ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಒಳ್ಳೆ ಕಾಲ ಬಂದಿದೆ ಎಂದು ಅನ್ಕೋಬಹದುದ. ಸಮುದ್ರ ತೀರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭಾರತದ ಪ್ರಥಮ ಮರೀನಾವನ್ನು ಕರ್ನಾಟಕದ ಬೈಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಆರ್ ಝಡ್ ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಬರುವ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಬೀಚ್ ಪ್ರವಾಸೋದ್ಯಮ , ಯಾತ್ರಾ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಐತಿಹಾಸಿಕ ಸ್ಥಳಗಳ ಅಭಿವೃದ್ಧಿ
ರಾಜ್ಯವನ್ನಾಳಿದ ಗಂಗರು, ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸರ ಕಾಲದ ಇತಿಹಾಸವನ್ನು ಪುರಾತತ್ವ ಇಲಾಖೆಯಿಂದ ಪಡೆದು, ಐತಿಹಾಸಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಿಂದ ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಇತಿಹಾಸದ ಅರಿವು ಪಡೆಯಬಹುದಾಗಿದೆ ಎಂದರು.
ಪುರಾತನ ದೇವಾಲಯಗಳ ಕಾರಿಡಾರ್ ಯೋಜನೆ
ಬನವಾಸಿಯಲ್ಲಿರುವ ಮಧುಕೇಶ್ವರ, ಗಾಣಗಾಪುರ ದತ್ತಾತ್ರೆಯ ಹಲವಾರು ಪುರಾತನ ದೇವಾಲಯಗಳ ಕಾರಿಡಾರ್ ನಿರ್ಮಿಸಿ, ಯಾತ್ರಾ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು. ಬೆಣಕಲ್ ಪ್ರದೇಶದ ಅಭಿವೃದ್ದಿ ಮಾಡಲು ಸೂಚನೆ ನೀಡಲಾಗಿದೆ. ಅಂಜನಾದ್ರಿ ಬೆಟ್ಟ ಅಭಿವೃದ್ದಿ ಮಾಡಲಾಗುತ್ತಿದೆ ಎಂದರು.
ಪ್ರವಾಸಿ ಮಾರ್ಗದರ್ಶಕರಿಗೆ ಸೌಲಭ್ಯ
ನೋಂದಾಯಿತ ಪ್ರವಾಸಿ ಮಾರ್ಗದರ್ಶಕರಿಗೆ 5000 ಮಾಸಾಶನ ಕೊಡುವ ಯೋಜನೆಯನ್ನು ರೂಪಿಸಲಾಗಿದೆ. ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು.
ಇತಿಹಾಸದ ಕುರುಹುಗಳನ್ನು ಹುಡುಕುವ ಕೆಲಸ ಮಾಡಲು ಸರ್ಕಾರ ಸಿದ್ಧ
ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಉದ್ದೇಶ ಸರ್ಕಾರದ್ದು. ರಾಜ್ಯದ ಹಲವು ಹಳ್ಳಿಗಳಲ್ಲಿ ಇತಿಹಾಸದ ಕುರುಹುಗಳಿರುತ್ತವೆ, ಅವುಗಳನ್ನು ಹುಡುಕುವ ಕೆಲಸವಾಗಬೇಕಿದೆ ಎಂದರು. ನಿಸರ್ಗದ ವೈಭವವನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕಿದೆ.
ಮುಂದಿನ ಜನಾಂಗಕ್ಕೆ ಇತಿಹಾಸ ಪರಿಚಯ
ಮನುಷ್ಯ ಇತಿಹಾಸದ ಭಾಗವಾಗಬೇಕು ಇಲ್ಲವೇ ಇತಿಹಾಸ ಸೃಷ್ಟಿಸಬೇಕು. ಅನೇಕ ಅದ್ಬುತಗಳಿವೆ ಅವುಗಳನ್ನು ಹುಡುಕುವ ಕೆಲಸಮಾಡಬೇಕಿದೆ. ಮುಂದಿನ ಜನಾಂಗಕ್ಕೆ ನಮ್ಮ ಇತಿಹಾಸವನ್ನು ತೋರಿಸುವ ಕೆಲಸ ಮಾಡಬೇಕಿದೆ. ಸೃಷ್ಡಿ ಕರ್ತನ ಮುಂದೆ ನಾವೆಲ್ಲ ತೃಣ, ಅವನ ಸೃಷ್ಟಿಯನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕಿದೆ. ಬೇಲೂರು ಚನ್ನಕೇಶವ ದೇವಾಲಯ ನಿರ್ಮಾಣ ನೂರು ವರ್ಷ ಮಾಡಿದ್ದಾರೆ ಎಂದರು
ಹಸಿರು ಆಯವ್ಯಯ
ಪ್ರಯಾಣ ಮಾಡುವುದು ಮನುಷ್ಯನ ಸಹಜ ಗುಣವೇ ಅಭಿವೃದ್ಧಿಗೆ ನಾಂದಿಯಾಗಿದೆ. ಕರ್ನಾಟಕ ನಿಸರ್ಗದತ್ತವಾದ ರಾಜ್ಯ. 350 ಕಿ.ಮೀ ಕರಾವಳಿ, 10 ಹವಾಮಾನ ಪ್ರದೇಶಗಳಿವೆ, 400 ಕಿ.ಮೀ. ಪಶ್ಚಿಮ ಘಟ್ಟವಿದೆ, ವೈವಿಧ್ಯಮಯ ಜೀವರಾಶಿ ಇದೆ, 300 ದಿನ ಸೂರ್ಯನ ಶಾಖ ಬೀಳುತ್ತದೆ. ನದಿಗಳು ಹರಿದಿವೆ. ನಿಸರ್ಗ ನಮ್ಮ ಪರವಾಗಿದೆ. ನಿಸರ್ಗವನ್ನು ಮೀರಿ ನಾವು ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಹಸಿರು ಆಯವ್ಯಯವನ್ನು ಮಾಡಿದ್ದೇನೆ. ಈ ವರ್ಷ ಆಗಿರುವ ಪರಿಸರ ನಾಶವನ್ನು ನಾವು ತುಂಬಿಕೊಳ್ಳಬೇಕು. ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿದೆ ಎಂದರು.