ಬೆಂಗಳೂರಿನಲ್ಲಿ ಈಚೆಗೆ ಮೂರು ದಿನಗಳ ಅಂತರಾಷ್ಟ್ರೀಯ ಮಟ್ಟದ ಸಾವಯವ ಹಾಗೂ ಸಿರಿಧಾನ್ಯ ವ್ಯಾಪಾರ ಮೇಳ ಮುಕ್ತಾಯಗೊಂಡಿತು. 185.41 ಕೋಟಿ ರೂಪಾಯಿ ಆದಾಯ ಗಳಿಸಿ ಅಂದಾಜು 3 ಲಕ್ಷ ಜನರುಮೇಳದಲ್ಲಿ ಭಾಗವಹಿಸಿದರು. ಮೇಳದಲ್ಲಿ 25 ರಾಜ್ಯಗಳು ಮತ್ತು ಐದು ರಾಜ್ಯಗಳ ಕೃಷಿ ಸಚಿವರು ಭಾಗವಹಿಸಿದ್ದರು. ಮೇಳದಲ್ಲಿ 330ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು, 194 ಉತ್ಪಾದಕರು ಮತ್ತು 105 ಮಾರುಕಟ್ಟೆ ಸಂಸ್ಥೆಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಕೃಷಿ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಶ್ರಮಿಸಲಿದೆ. ರೈತರು ಸುದೃಢವಾದಾಗ ದೇಶವು ಸುಭದ್ರವಾಗುತ್ತದೆ ಮತ್ತು ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ ಎಂದರು. ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಹೇಳಿದರು. ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಮತ್ತು ದೈನಂದಿನ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.