ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸೋಗಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರತಿನಿತ್ಯ 7500 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸರಿಯಾದ ಸಮಯಕ್ಕೆ ರೈತರಿಗೆ ಹಾಲಿನ ಹಣ ಪಾವತಿಯಾಗುತ್ತಿದ್ದು, ಹಸುಗಳ ಹಾರೈಕೆಗೂ ಒತ್ತು ನೀಡಲಾಗುತ್ತಿದೆ. ಬಹುತೇಕ ರೈತರು ಸೀಮೆ ಹಸುಗಳಿಂದಲೇ ಹಾಲು ಉತ್ಪಾದಿಸುತ್ತಿದ್ದು, ಅವುಗಳಿಗೆ ಪಶು ವೈದ್ಯರಿಂದ ಸೂಕ್ತ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮಾದರಿ ಸಂಘವಾಗಿ ಮಾರ್ಪಟ್ಟಿದೆ. ಚನ್ನಪಟ್ಟಣ ವ್ಯಾಪ್ತಿಯಲ್ಲಿ 173 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 3 ಸಾವಿರ ಟನ್ ಪಶು ಆಹಾರವನ್ನು ಒದಗಿಸಲಾಗುತ್ತಿದೆ. ನಿರಂತರವಾಗಿ ಪಶುಗಳ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ತಾಲ್ಲೂಕಿನ ಹೆಚ್ಚಿನ ಜನರು ಹೈನುಗಾರಿಕೆ ಅವಲಂಬಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲಿನ ಉತ್ಪಾದನೆಯಾಗುತ್ತಿದೆ. ರೈತರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಶಿಬಿರದ ಉಪ ವ್ಯವಸ್ಥಾಪಕ ಡಾ.ಸಿ.ಆರ್. ಕಿರಣ್ ಹಾಗೂ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಲಿಂಗೇಶ್ ಕುಮಾರ್ ಹೇಳುತ್ತಾರೆ.
ಪ್ರತಿದಿನ 7 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಸಂಘ ಉತ್ತಮ ಆದಾಯ ಗಳಿಸುತ್ತಿದೆ , ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ರೀತಿಯ ಸವಲತ್ತು ನೀಡಲಾಗುತ್ತಿದ್ದು, ರೈತರಿಂದ ಉತ್ತಮ ಪ್ರೋತ್ಸಾಹ ಹಾಗೂ ಸಹಕಾರ ದೊರೆಯುತ್ತಿದೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದೊಡ್ಡ ಬಸೇಗೌಡ ಹೇಳುತ್ತಾರೆ.




