ಐಟಿ ಜಗತ್ತು ಕೈ ಬೀಸಿ ಕರೆದಷ್ಟೇ ಬೇಗ ಹೊರಕ್ಕೆ ಕಳುಹಿಸುತ್ತದೆ. ಸಾವಿರಾರು ಕನಸು ಹೊತ್ತು ಕೆಲಸಕ್ಕೆ ಸೇರಿದ ಉದ್ಯೋಗಿಗಳು ಕೆಲವೇ ತಿಂಗಳಲ್ಲಿ ಮನೆಗೆ ವಾಪಾಸ್ ಹಿಂತಿರುಗುವ ಪರಿಸ್ಥಿತಿ ಎಲ್ಲೆಡೆ ಎದುರಾಗುತ್ತಿದೆ. ಎಷ್ಟೇ ಕಲಿತರು ಉದ್ಯೋಗ ಪಕ್ಕಾ ಇಲ್ಲಾ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಜಗತ್ತಿನೆಲ್ಲೆಡೆ ಎದುರಿಸುತ್ತಿರುವ ಆರ್ಥಿಕ ಹಿಂಜರಿತ ಎಲ್ಲದರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.7 ರಷ್ಟು ಕಡಿತಗೊಂಡಿದ್ದು, ಒಂದೇ ವರ್ಷದಲ್ಲಿ ಸುಮಾರು 60,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಸಂಸ್ಥೆ ತಿಳಿಸಿದೆ. ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಐಟಿ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಸುಮಾರು 60 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದಾಗಿ ನೇಮಕಾತಿ ಸಂಸ್ಥೆ ತಿಳಿಸಿದೆ.
ಐಟಿ ವಲಯದಲ್ಲಿ ಹೊರಗುತ್ತಿಗೆ ನೌಕರರ ನೇಮಕವು ಮಾರ್ಚ್ ತ್ರೈಮಾಸಿಕದಿಂದ ಶೇ.6 ರಷ್ಟು ಕಡಿತಗೊಂಡಿದೆ. ಇದರಿಂದಾಗಿ ಏಪ್ರಿಲ್ ವೇಳೆಗೆ ದೇಶದಲ್ಲಿ ನಿರುದ್ಯೋಗ ದರವು ಶೇ.7.8 ರಿಂದ ಶೇ.8.11ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.