ಚಿತ್ರದುರ್ಗ ತಾಲ್ಲೂಕು ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯಗಳ ಬೆಳೆಗೆ ಪ್ರಸಿದ್ಧವಾಗುತ್ತಿದೆ. ಅದರಲ್ಲೂ ಹೊಸದುರ್ಗ ತಾಲ್ಲೂಕಿನ ರೈತರು ಸಿರಿಧಾನ್ಯಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.…..ಮುಂದೆ ಓದಿ….
ಆಧುನಿಕ ವೇಗದ ಬದುಕು ಹಾಗೂ ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಧುಮೇಹ, ರಕ್ತದ ಒತ್ತಡ ಇತ್ಯಾದಿ ಹಲವು ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಇವುಗಳ ನಿವಾರಣೆಗೆ ಸಿರಿಧಾನ್ಯ ರಾಮಬಾಣವಾಗಿ ಪರಿಣಮಿಸಿದೆ. ಮಳೆ ಕಡಿಮೆ ಬೀಳುವ ಪ್ರದೇಶವಾದ ಹೊಸದುರ್ಗ ತಾಲ್ಲೂಕಿನ ಹವಾಮಾನವೂ ಇದಕ್ಕೆ ಪೂರಕವಾಗಿದ್ದು, ಸರ್ಕಾರ ಹೆಕ್ಟೇರ್ಗೆ ಹತ್ತು ಸಾವಿರದಂತೆ ನೀಡುತ್ತಿರುವ ಸಹಾಯಧನ ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ರೈತಸಿರಿ ಯೋಜನೆ ಅಡಿ ಪ್ರತಿ ಹೆಕ್ಟೇರ್ ಸಿರಿಧಾನ್ಯ ಬೆಳೆಗೆ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎನ್ನುತ್ತಾರೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಈಶ.
ತಾಲ್ಲೂಕಿನಲ್ಲಿ ಸಾಮೆ, ನವಣೆ, ಕೊರಲೆ, ರಾಗಿ ಇತ್ಯಾದಿ ಹತ್ತು ಹಲವು ವಿಧದ ಸಿರಿಧಾನ್ಯಗಳ ಬೆಳೆಯುವ ಪ್ರದೇಶ ಆರು ವರ್ಷಗಳಲ್ಲಿ ಮೂರು ಪಟ್ಟು ವಿಸ್ತರಿಸಿದೆ. ಇದಕ್ಕೆ ಪೂರಕವಾಗಿ ಪುರಸಭೆಯೂ ಹೊಸದುರ್ಗವನ್ನು ಸಿರಿಧಾನ್ಯಗಳ ನಾಡು ಎಂದು ಘೋಷಿಸಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ರಾಜ್ಯದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ನಾಡು ಎಂದು ತಾಲ್ಲೂಕು ಗುರುತಿಸಿಕೊಂಡಿರುವುದು ಸಂತಸ ಮೂಡಿಸಿದೆ ಎಂದು ಹೇಳುತ್ತಾರೆ ಹೊಸದುರ್ಗ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೋರೇಶ್.