ಪರಿಸರ ಬೆಳೆಸುವ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಶಿಕ್ಷಣ ಸಂಸ್ಥೆ, ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ತಾಲೂಕು ಸಂಚಾಲಕ ಭಾನುಪ್ರಕಾಶ್ ಪೆರುಮುಂಡ ತಿಳಿಸಿದ್ದಾರೆ.
ದ.ಕ.ಜಿಲ್ಲೆಯ 7 ಕಂದಾಯ ತಾಲೂಕುಗಳ ಪೈಕಿ ಸುಳ್ಯ ತಾಲೂಕನ್ನು ಪ್ರಸಕ್ತ ಸಾಲಿನ ರಾಜ್ಯ ಸರಕಾರ ಘೋಷಿಸಿದ ಅತಿವೃಷ್ಠಿ – ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವ ಕ್ರಮವನ್ನು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಖಂಡಿಸಿದೆ. ತಕ್ಷಣ ಅತಿವೃಷ್ಠಿ ಪೀಡಿತ ತಾಲೂಕಾಗಿ ಸೇರ್ಪಡೆಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದೆ. ತಿಂಗಳೊಳಗಾಗಿ ಅತಿವೃಷ್ಠಿ ಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ಸರಕಾರವನ್ನು ಆಗ್ರಹಿಸಿದ್ದು ತಪ್ಪಿದಲ್ಲಿ ತಾಲುಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ದ.ಕ.ಜಿಲ್ಲೆಯ ಇತರ ತಾಲೂಕಿನಂತೆ ಸುಳ್ಯ ತಾಲೂಕಿನಲ್ಲೂ ಅಧಿಕ ಮಳೆಯ ಪರಿಣಾಮವಾಗಿ ಸಾಕಷ್ಟು ಹಾನಿಯಾಗಿದೆ. ಈ ಬಾರಿಯೂ ಅಧಿಕ ಮಳೆಯ ಪರಿಣಾಮ ರಸ್ತೆಯಂತಹ ಮೂಲಭೂತ ಸೌಕರ್ಯಗಳಾದಿಯಾಗಿ ಮನೆ, ಜಾನುವಾರು, ಕೃಷಿ ಹಾನಿಗೊಳಗಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಬೆಳೆಹಾನಿಗೆ ಸಂಬಂಧಿಸಿ ಬೆಳೆವಿಮೆ, ಮಳೆಹಾನಿ ಕಾಮಗಾರಿಗಳಂತಹ ಪರಿಹಾರ ದೊರೆಯುವ ನಿಟ್ಟಿನಲ್ಲಾಗುವ ತೊಡಕುಗಳ ನಿವಾರಣೆಗೆ ಸರಕಾರ ತುರ್ತಾಗಿ ಗಮನಹರಿಸಿ ತಾಲೂಕನ್ನು ಅತಿವೃಷ್ಠಿ ಪ್ರದೇಶವನ್ನಾಗಿ ಘೋಷಿಸಬೇಕು.ತಾಲೂಕನ್ನು ನಿರ್ಲಕ್ಷ್ಯ ಮಾಡುವ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪರಿಸರ ಪ್ರಮುಖ್ ಅಭಿಷೆಕ್ ದುಗಲಡ್ಕ, ಮಡಿಕೇರಿ ತಾಲೂಕು ಸಂಚಾಲಕ ಬನ್ನೂರುಪಟ್ಟೆ ಪ್ರದೀಪ್ ಕರಿಕೆ, ಜಿಲ್ಲಾ ಸಮಿತಿ ಸದಸ್ಯ ಟಿ.ಎನ್.ಸತೀಶ್ ಕುಮಾರ್ ಕಲ್ಮಕಾರ್, ತಾಲೂಕು ಸಮಿತಿ ಸದಸ್ಯ ಭರತ್ ಕನ್ನಡ್ಕ ಉಪಸ್ಥಿತರಿದ್ದರು.
ಇದೇ ವೇಳೆ ಉಪತಹಶೀಲ್ದಾರ್ ಚಂದ್ರಕಾಂತ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.