ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!

July 13, 2025
11:36 AM
ಮೊಬೈಲ್‌ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ ಹಾಳು ಮಾಡುತ್ತದೆ ಈ ಬಗ್ಗೆ ನಾವು ಯೋಚಿಸಿದ್ದೇವೆಯೇ..?

ಲೋಕವೇ ಹಾಗೆ, ನೆಗೆಟಿವ್‌ ಬಹುಬೇಗನೆ ತಲಪುತ್ತದೆ. ಇನ್ನೊಂದು ಮನೆಯ ಸೋಲುಗಳು-ಸೋಲಿಸುವುದು ಇಷ್ಟವಾಗುತ್ತದೆ. ಅದಕ್ಕೆ ಪ್ರತಿಕ್ರಿಯೆಯೂ ಬರುತ್ತದೆ. ಟ್ರೋಲ್‌ಗಳು ಕೂಡಾ ಹಾಗೆಯೇ. ಕೆಲವೊಮ್ಮೆ ನೆಗೆಟಿವ್‌ ಮೂಲಕವೇ ಮುನ್ನೆಲೆಗೆ ಬರುವುದು ಇದೆ. ಒಳ್ಳೆಯ ಸಂಗತಿಗಳು ಬೆಳಕಿಗೆ ಬರುವುದು ಕಡಿಮೆ, ಬರಬೇಕಾದರೂ ಅನೇಕ ಸಮಯಗಳು ಬೇಕು..!. ಕಾರಣ ನಮ್ಮ ಮನಸ್ಥಿತಿಗಳು.

Advertisement
Advertisement

ಅನೇಕ ಸಮಯಗಳಿಂದ ಕಾರ್ಕಳದ ಶಿಕ್ಷಕಿ ವಂದನಾ ರೈ ಅವರು ಮಕ್ಕಳ ಚಟುವಟಿಕೆಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕುತ್ತಿದ್ದರು. ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದರು. ಕಳೆದ ಒಂದು ವಾರದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ. ಕಾರಣ ಅವರು ಮೊಬೈಲ್‌ ಬಗ್ಗೆ ಮಕ್ಕಳಿಗೆ ಭಯ ಹುಟ್ಟಿಸುವ ವಿಡಿಯೋ ಮಾಡಿದ್ದಾರೆ ಎನ್ನುವುದು ವಿಷಯ. ಒಂಚೂರು ಅತಿರೇಕ ಆಯ್ತು ಅಂತ ಅನಿಸುವುದು ಹೌದು. ಆದರೆ, ಇಷ್ಟೂ ಸಮಯ ಮಕ್ಕಳನ್ನು ಹುರಿದುಂಬಿಸಿದ್ದು ಸತ್ಯ, ಮಕ್ಕಳು ಚಟುವಟಿಕೆಯಿಂದ ಇರುವಂತೆ ಮಾಡಿರುವುದೂ ನಿಜ. ಈಗಲೂ ಅವರು ಮಾಡಿರುವ ವಿಡಿಯೋ ಅತಿರೇಕ ಅಂತ ಹೇಳಬಹುದು, ಆದರೆ ಅವರು ಹೇಳಲು ಹೊರಟಿರುವ ವಿಷಯ ಸತ್ಯ-ವಾಸ್ತವ. ಹೇಗೆ ಪಾಸಿಟಿವ್‌ ವಿಷಯ ಬೇಗನೆ ತಲಪುವುದಿಲ್ಲವೋ, ಅದೇ ಮಾದರಿ ವಾಸ್ತವ ವಿಷಯಗಳೂ ಬೇಗನೆ ತಲಪುವುದಿಲ್ಲ. ಈ ಕಾರಣದಿಂದ ಮೊಬೈಲ್‌ ಅಪಾಯಕಾರಿ ಎಂದು ಮಕ್ಕಳಿಗೆ ತಿಳಿಯಿತು, ಭಯವೂ ಹುಟ್ಟಿತು. ಭಯವು ಸಮಸ್ಯೆಗಳನ್ನು ನಿವಾರಣೆ ಮಾಡುವುದಿಲ್ಲ, ಅದೊಂದು ನಟನೆ ಅಂತ ಗೊತ್ತಾದರೆ ಮಕ್ಕಳಿಗೂ ಗಂಭೀರತೆ ಬರುವುದಿಲ್ಲ, ಹೀಗಾಗಿ ಮತ್ತಷ್ಟು ಗೊಂದಲಕ್ಕೆ ಕಾರಣ. ಈ ಕಾರಣದಿಂದ ವಿಡಿಯೋದ ಮೇಲೆ ಆಕ್ಷೇಪ ಇರುವುದು ಹೌದು. ಆದರೆ ಹೇಳಿರುವ, ಹೇಳಲು ಹೊರಟಿರುವ ವಿಷಯ ಮೇಲೆ ಅಲ್ಲ. ಅದು ವಾಸ್ತವ ವಿಷಯ. ಅತಿಯಾದ ಮೊಬೈಲ್‌ ವೀಕ್ಷಣೆ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುವುದು, ಬಿದ್ದಿರುವುದೂ ವೈಜ್ಞಾನಿಕವಾಗಿಯೂ . ವೈದ್ಯಕೀಯವಾಗಿಯೂ ತಿಳಿದಿದೆ.

ಹಾಗಿದ್ದರೆ ಮಕ್ಕಳು ಮೊಬೈಲ್‌ನಿಂದ ದೂರ ಇರುವ ಹಾಗೆ, ಮಿತಿಯಲ್ಲಿ ನೋಡುವ ಹಾಗೆ ಅಥವಾ ರಚನಾತ್ಮಕಕವಾಗಿ ಹೇಗೆ ಬಳಕೆ ಮಾಡಬಹುದು. ಒಂದೊಂದು ಸಲಹೆ ನೀಡಿ.. ಎಂದರೆ ಬಹುಪಾಲು ಮಂದಿಯಲ್ಲಿ ಉತ್ತರವಿಲ್ಲ. “ಮಕ್ಕಳಿಗೆ ಮೊಬೈಲ್‌ ನೀಡದೇ ಇರುವುದು..” ಎಂಬುದಷ್ಟೇ ಉತ್ತರ. ಮಕ್ಕಳಿಗೆ ಮೊಬೈಲ್‌ ನೀಡದಿರುವುದು ಕೂಡಾ ಇನ್ನೊಂದು ಸಮಸ್ಯೆಗೆ ಕಾರಣ . ಅಪ್ಪ-ಅಮ್ಮ ಇಬ್ಬರೂ ಮೊಬೈಲ್‌  ನೀಡುವುದಿಲ್ಲ ಎಂದಿಟ್ಟುಕೊಳ್ಳಿ. ತರಗತಿಗೆ ಬರುವ ಎಲ್ಲಾ ಮಕ್ಕಳ ಮನೆಯಲ್ಲೂಮಗುವಿಗೆ ಮೊಬೈಲ್‌ ಸಿಗುತ್ತದೆ, ಒಂದು ಮಗುವಿಗೆ ಮಾತ್ರಾ ಮೊಬೈಲ್‌ ಸಿಗುವುದಿಲ್ಲ ಎಂದಾದರೆ, ಅದೂ ಒಂದು ರೀತಿಯ ಖಿನ್ನತೆ ಹಾಗೂ ಸಿಟ್ಟಿಗೂ ಕಾರಣವಾಗುತ್ತದೆ. ಇದರ ಪರಿಣಾಮ, ಮನೆಗೆ ಬರುವ ಅತಿಥಿಗಳಿಂದಲೂ, ಇನ್ಯಾರಿಂದಲೋ ಮೊಬೈಲ್‌ ಪಡೆದು ಮಕ್ಕಳು ನೋಡುತ್ತಾರೆ. ಆಗ ಆ ವ್ಯಕ್ತಿಯು ನೋಡುವ ಕೆಲವು ಖಾಸಗಿ ವಿಡಿಯೋ ಅಥವಾ ಮಕ್ಕಳ ಬೆಳವಣಿಗೆಗೆ ಹಿತವಲ್ಲದ, ನೆಗೆಟಿವ್‌ ಆಗಿರುವ ವಿಡಿಯೋ ನೋಡಿದರೆ ಅದು ಇನ್ನೊಂದು ಅಪಾಯಕ್ಕೆ ಕಾರಣ. ಹೀಗಾಗಿ ಮಕ್ಕಳು ಮೊಬೈಲ್‌ ನೋಡುವುದಾರೆ ಎಷ್ಟು ನೋಡಬೇಕು..? ಇದು ಇರುವ ಪ್ರಶ್ನೆ.

ಬೇರೆ ಬೇರೆ ಕಾರಣಗಳಿಂದ ಮಕ್ಕಳಿಗೆ ಮೊಬೈಲ್‌, ಇಂಟರ್ನೆಟ್‌ ಅನಿವಾರ್ಯ ಎಂಬ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ. ಈಗ 6ಜಿ ಯುಗವೂ ಆರಂಭವಾಗುವ ಸಮಯದಲ್ಲಿ “ಮಕ್ಕಳು ಮೊಬೈಲ್‌ ಬಳಕೆ ಮಾಡುವುದೇ ತಪ್ಪು” ಎನ್ನಲು ಸಾಧ್ಯವಿಲ್ಲ. ಆದರೆ ಮಕ್ಕಳು ಮೊಬೈಲ್‌ ಬಳಕೆ ಮಾಡುವ ವೇಳೆ ಪೋಷಕರೂ ಎಚ್ಚರ ಇರಬೇಕು. ಎಷ್ಟು ಸಮಯ ನೋಡಬೇಕು, ಏನು ನೋಡಬೇಕು.. ಇಷ್ಟನ್ನು ಪೋಷಕರು ವಾಚ್‌ ಮಾಡಿದರೆ ಮಕ್ಕಳ ಬೆಳವಣಿಗೆಗೂ, ಸಾಮಾಜಿಕ ಹಿತಕ್ಕೂ ಕಾರಣವಾಗುತ್ತದೆ. ದಾರಿ ತಪ್ಪುವುದು ಹಾಗೂ ದಾರಿ ತಪ್ಪಿಸುವುದು ಇದೆರಡಕ್ಕೂ ಮೊಬೈಲ್‌ ಬಳಕೆಯೇ ಸಾಕು. ಹೀಗಾಗಿ ಮಕ್ಕಳು ಅತಿಯಾದ ಮೊಬೈಲ್‌ ಬಳಕೆ ಹಾಗೂ ಮೊಬೈಲ್‌ ಬಳಕೆಯ ನಿಯಂತ್ರಣ ಎರಡಕ್ಕೂ ಪೋಷಕರೇ ಕಾರಣ. ಇದಕ್ಕಾಗಿ ಜಾಗೃತಿ ಮೂಡಿಸುವ ಶಿಕ್ಷಕಿಯ ಒಂದು ವಿಡಿಯೋ ಮೂಲಕವೇ ಹಳಿಯಬೇಕಾದ್ದಿಲ್ಲ. ಶಿಕ್ಷಕಿಯ ಇತರ ವಿಡಿಯೋಗಳನ್ನು ಗಮನಿಸಿ, ಅದನ್ನು ಮಕ್ಕಳಿಗೆ ತೋರಿಸಿ ಅಷ್ಟೇ…

ಮೊಬೈಲ್‌ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ ಹಾಳು ಮಾಡುತ್ತದೆ.  ಅದು ಮಕ್ಕಳಿಗಷ್ಟೇ ದೊಡ್ಡವರಿಗೂ ಅನ್ವಯ. ಮನಸ್ಸುಗಳನ್ನು ಬಹುಬೇಗನೆ ಕೆಡಿಸಿಬಿಡುತ್ತದೆ ಈ ಮೊಬೈಲ್‌ ಮಾಯೆ..!. ಕಳೆದ ಕೆಲವು ಸಮಯಗಳ ಹಿಂದೆ ಕೇರಳದಲ್ಲಿ 10 ನೇ ತರಗತಿ ಬಾಲಕನೊಬ್ಬ ಇದ್ದಕ್ಕಿದ್ದಂತೆ ಕೊಲೆಯಾದ. ಅದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿಯಿತು. ಆ ಬಳಿಕ ತನಿಖೆ ನಡೆದಾಗ ವಿದ್ಯಾರ್ಥಿಗಳು ಈ ಕೊಲೆಗಾಗಿ ವ್ಯಾಟ್ಸಪ್‌ ಗುಂಪು ಚರ್ಚೆ, ಇನ್ಸ್ಟಾಗ್ರಾಂ ಮಾತುಕತೆ  ಎಲ್ಲವೂ ಬೆಳಕಿಗೆ ಬಂತು.  ವಿದ್ಯಾರ್ಥಿಗಳ ನಡವಳಿಕೆಗಳ ಬಗ್ಗೆ ಗಂಭೀರವಾದ ಹೆಜ್ಜೆಗಳನ್ನು ಪೋಷಕರೇ ವಹಿಸಬೇಕಿದೆ.

Advertisement

ಇಂದು ಬಹುವಾದ ಮಾದಕ ವ್ಯಸನಗಳೂ ಮೊಬೈಲ್‌ ಮೂಲಕ ನಡೆಯುತ್ತದೆ. ಇನ್ನೊಂದು ಘಟನೆ ಹೀಗಿದೆ, ಆ ಬಾಲಕ ತರಗತಿಯಲ್ಲಿ ಟಾಪರ್.‌ ಆದರೆ ತರಗತಿಗೆ ಮೊಬೈಲ್‌ ತರುತ್ತಾನೆ. ಪೋಷಕರೂ ಈ ಬಗ್ಗೆ ಗಮನಿಸಲಿಲ್ಲ. ತರಗತಿಯಲ್ಲಿ ಪಾಠ ನಡೆಯುತ್ತಿದ್ದಾಗ ಮೊಬೈಲ್‌ ರಿಂಗಾಯ್ತು, ಅಧ್ಯಾಪಕರು ಮೊಬೈಲ್‌ ವಶಕ್ಕೆ ಪಡೆದು ಪೋಷಕರನ್ನು ಶಾಲೆಗೆ ಬರಲು ಹೇಳಿದರು. ಪೋಷಕರು ಶಾಲೆಗೆ ಬಂದಾಗ ಮಗು ಶಾಲೆಗೆ ಮೊಬೈಲ್‌ ತರುತ್ತಿರುವ ಬಗ್ಗೆ ಬೆಳಕಿಗೆ ಬಂತು. ಆದರೆ ಪೋಷಕರು ಮಗುವಿಗೆ ಮೊಬೈಲ್‌ ನೀಡಿರಲಿಲ್ಲ. ಹಾಗಿದ್ದರೆ ಮೊಬೈಲ್‌ ಬಂದಿರುವ ಬಗೆಯನ್ನು ಪೋಷಕರೇ ತನಿಖೆ ನಡೆಸಿದಾಗ, ಪೋಷಕರು ಮಾತ್ರವಲ್ಲ ಶಾಲೆಯೂ ಆತಂಕ ಪಡುವ ಸ್ಥಿತಿ ಬಂದಿತ್ತು. ಆ ವಿದ್ಯಾರ್ಥಿ ಮೊಬೈಲ್‌ ಮೂಲಕ ಅಮಲು ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದ. ಮೊಬೈಲ್‌ ಇನ್ಯಾರೋ ನೀಡಿದ್ದರು. ಆ ಬಳಿಕ ಮಗುವಿನ ಮಾನಸಿಕ ಸ್ಥಿತಿಯ ಬಗ್ಗೆಯೂ ಆತಂಕದ ವಾತಾವರಣ ಕಂಡುಬಂತು.

ಹೀಗಾಗಿ  ಒಬ್ಬ ಸಾಮಾಜಿಕ ಕಾಳಜಿ ಇರುವ ವ್ಯಕ್ತಿ, ಮಕ್ಕಳಿಗೆ ಮೊಬೈಲ್‌ ಬಳಕೆ ಕಡಿಮೆ ಮಾಡಿ ಎನ್ನಬಹುದು. ಅದನ್ನು ಪರಿಣಾಮಕಾರಿಯಾಗಿ ಹೇಗೆ ಹೇಳಬಹುದು ಎನ್ನುವುದನ್ನೂ ಹೇಳಬಹುದು. ರಚನಾತ್ಮಕವಾಗಿ ಮೊಬೈಲ್‌ ಬಳಕೆ ಮಾಡಿ ಎನ್ನಬಹುದು. ಇದುವರೆಗೆ ಆ ಶಿಕ್ಷಕಿಯೂ ಮೊಬೈಲ್‌ ಪರಿಣಾಮಕಾರಿ ಬಳಕೆಯ ಬಗ್ಗೆ ಹೇಳಿದ್ದಾರೆ ಕೂಡಾ. ಇದೊಂದು ವಿಡಿಯೋ ಮೊಬೈಲ್‌ ಬಳಕೆಯದ್ದೇ ಆದರೂ ಒಂಚೂರು ಅತಿರೇಕ ಅಂತ ಅನಿಸಿದ್ದು ಹೌದಾದರೂ ನೂರು ಉತ್ತಮ ಕೆಲಸಗಳ ನಡುವೆ ಒಂದು ಅತಿರೇಕವು ಸಮಾಜದ ಒಳಿತಿಗೇ ಆಗಿರುವುದರಿಂದ ಪಾಸಿಟಿವ್‌ ಆಗಿ ತೆಗೆದುಕೊಳ್ಳಲು ಅಥವಾ ಅದನ್ನು ಡಿಲೀಟು ಮಾಡುವಂತೆ ಅವರಿಗೇ ಹೇಳಬಾರದು ಏಕೆ..?. ಇತರ ನೂರಾರು ಅತಿರೇಕಗಳನ್ನು ಸಹಿಸಿಕೊಳ್ಳುವ ಸಮಾಜಕ್ಕೆ ಶಿಕ್ಷಕಿಯ ಕಾಳಜಿಯ ಒಳಾರ್ಥವನ್ನು ಏಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ..?

ಒಂದು ಒಳ್ಳೆಯ ಸಂಗತಿ ಪ್ರಸಾರವಾಗಲು ನೂರು ದಿನ ಬೇಕಾದರೆ ಒಂದು ನೆಗೆಟಿವ್‌ ಸಂಗತಿ ಪ್ರಚಾರ ಮಾಡಲು ಒಂದು ದಿನ ಸಾಕು. ಒಳ್ಳೆಯದು ಯಾವಾಗಲೂ ಹಾಗೆಯೇ..!  ಮನಸ್ಸು ಹಾಳು ಮಾಡುವ ಹಾಳು ಮಾಡುವ ಮೊಬೈಲ್‌ಗೆ ಒಳ್ಳೆಯದರತ್ತ ಯೋಚಿಸುವ ಹಾಗೆ ಮಾಡುವ ಒಂದು ತಿರುವು ಯಾವತ್ತೂ ಇರಲೇಬೇಕು…!

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬದುಕು ಪುರಾಣ | ಯಕ್ಷಪ್ರಶ್ನೆಯೊಳಗೆ ಧರ್ಮ ಗೂಢತೆಯ ಗೊಂಚಲು
July 27, 2025
8:16 PM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಬೀಜದ ಖಾರದ ಕಡ್ಡಿ
July 26, 2025
7:27 AM
by: ದಿವ್ಯ ಮಹೇಶ್
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಸಾಮಾನ್ಯ ಜನರ ಗ್ರಹಿಕೆಗೆ ಸಿಲುಕದ ವಿದ್ಯಮಾನಗಳು
July 23, 2025
8:56 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group