ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಕ್ಕಳ ಯಕ್ಷಗಾನಕ್ಕೆ ಅವಮಾನ ಮಾಡಲಾಯಿತೇ ? ಹೀಗೊಂದು ಚರ್ಚೆ ಈಗ ಆರಂಭವಾಗಿದೆ. ಮಕ್ಕಳು ಯಕ್ಷಗಾನ ನಡೆಸುತ್ತಿದ್ದಾಗ ವೇದಿಕೆಗೆ ಬಂದು ಪ್ರಮುಖರೊಬ್ಬರು ಮೈಕ್ ಆಪ್ ಮಾಡಿ ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದೀಗ ಈ ಪ್ರಕರಣ ಕಲಾರಾಧಕರಲ್ಲಿ ಅಸಮಾಧಾನ ಹಾಗೂ ಚರ್ಚೆಗೆ ಕಾರಣವಾಗಿದೆ.
ಯಕ್ಷಗಾನ ಎನ್ನುವುದು ಕನ್ನಡ ನಾಡಿನ ಪ್ರಸಿದ್ಧ ಕಲೆ ಮಾತ್ರವಲ್ಲ ಈ ನಾಡಿನ ಹೆಮ್ಮೆ. ಧಾರ್ಮಿಕ ಹಿನ್ನೆಲೆಯೂ, ಕಲಾರಾಧನೆಯ ದಾರಿಯೂ ಹೌದು. ಈ ನಾಡಿನಲ್ಲಿ ಕಟೀಲು , ಧರ್ಮಸ್ಥಳ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಹೆಸರಿನಲ್ಲಿಯೇ ಕಲಾರಾಧನೆಯೂ ನಡೆಯುತ್ತದೆ. ಇಂತಹ ಕಲಾರಾಧನೆ ಇಂದು ಪುಟ್ಟ ಪುಟ್ಟ ಮಕ್ಕಳಿಂದಲೂ ನಡೆಯುತ್ತದೆ. ಇಂತಹ ಪುಟ್ಟ ಮಕ್ಕಳಿಂದ ಸುಳ್ಯ ತಾಲೂಕಿನ ಮಾವಿನಕಟ್ಟೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ನಡೆದಿತ್ತು, ಆದರೆ ಇಡೀ ಯಕ್ಷಗಾನ ಪೂರ್ತಿಯಾಗುವ ಮುನ್ನವೇ ಮೈಕ್ ಆಫ್ ಮಾಡಿ ಯಕ್ಷಗಾನ ಅರ್ಧದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದು ಹಾಗೂ ಮಂಗಳ ಪದಕ್ಕೂ ಅವಕಾಶ ನೀಡದೇ ಇದ್ದದ್ದು ಈಗ ಚರ್ಚೆಯ ವಿಷಯವಾಗಿದೆ. ಯಾವುದೇ ಯಕ್ಷಗಾನ ಆರಂಭಕ್ಕೆ ಮುನ್ನ ಕಲಾ ದೇವಿಗೆ ಪೂಜೆ ನಡೆಯುತ್ತದೆ, ಅದಾದ ನಂತರವೇ ವೇದಿಕೆಯ ಮೇಲೆ ಯಕ್ಷಗಾನ ನಡೆಯುತ್ತದೆ, ಕೊನೆಗೆ ಮಂಗಳ ಪದ ಹಾಡಿ ಕಲಾ ದೇವಿಗೆ ಆರತಿಯೂ ನಡೆಯುತ್ತದೆ. ಆದರೆ ಇಲ್ಲಿ ಅರ್ಧದಲ್ಲಿಯೇ ಯಕ್ಷಗಾನವನ್ನು ಮೈಕ್ ಆಫ್ ಮಾಡಿ ನಿಲ್ಲಿಸಿದ್ದು ಕಲೆಗೆ ಮಾಡಿರುವ ಅವಮಾನ ಇದಾಗಿದೆ ಎಂದು ಕಲಾರಾಧರು ಅಸಮಾಧಾನ ಹೇಳಿಕೊಂಡಿದ್ದಾರೆ.
ಮಾವಿನಕಟ್ಟೆಯ ಉದಯಗಿರಿಯಲ್ಲಿ ಪ್ರಸಿದ್ಧವಾದ ಒತ್ತೆಕೋಲ ನಡೆಯುತ್ತದೆ. ಸಾಕಷ್ಟು ಕಾರಣಿಕವಾದ ಕ್ಷೇತ್ರವೂ ಇದಾಗಿದೆ, ದೈವದ ಕ್ಷೇತ್ರವೂ ಇದಾಗಿರುವ ಕಾರಣ ಎಚ್ಚರಿಕೆ ನಡೆ ಇಲ್ಲಿ ಇರಬೇಕಾದ್ದು ಹಿಂದೂ ಧರ್ಮದ, ಆಚರಣೆಯಲ್ಲಿ ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿನ ಒತ್ತೆಕೋಲದ ಸಂದರ್ಭ ಪ್ರತೀ ವರ್ಷ ವಿವಿಧ ಕಲಾರಾಧನೆ ನಡೆಯುತ್ತದೆ. ಈ ಬಾರಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ಹಾಗೂ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ “ಕಲಾ ಕ್ಷೇತ್ರ” ಪಂಜ ಇದರ ವಿದ್ಯಾರ್ಥಿಗಳಿಂದ “ಭಾರ್ಗವ-ರಾಮ” ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು.ರಾತ್ರಿ 8 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮಕ್ಕಳ ಕಾರ್ಯಕ್ರಮ ಇದಾಗಿದ್ದರಿಂದ ತಿಂಗಳುಗಳಿಂದ ಮಕ್ಕಳಿಗೆ ತರಬೇತಿ ನೀಡಲಾಗಿತ್ತು. ಸಹಜವಾಗಿಯೇ ಮಕ್ಕಳು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು.
ಇಲ್ಲಿ ರಾತ್ರಿ 7 ಗಂಟೆಯಿಂದ ಭಂಡಾರ ತೆಗದು ನಂತರ ಮೇಲೇರಿಗೆ ಅಗ್ನಿಸ್ಪರ್ಶದ ನಂತರ ಯಕ್ಷಗಾನ ಬಯಲಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಸಭಾ ಕಾರ್ಯಕ್ರಮವೂ ಇದ್ದುದರಿಂದ ಯಕ್ಷಗಾನದ ಆರಂಭ ಕೊಂಚ ವಿಳಂಬವಾಗಿತ್ತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಒಂದು ಪ್ರಸಂಗ ಮುಗಿಸಿದ್ದ ಪುಟಾಣಿಗಳು ಇನ್ನೊಂದು ಪ್ರಸಂಗಕ್ಕೆ ಕಾಯುತ್ತಿದ್ದರು. ಸಭಾ ಕಾರ್ಯಕ್ರಮದ ಬಳಿಕ 3 ಗಂಟೆಯ ಯಕ್ಷಗಾನ ಪ್ರಸಂಗಕ್ಕೆ ಮಕ್ಕಳು ತಯಾರಾಗಿದ್ದರು. ಯಕ್ಷಗಾನ ಆರಂಭವಾದ ಬಳಿಕ ಅರ್ಧದಲ್ಲಿ ಯಕ್ಷಗಾನ ನಿಲ್ಲಿಸಿ ಎಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನದಂತಹ , ಅದರಲ್ಲೂ ಪುಟಾಣಿಗಳು ಗೆಜ್ಜೆ ಕಟ್ಟಿ ಕುಣಿಯುತ್ತಿದ್ದ ಬಯಲಾಟವನ್ನು ಅರ್ಧದಲ್ಲೇ ನಿಲ್ಲಿಸಿರುವುದು ಈಗ ಚರ್ಚೆಗೆ ಹಾಗೂ ವಿಷಾದಕ್ಕೆ ಕಾರಣವಾದ ಸಂಗತಿಯಾಗಿದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಜವಾಗಿಯೇ ಧಾರ್ಮಿಕ ಕಾರ್ಯಗಳ ನಡುವೆ ಸಮಯದ ಹೊಂದಾಣಿಕೆಗೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯುತ್ತದೆ. ಆದರೆ ಯಕ್ಷಗಾನದಂತಹ ಕಲೆಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ, ಅದರಲ್ಲೂ ಮಕ್ಕಳ ಮೇಳಗಳಿಗೆ ತಕ್ಷಣವೇ ನಿಲ್ಲಿಸಲು ಸಾಧ್ಯವಿಲ್ಲ. ಅದೂ ಅಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆಯಾಗುವ, ಸಮಸ್ಯೆಯಾಗುವ ಸಂದರ್ಭವಿದ್ದಲ್ಲಿ ಯಕ್ಷಗಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು, ಹಮ್ಮಿಕೊಂಡರೆ ಸಾಕಷ್ಟು ಸಮಯ ನೀಡಬೇಕು, ಅವಕಾಶ ನೀಡಿ ಕಲೆಗೆ ಅವಮಾನ ಮಾಡಬಾರದು ಎಂದು ಕಲಾಭಿಮಾನಿಗಳು ವಿಷಾದ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಇದೇ ಕ್ಷೇತ್ರದಲ್ಲಿ ಮೇಳವೊಂದರ ಯಕ್ಷಗಾನ ಬಯಲಾಟ ನಡೆದಾಗಲೂ ಮೇಳದ ಕಲಾವಿದರೂ ಅಸಮಾಧಾನ ತೋಡಿಕೊಂಡಿದ್ದರು ಎಂಬುದು ಕೂಡಾ ಈಗ ಚರ್ಚೆಯಾಗುತ್ತಿದೆ.