ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶುಲ್ಕ ಏರಿಕೆಯೆ ಬಿಸಿ ನೀಡಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಶುಲ್ಕದಲ್ಲಿ ಶೇಕಡಾ 10 ರಷ್ಟು ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಶುಕ್ರವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳ ಜೊತೆ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳವನ್ನು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಅಡಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶೇ. 10 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದ್ದು, 12,884 ರೂ ಏರಿಕೆಯಾಗುವ ಮೂಲಕ ಈ ವರ್ಷ ಶುಲ್ಕ 1,41,630 ರೂ.ಗೆ ಹೆಚ್ಚಳ ಮಾಡಲಾಗಿದೆ.
ಖಾಸಗಿ ಕಾಲೇಜುಗಳು ಶೇಕಡಾ 40 ರಷ್ಟು ಎಂಬಿಬಿಎಸ್ ಸೀಟುಗಳನ್ನು ಸರ್ಕಾರಕ್ಕೆ ನೀಡುತ್ತವೆ. ಡೆಂಟಲ್, ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಶೇಕಡಾ 35 ರಷ್ಟು ಸೀಟುಗಳನ್ನು ನೀಡುತ್ತವೆ. ಕಾರ್ಯಾಚರಣೆ ವೆಚ್ಚಗಳಲ್ಲಿನ ತೊಂದರೆಯನ್ನು ಉಲ್ಲೇಖಿಸಿ ಕಾಲೇಜುಗಳು ಶೇಕಡಾ 15 ರಷ್ಟು ಹೆಚ್ಚಳವನ್ನು ಒತ್ತಾಯಿಸಿದವು. ಸರ್ಕಾರವು ಅವರ ಬೇಡಿಕೆಯನ್ನು ತಿರಸ್ಕರಿಸಿದ್ದು ಶೇಕಡಾ 10 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.