ಜುಲೈ ತಿಂಗಳ ಮೊದಲ ವಾರವೆಂದರೆ ನಮಗೆ ವನಮಹೋತ್ಸವದ ಸಂಭ್ರಮ. ಗಿಡಗಳನ್ನು ನೆಟ್ಟು ಕಾಡು ಬೆಳೆಸುವ ಕಾರ್ಯಕ್ರಮಗಳನ್ನು ಪರಿಸರ ಪ್ರಿಯರು ಮಾಡುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಒಂದು ವಾರ್ಷಿಕ ಉತ್ಸವ. ಆದರೆ ಇದು ಪರಿಸರದ ಪೂರ್ಣ ಸಂರಕ್ಷಣೆಯ ಯಜ್ಞವೇ ಆಗಬೇಕು. ಆ ನಿಟ್ಟಿನಲ್ಲಿ ಪರೋಪಕಾರ ಗುಣದ ಕುರಿತಾದ ಒಂದು ಶ್ಲೋಕ ನೆನಪಾಗುತ್ತದೆ. “ಪರೋಪಕಾರಾರ್ಥ ವಹಂತಿ ವದ್ಯಃ | ಪರೋಪಕಾರಾರ್ಥ ದುಹಂತಿ ಗಾವಃ || ಪರೋಪಕಾರಾರ್ಥ ಫಲಂತಿ ವೃಕ್ಷಾಃ | ಪರೋಪಕಾರಾರ್ಥಮಿದಂ ಶರೀರಂ||”.…….. ಮುಂದೆ ಓದಿ ……
ನದಿಗಳು ತಮಗೆ ಆಯಾಸವಾದಾಗ ಕುಡಿಯಲು ನೀರನ್ನು ಹರಿಸುತ್ತಿರುವುದಲ್ಲ, ಪರೋಪಕಾರಕ್ಕಾಗಿ ನೀರನ್ನು ಹರಿಸುತ್ತವೆ; ಹಸುಗಳು ತಮಗಾಗಿ ಹಾಲುತ್ಪಾದಿಸುವುದಲ್ಲ. ಜನೋಪಕಾರಕ್ಕಾಗಿಯೇ ಹಾಲು ನೀಡುತ್ತವೆ. ವೃಕ್ಷಗಳು ತಮ್ಮ ಆಹಾರಕ್ಕಾಗಿ ಫಲಗಳನ್ನು ನೀಡುವುದಲ್ಲ, ಪರೋಪಕಾರಕ್ಕಾಗಿ ನೀಡುತ್ತವೆ. ಹಾಗೆಯೇ ಮಾನವರೂ ಪರೋಪಕಾರ ಮಾಡುತ್ತ ಜೀವನ ನಡೆಸಬೇಕು. ಮನುಷ್ಯನ ಶರೀರ ಮಾತ್ರವಲ್ಲ ಮನಸ್ಸು ಮಾನವ ಸೇವೆಯ ಗುರಿಯನ್ನು ಹೊಂದಿರಬೇಕೆಂಬುದು ಈ ಶ್ಲೋಕದ ಆಶಯವಾಗಿದೆ.
ವೃಕ್ಷಗಳ ಅಂದರೆ ಸಸ್ಯಗಳ ವಿಚಾರವನ್ನು ನೋಡಿದಾಗ ಅವುಗಳು ಫಲಗಳನ್ನು ನೀಡುವುದು ಮಾತ್ರವಲ್ಲ, ಅವುಗಳ ಪೂರ್ಣ ಅಸ್ತಿತ್ವವೇ ಪರೋಪಕಾರಕ್ಕಾಗಿ ಇರುತ್ತದೆ. ಮನುಷ್ಯನ ಆಹಾರಕ್ಕೂ ಔಷಧಕ್ಕೂ ಉಪಯುಕ್ತವಾದ ವಿವಿಧ ಭಾಗಗಳು ವಿವಿಧ ಸಸ್ಯಗಳಲ್ಲಿವೆ. ಅವುಗಳ ಫಲಗಳಷ್ಟೇ ಅಲ್ಲ, ಹೂಗಳು, ಎಲೆಗಳು, ಸೊಪ್ಪುಗಳು, ಬೇರುಗಳು, ಹಾಗೂ ತೊಗಟೆಗಳು ಕೂಡಾ ಮಾನವನ ಉಳಿವಿಗಾಗಿ ಬೇಕಾದ ಸತ್ವವನ್ನು ಹೊಂದಿವೆ.
ಪ್ರಕೃತಿಯ ನೆರಳಿನಲ್ಲಿಯೇ ಸಾವಿರಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಮಾನವವರಿಗೂ ಪರೋಪಕಾರವೆಂಬುದು ಸಹಜ ಕ್ರಿಯೆಯಾಗಿತ್ತು. ಒಬ್ಬರಿಗೊಬ್ಬರು ನೆರವಾಗಿ ಬದುಕುತ್ತಿದ್ದ ಕಾಲದಲ್ಲಿ ಸಹಬಾಳ್ವೆಯ ಸಂತೋಷವನ್ನು ಕಾಣುತ್ತಿದ್ದರು. ಆದರೆ ಕೈಗಾರಿಕೀಕರಣ, ನಗರೀಕರಣ, ಆಧುನೀಕರಣದೊಂದಿಗೆ ವಾಣಿಜ್ಜೀಕರಣಕ್ಕೆ ಒಳಗಾದ ಬದುಕಿನಲ್ಲಿ ಮನುಷ್ಯ ಪ್ರಕೃತಿಯಿಂದ ಹೊರಗೆ ನಿಂತಿದ್ದಾರೆ. ಈ ಪ್ರಕೃತಿಯ ಸಹಜ ಸೌಲಭ್ಯಗಳು ಈಗ ಖರೀದಿಸುವ ವಸ್ತುಗಳಾಗಿವೆ. ಹಾಗಾಗಿ ನದಿಗಳ ನೀರು, ಮರಗಳು ನೀಡುವ ಫಲಗಳು ಹಾಗೂ ಹಸುವಿನ ಹಾಲು ಕ್ರಯಕ್ಕೆ ಸಿಗುವ ಆಧುನೀಕರಣದ ಯುಗದಲ್ಲಿ ಜನರು ಪ್ರಕೃತಿಯಿಂದ ದೂರಾಗಿದ್ದಾರೆ. ಪ್ರಕೃತಿಯ ಅಂಕೆಯಲ್ಲಿದ್ದ ಮಾನವರು ಈಗ ಪ್ರಕೃತಿಯನ್ನೇ ತನ್ನ ಅಂಕೆಗೆ ತೆಗೆದುಕೊಂಡಿರುವ ಹಮ್ಮಿನಿಂದ ಬದುಕುತ್ತಿದ್ದಾರೆ. ಹಾಗಾಗಿ ನದಿಗಳ ಪ್ರವಾಹವನ್ನೇ ಬದಲಿಸುವ ದುಸ್ಸಾಹಸ ನಡೆಯುತ್ತಿದೆ. ತನ್ನ ಲಾಭ ಮತ್ತು ಅನುಕೂಲಕ್ಕಾಗಿ ಮರಗಳನ್ನು ಕಡಿಯುವ ಮೂಲಕ ಕಾಡುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಅದೇ ರೀತಿಯಲ್ಲಿ ಹಾಲನ್ನು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ಮಾರುವ ವ್ಯವಸ್ಥೆಯೊಳಗೆ ಹಸುಗಳನ್ನು ಬದುಕಿನಿಂದ ಹೊರಗಿಡುವ ವ್ಯವಸ್ಥೆ ರೂಪುಗೊಂಡಿದೆ. ಸುಧಾರಣೆ ಮತ್ತು ಸೌಲಭ್ಯಗಳ ನಿರ್ಮಾಣದ ಹೆಸರಿನಲ್ಲಿ ಆಗುತ್ತಿರುವ ಈ ಬೆಳವಣಿಗೆಗಳ ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚರ ನೀಡುತ್ತಿರುವ ಪರಿಸರ ಪ್ರೇಮಿಗಳ ಮಾತಿಗೆ ಬೆಲೆ ಸಿಗುತ್ತಿಲ್ಲ. ಅದು ಸಂತೆಯ ಗುಲ್ಲಿನಲ್ಲಿ ಕೇಳಿಸದ ಮಾತಿನಂತೆ ಮೌಲ್ಯಹೀನವಾಗುತ್ತಿದೆ. ಪರಿಸರ ಪ್ರೇಮಿಗಳನ್ನು ಅಭಿವೃದ್ಧಿಯ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ಗ್ರಾಮೀಣ
ಜನರೂ ಹೈನೋದ್ಯಮವನ್ನು ಸಂಪಾದನೆಯ ಮಾರ್ಗವೆಂದು ಕಂಡುಕೊಂಡ ಬಳಿಕ ಈಗ ಹಸು “ಕಾಮಧೇನುವಾಗಿ” ಉಳಿದಿಲ್ಲ. ಹಾಲು ಕೊಡುವಷ್ಟು ದಿನ ಮಾತ್ರ ಅದರ ಮೇಲೆ ಪ್ರೀತಿ. ನಂತರ ಅದರ ಸಾಕಣೆ ವ್ಯರ್ಥ ನಷ್ಟ ಎಂಬ ಭಾವನೆ ವ್ಯಾಪಕವಾಗುತ್ತಿದೆ. ನಗರಗಳನ್ನು ವಿಸ್ತರಿಸಲು ಜಾಗಬೇಕೆನ್ನಿಸಿದಾಗ ಮರಗಳನ್ನು ಕಡಿದು ಕಾಡುಗಳನ್ನು ಒತ್ತುವರಿ ಮಾಡಿಕೊಳ್ಳುವ ಹಾಗೂ ಮಣ್ಣು ತುಂಬಿ ಕೆರೆಗಳನ್ನು ಕಬಳಿಸುವ ವಿದ್ಯಮಾನಗಳು ಆಧುನಿಕತೆಯ ಲಕ್ಷಣಗಳೆನ್ನಿಸಿವೆ. ಕೈಗಾರಿಕೆಗಳ ಮಲಿನ ಜಲ ಹಾಗೂ ನಗರಗಳ ಚರಂಡಿ ನೀರನ್ನು ನದಿಗಳಿಗೆ ಬಿಟ್ಟು ಜಲಮಾಲಿನ್ಯದ ಜವಾಬ್ದಾರಿ ತಮ್ಮದಲ್ಲ ಎನ್ನುವಂತೆ ವರ್ತಿಸುವ ವಿದ್ಯಾವಂತ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮರೆಯಾಗಿರುವ ದುರಂತವನ್ನು ನಾವು ಇಂದು ಕಾಣುತ್ತಿದ್ದೇವೆ. ಹಾಗಾಗಿಯೇ ಭತ್ತ ಬೆಳೆಯುವ ಗದ್ದೆಗಳನ್ನೇ ನೋಡದ ಮಕ್ಕಳು ‘ಅಕ್ಕಿ ಅಂಗಡಿಯಲ್ಲಿ ಸಿಗುತ್ತದೆ” ಎನ್ನುತ್ತಾರೆ. ಹಸುವಿನ ಕೆಚ್ಚಲಿನಿಂದ ಹಾಲನ್ನು ಕರೆಯುವ ದಿನಚರಿಯನ್ನು ಕಾಣದ ಮಕ್ಕಳು “ಹಾಲು ಪ್ಲಾಸ್ಟಿಕ್ ಪಾಕೆಟ್‍ನಲ್ಲಿ ಸಿಗುತ್ತದೆ” ಎನ್ನುತ್ತಾರೆ. ಅಂದರೆ ಹೊಸ ತಲೆಮಾರಿಗೆ ತಾವು ಈ ಪ್ರಕೃತಿಯ
ಒಂದು ಭಾಗ ಎಂಬುದೇ ವಿಸ್ಮೃತಿಯಾಗಿದೆ. ಸಕಲ ಜೀವಗಳ ನೆಲೆಯಾದ ಪರಿಸರ ನಾಶದಲ್ಲಿ ತಾವೂ ಭಾಗಿಗಳು ಎಂಬುದು ತಮ್ಮ ಅರಿವಿಗೆ ಬಾರದ ರೀತಿಯಲ್ಲಿ ಹೊಸ ತಲೆಮಾರುಗಳ ಸಮೃದ್ಧ ಜೀವನ ಸಾಗುತ್ತಿದೆ. ಇದು ಪರ್ವತಗಳು ಕುಸಿಯುವ, ನದಿಗಳು ಒಣಗುವ ಮತ್ತು ಕಾಡುಪ್ರಾಣಿಗಳು ನಗರಗಳಿಗೆ ನುಗ್ಗುವ ಅಸಹಜ ವಿದ್ಯಮಾನಗಳಿಗೆ ಕಾರಣವಾದರೆ ಮತ್ತೆ ನಿಯಂತ್ರಣ ಕಷ್ಟ ಸಾಧ್ಯ. ಹಾಗಾಗಿ ಪರಿಸರ ರಕ್ಷಣೆಗೆ ಎಚ್ಚರಗೊಳ್ಳುವ ಅಗತ್ಯವಿದೆ.
ಮನುಷ್ಯನಿಗೆ ಪ್ರಾಣಿಗಳಿಗಿಂತ ಮಿಗಿಲಾದ ಅರಿವು ಇದೆ. ಶೋಧನೆ-ಸಂಶೋಧನೆಗಳನ್ನು ಮಾಡಲು ಬರುತ್ತದೆ. ಪ್ರಕೃತಿಯಲ್ಲಿ ಲಭ್ಯ ಇರುವ ವಸ್ತುಗಳ ವೈವಿಧ್ಯಮಯ ಉಪಯೋಗದ ಸಾಧ್ಯತೆಗಳನ್ನು ಕಂಡುಕೊಳ್ಳಬಲ್ಲ. ಅದರ ಮೂಲಕ ಆರ್ಥಿಕ ಸಂಪನ್ನತೆಯನ್ನು ಸಾಧಿಸಬಲ್ಲ. ಹಾಗಾಗಿ ಈ ಪ್ರಕೃತಿ ಎಂಬುದು ಆತನಿಗೆ ಒಂದು ಕಚ್ಚಾವಸ್ತು. ಅರ್ಥಾತ್ “ಪ್ರಕೃತಿಯು ಮಾನವನ ಅಧೀನ, ಮಾನವನೇ ಅದರ ಯಜಮಾನ” ಎಂಬ ಮನೋಧರ್ಮವು ರೂಪುಗೊಂಡಿದೆ. ಆಧುನಿಕ ವಿಜ್ಞಾನದ ಮುನ್ನಡೆಯು ಮನುಷ್ಯನಲ್ಲಿರ ಬೇಕಾದ “ತಾನೂ ಒಂದು ಪ್ರಾಣಿ” ಎಂಬ ಮೂಲ ಸತ್ಯದ ಅರಿವನ್ನು ಮರೆಸಿಬಿಟ್ಟಿದೆ. ಈ ಅಜ್ಞಾನವೇ ಭವಿಷ್ಯದ ದುರಂತಗಳಿಗೆ ಕಾರಣವಾಗಲಿದೆ.
ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಪತಿಗಳು, ಹಾಗೂ ಆರ್ಥಿಕ ಅಭಿವೃದ್ಧಿಯ ಕನಸನ್ನು ಕಾಣುವವರು ಬಾಚುವುದಕ್ಕೆ ಎಷ್ಟು ಸಿಗುತ್ತದೋ ಅಷ್ಟಕ್ಕೂ ಕೈ ಚಾಚುವವರಾಗಿದ್ದಾರೆ. ಪರಿಸರ ಸಂರಕ್ಷಣೆಯ ಕೂಗು ಅವರಿಗೆ ಕೇಳಿಸುವುದಿಲ್ಲ. ಕೇಳಿಸಿದರೂ ಅದು ಅವರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಪರಿಸರ ರಕ್ಷಣೆ ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ಸಿಗುವುದು ಪರಿಸರವಾದಿಗಳ ಹೋರಾಟದಲ್ಲಿ. ಅವರ ಲೇಖನಗಳು ಹಾಗೂ ನ್ಯಾಯಾಲಯದಲ್ಲಿ ಹೂಡಿದ ದಾವೆಗಳು ಸ್ವಲ್ಪ ಮಟ್ಟಿಗೆ ಪರಿಸರದ ಹಾನಿಯನ್ನು ತಡೆಯಬಹುದು. ಇನ್ನು ಕೆಲವೊಂದು ಊರುಗಳಲ್ಲಿ ಪರಿಸರ ಸಂರಕ್ಷಣೆಯ ಗುರಿಹೊಂದಿದ ಸ್ವಯಂಸೇವಾ ಸಂಘಗಳು ಪರಿಸರದ ಮಹತ್ವವನ್ನು ತಿಳಿಸಿ ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತೆ, ನದಿಗಳ ರಕ್ಷಣೆ ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. ಇದಲ್ಲದೆ ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ಸಾಧ್ಯತೆ ಶಾಲೆಗಳಲ್ಲಿದೆ. ಆದರೆ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಪರಿಸರದಿಂದ ದೂರಕ್ಕೆ ತಳ್ಳುತ್ತಿದೆ. ತಾವು ಬದುಕುತ್ತಿರುವ ಲೋಕದ ಪರಿವೆ ಇಲ್ಲದಂತೆ ಅವರ ಕಲಿಕೆ ಸಾಗುತ್ತಿದೆ. ಅಂತಹ
ಸಂದರ್ಭದಲ್ಲಿ ಪ್ರಕೃತಿಯ ಸುಖವನ್ನೂ ಸವಿಯುವ, ಪರಿಸರವನ್ನು ಒದಗಿಸಿ ಮಣ್ಣು, ನೀರು, ಗಾಳಿ, ಶಾಖಗಳು ಹೇಗೆ
ನಮ್ಮ ಜೀವದ ಅಂದರೆ ಶರೀರದ ಸತ್ವಗಳಾಗಿವೆ ಎಂಬುದನ್ನು ಕಲಿಸುವ ಹಸಿರು ಶಾಲೆಗಳು ಅಗತ್ಯ. ವಿಶ್ವದ ವಿವಿಧೆಡೆಗಳಲ್ಲಿ ಅಂತಹ ಶಾಲೆಗಳು ಮೂಡಿ ಬಂದಿವೆ.
ಸುಳ್ಯದಲ್ಲಿರುವ ಸ್ನೇಹ ಶಾಲೆಯು ಕೂಡಾ ಹಸಿರು ಶಾಲೆಯೆಂದು ಗುರುತಿಸಿಕೊಳ್ಳಬಲ್ಲ ಸಾಧನೆಗಳನ್ನು ಮಾಡಿದೆ. ಮುಖ್ಯವಾಗಿ ನೈಸರ್ಗಿಕವಾಗಿ ಬೆಳೆದಿದ್ದ ಮರಗಳನ್ನು ಕಡಿಯದೆ ಇಳಿಸಿಕೊಂಡದ್ದು ಶಾಲಾ ಆವರಣದಲ್ಲಿ ಹಸಿರು ತುಂಬುವುದಕ್ಕೆ ಕಾರಣವಾಗಿದೆ. ಇಲ್ಲಿ 75 ಜಾತಿಯ ನೂರಕ್ಕಿಂತಲೂ ಹೆಚ್ಚು ಮರಗಳು, 80 ಜಾತಿಯ ಕುರುಚಲು ಗಿಡಗಳು, 51 ಜಾತಿಯ ಹೂಗಳು, 57 ಜಾತಿಯ ಹುಲ್ಲುಗಳು ಹಾಗೂ 7 ವಿಧದ ಗೆಡ್ಡೆಗಳು ಇವೆ. ಅತ್ಯಂತ ಎತ್ತರವಾದ ಮರದ ಬುಡದಲ್ಲಿ ಮುಕ್ತ ತರಗತಿ ಇದೆ. ಯೋಗ, ಧ್ಯಾನ, ಪ್ರಾಣಾಯಾಮಗಳಿಗಾಗಿ ಸೂರ್ಯಾಲಯವಿದೆ, ಔಷಧೀಯ ಸಸ್ಯಗಳ ವನವಿದೆ, ಇಲ್ಲಿ ಸಿಗುವ ಗಿಡಗಳ ಹೂ, ಚಿಗುರು, ಸೊಪ್ಪು, ತೊಗಟೆಗಳನ್ನು ಸಂಗ್ರಹಿಸಿ ಕಷಾಯ ಮಾಡಿ ಮಕ್ಕಳಿಗೆ ಹಂಚುತ್ತೇವೆ. ಇದರಿಂದಾಗಿ ಮಕ್ಕಳು ಶೀತ, ಕಫ, ಜ್ವರ ಮುಕ್ತರಾಗಿ ಶಾಲೆಯಲ್ಲಿ ಹಾಜರಾತಿ ಹೆಚ್ಚುತ್ತದೆ, ಮಕ್ಕಳಿಗೆ ಮರಗಿಡಗಳ ಹೆಸರು ಹಾಗೂ ಉಪಯೋಗಗಳನ್ನು ಹೇಳಿಕೊಡುತ್ತೇವೆ. ಶಾಲಾ ಆವರಣದ ಸ್ವಚ್ಛತೆಯು ಮಕ್ಕಳ ಜವಾಬ್ದಾರಿಯಾಗಿದೆ, ಗುಡ್ಡಗಳಲ್ಲಿ ಇಂಗುಗುಂಡಿಗಳನ್ನು ತೋಡಿದ್ದರಿಂದ ಬಾವಿಯಲ್ಲಿ ನೀರಿನ ಲಭ್ಯತೆ ಹೆಚ್ಚಾಗಿದೆ. ಹೀಗೆ ನಮ್ಮ ಶಾಲೆಯು ವಸ್ತುಶಃ ಒಂದು ಹಸಿರು ಶಾಲೆಯಾಗಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…