ಮನೆಯ ಹಕ್ಕುಪತ್ರ ಸಮಸ್ಯೆಗೆ ಸಂಬಂಧಿಸಿ ಮಾಹಿತಿ ನೀಡಲು ಬಂದ ಮಹಿಳೆಗೆ ವಸತಿ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಹಂಗಳ ಗ್ರಾಮದಲ್ಲಿ ಶನಿವಾರ 175 ಗ್ರಾಮಸ್ಥರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು.
ಹಕ್ಕುಪತ್ರ ವಿತರಣಾ ಕಾರ್ಯಕ್ರಮವು ಶನಿವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ಆಗಮಿಸಿದ್ದ ಸಚಿವರ ಬಳಿ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿತ್ತು, ಈ ಸಂದರ್ಭ ಮಹಿಳೆ ಸಚಿವರ ಬಳಿ ತೆರಳಿದ್ದ ವೇಳೆ ಸಚಿವರು, ಮಹಿಳೆಯ ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಕಪಾಳಮೋಕ್ಷಕ್ಕೆ ಒಳಗಾಗಿದ್ದ ಮಹಿಳೆ ಕಳೆದ 5 ವರ್ಷದ ಹಿಂದೆಯೇ ನಿವೇಶನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು, ಆದರೆ ಆಕೆಗೆ ಹಕ್ಕು ಪತ್ರ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದಳು. ಇದಕ್ಕೆ ನೇರ ಸಚಿವರ ಬಳಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.