಬಳಿ ಇರಲಿಲ್ಲ. ಅಣುಬಾಂಬ್ ಪರೀಕ್ಷೆ ಮಾಡಿದ ಬಳಿಕ ಅಮೆರಿಕ ಭಾರತದ ಮೇಲೆ ಹಲವು ದಿಗ್ಭಂಧನ ವಿಧಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾದ ಸಂಬಂಧ ಚೆನ್ನಾಗಿತ್ತು. ಕೊನೆಗೆ ಭಾರತ ಮತ್ತು ರಷ್ಯಾದ ಜಂಟಿ ಹೂಡಿಕೆಯಲ್ಲಿ ಬ್ರಹ್ಮೋಸ್ ಕಂಪನಿ 1998ರಲ್ಲಿ ಸ್ಥಾಪನೆಯಾಯಿತು. ಕ್ಷಿಪಣಿ ಮನುಷ್ಯ ಅಬ್ಧುಲ್ ಕಲಾಂ ಮತ್ತು ರಷ್ಯಾದ ರಕ್ಷಣಾ ಸಚಿವ ಮಿಖಾಲಿವೋ ಫೆಬ್ರವರಿ 12 ರಂದು ಮಾಸ್ಕೋದಲ್ಲಿ ಸಹಿ ಹಾಕಿದರು. ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ರಷ್ಯಾದ ನಡುವಿನ ಜಂಟಿ ಉದ್ಯಮವಾಗಿದೆ. ಬಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಗಳನ್ನು ಪ್ರತಿನಿಧಿಸಲು ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರನ್ನು ಇಡಲಾಯಿತು. 250 ಮಿಲಿಯನ್ ಡಾಲರ್ ಹೂಡಿಕೆಯ ಕಂಪನಿಯಲ್ಲಿ ಭಾರತದ ಪಾಲು ಶೇ.50.5 ಇದ್ದರೆ ರಷ್ಯಾದ ಪಾಲು ಶೇ.49.5 ಇದೆ.
ಬ್ರಹ್ಮೋಸ್ ವಿಶೇಷತೆ ಏನು? : ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ.ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.
ಬ್ರಹ್ಮೋಸ್ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಾಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು 2001ರ ಜೂನ್ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ.
ಯಾವೆಲ್ಲ ದೇಶಗಳು ಆಸಕ್ತಿ ತೋರಿಸಿವೆ? : ಫಿಲಿಪೈನ್ಸ್ ಬ್ರಹ್ಮೋಸ್ ನೆವಿ ಮಿಸೈಲ್ ಖರೀದಿ ಸಂಬಂಧ 375 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ 2022ರಲ್ಲಿ ಸಹಿ ಹಾಕಿದೆ. ಈ ವರ್ಷದ ಅಂತ್ಯಕ್ಕೆ ಕ್ಷಿಪಣಿ ರಫ್ತು ಆಗುವ ಸಾಧ್ಯತೆಯಿದೆ. ಈಗಾಗಲೇ 12 ದೇಶಗಳ ಜೊತೆ ಭಾರತ ಬ್ರಹ್ಮೋಸ್ ಕ್ಷಿಪಣಿ ರಫ್ತು ಸಂಬಂಧ ಮಾತುಕತೆ ನಡೆಸುತ್ತಿದೆ. ಈ ಜುಲೈ ತಿಂಗಳಿನಲ್ಲಿ ಅರ್ಜೆಂಟೀನಾ ರಕ್ಷಣಾ ಸಚಿವರ ಜೊತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಕತೆ ನಡೆಸಿದ್ದಾರೆ. ಬ್ರಹ್ಮೋಸ್ ಭಾರತದಲ್ಲಿ ಪ್ರಯೋಗ ಯಶಸ್ವಿಯಾಗಿದ್ದು ಈಗಾಗಲೇ ಮೂರು ಸೇನೆಗೆ ಸೇರ್ಪಡೆಯಾಗಿದೆ. ನಿಖರವಾಗಿ ಗುರಿಯನ್ನು ಹೊಡೆಯುವುದು ಅಲ್ಲದೇ ಬೆಲೆಯೂ ಕಡಿಮೆ. ಅಧಿಕೃತವಾಗಿ ಈ ಕ್ಷಿಪಣಿಯ ಬೆಲೆ ಎಷ್ಟು ಎಂಬುದನ್ನು ಸರ್ಕಾರ ತಿಳಿಸದೇ ಇದ್ದರೂ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಒಂದು ಕ್ಷಿಪಣಿಯ ಬೆಲೆ 35 ಕೋಟಿ ರೂ. ಇದೆಯಂತೆ.. ಇದರ ಜೊತೆ ಭಾರತದ ವಿಜ್ಞಾನಿಗಳ ಬಗ್ಗೆ ನಂಬಿಕೆ ಈಗ ವಿಶ್ವಕ್ಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮೋಸ್ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿಸಿವೆ.
ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್ : ಈ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಅಭಿನವ್ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.
ಶಸ್ತ್ರಾಸ್ತ ರಫ್ತು ಹೆಚ್ಚಳ : ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಕಾರಣ ಈಗ ಶಸ್ತ್ರಾಸ್ತ್ರಗಳನ್ನು ಭಾರತ ಹೆಚ್ಚು ರಫ್ತು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2014-15 – 1,941 ಕೋಟಿ ರೂ., 2017-18 – 4,682 ಕೋಟಿ ರೂ., 2018-19- 10,746 ಕೋಟಿ ರೂ., 2021-22- 12,815 ಕೋಟಿ ರೂ., 2022-23 – 15,918 ಕೋಟಿ ರೂ. ಮೊತ್ತದ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡಿದೆ. 2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಗುರಿಯನ್ನು ತಲುಪಬೇಕಾದರೆ ಸರ್ಕಾರ ಬಹಳ ಶ್ರಮಪಡಬೇಕಾದ ಅಗತ್ಯವಿದೆ.
(Source : Online )