ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ.
ಜೈನ ಸಮುದಾಯದ 110 ಜನರು ಪ್ರಯಾಣ
ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಪ್ರಕಾಶ್ ಜೈನ್ ಸಹೋದರ ಮಾಳ ಹರ್ಷವರ್ಧನ್ ಜೈನ್ ಮಾತನಾಡಿದ್ದಾರೆ. ಮೇ 31 ರಂದು ಶೃಂಗೇರಿ, ಹೊರನಾಡಿನಿಂದ ಜೈನ ಸಮಾಜದ 110 ಮಂದಿ ಶಿಕರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಅಜಿತ್‌ಕುಮಾರ್ ಜೈನ್ ನೇತೃತ್ವದಲ್ಲಿ ಶ್ರಾವಕ ಶ್ರಾವಕಿಯರು ಯಾತ್ರೆಗೆ ತೆರಳಿದ್ದರು. ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಿದರು. ನನ್ನ ಅಣ್ಣ ಮಾಳ ಪ್ರಕಾಶ್ ಜೈನ್, ಅತ್ತಿಗೆ ಲಾವಣ್ಯ 110 ಯಾತ್ರಿಕರೊಂದಿಗೆ ತೆರಳಿದ್ದರು ಎಂದು ಹೇಳಿದರು. ಅಂದು ರೈಲು ಎರಡು ಗಂಟೆ ತಡವಾಗಿ ಹೊರಟಿತು. ಎಸ್-5, ಎಸ್-6 ಮತ್ತು ಎಸ್-7 ಕೊನೆಯ ಮೂರು ಬೋಗಿಗಳಲ್ಲಿ 110 ಜನ ಪ್ರಯಾಣಿಸುತ್ತಿದ್ದರು. ಇಂಜಿನ್ ಚೇಂಜ್ ಆದಾಗ ಕೊನೆಯಲ್ಲಿ ಮೂರು ಬೋಗಿಗಳು ಮೊದಲ ಮೂರು ಬೋಗಿಗಳಾದವು ಎಂದರು.
ಘಟನೆಯ ಮಾಹಿತಿ ನೀಡಿದ ಪ್ರಯಾಣಿಕರ ಕುಟುಂಬಸ್ಥರು
ಜೋರಾಗಿ ಶಬ್ದವಾಯಿತು, ಆನಂತರ ರೈಲಿನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬಿದ್ದರು ಎಂದು ನನ್ನ ಅತ್ತಿಗೆ ತಿಳಿಸಿದ್ದಾರೆ. ಹೊರಗೆ ಬಂದು ನೋಡಿದಾಗ ಅಪಾರ ಸಾವು ನೋವು ಉಂಟಾಗಿತ್ತು. 110 ಮಂದಿಯೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಒಂದು ಸಣ್ಣ ಪುಟ್ಟ ಗಾಯಗಳಾಗಿಲ್ಲ ನನ್ನ ಸೋದರ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವು ಒದಗಿಸಲು ಸೂಚನೆ ನೀಡಿದ್ದಾರೆ.