ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯದಂತೆ ದೀಪಾವಳಿ ಆಚರಿಸುವುದರ ಮಹತ್ವವನ್ನು ವಿವರಿಸಿದರು.
ಹಿಂದಿನ ಕಾಲದಲ್ಲಿ ದೀಪಾವಳಿ ಸಂದರ್ಭದಲ್ಲಿ ಎಣ್ಣೆ ಮತ್ತು ತುಪ್ಪದ ದೀಪಗಳನ್ನು ಬೆಳಗಿಸುವಂತಹ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿದ್ದವು ಎಂದು ಅವರು ಅಭಿಪ್ರಾಯಪಟ್ಟರು. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪಟಾಕಿಗಳ ಸ್ವರೂಪ ಇಂದಿನ ಪಟಾಕಿಗಳಿಗಿಂತ ಭಿನ್ನವಾಗಿತ್ತು. ಅವುಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಬಳಕೆ ಇರಲಿಲ್ಲ ಮತ್ತು ಕೀಟಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತಿದ್ದವು ಎಂದು ತಿಳಿಸಿದರು.
ಎಣ್ಣೆ ಮತ್ತು ತುಪ್ಪದ ದೀಪಗಳನ್ನು ಬೆಳಗಿಸುವುದು ಪರಿಸರ ಶುದ್ಧೀಕರಣದ ಆಶಯವನ್ನು ಒಳಗೊಂಡಿತ್ತು. ಪರಿಸರ ಶುದ್ಧವಾಗಿದ್ದರೆ ಜೀವನವೂ ಶುದ್ಧವಾಗಿರುತ್ತದೆ ಎಂಬ ಚಿಂತನೆಯೊಂದಿಗೆ ಹಬ್ಬಗಳನ್ನು ಆಚರಿಸಬೇಕು ಎಂದು ಅವರು ಹೇಳಿದರು.
ಕೃಷಿ ಮತ್ತು ಸರಳ ಜೀವನಶೈಲಿಯ ಮಹತ್ವ : ಹಿಂದಿನ ಕಾಲದಲ್ಲಿ ರಾಜರು ಸೇರಿದಂತೆ ಸಮಾಜದ ಬಹುತೇಕ ಜನರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದರು. ರೈತರು ತಾವು ಬೆಳೆದ ಆಹಾರವನ್ನು ಪರಸ್ಪರ ಹಂಚಿಕೊಂಡು ಸರಳ ಜೀವನ ನಡೆಸುತ್ತಿದ್ದರು ಎಂದು ಮೋಹನ್ ಭಾಗವತ್ ಸ್ಮರಿಸಿದರು.
ಪ್ರತಿದಿನ ಸಾತ್ವಿಕ ಆಹಾರ ಸೇವಿಸುವುದು ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ದೂರವಿರುವುದು ಆರೋಗ್ಯಕರ ಬದುಕಿಗೆ ಅಗತ್ಯ. ಸಮಾಜದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯಕರ ಬದುಕಿಗೆ ಧನ್ವಂತರಿ ಪೂಜೆಯ ಮಹತ್ವ : ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿಗಳ ಮಹತ್ವವನ್ನು ಸಾರುವ ಧನ್ವಂತರಿ ಪೂಜೆಗೂ ವಿಶೇಷ ಮಹತ್ವವಿದೆ ಎಂದು ಅವರು ಹೇಳಿದರು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ವೈಯಕ್ತಿಕ ಜವಾಬ್ದಾರಿಯಷ್ಟೇ ಅಲ್ಲದೆ, ಸಮಾಜದ ಹಿತದೃಷ್ಟಿಯಿಂದಲೂ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಂಪ್ರದಾಯಿಕ ಆಚರಣೆಗಳ ಮೌಲ್ಯವನ್ನು ಅರಿತು, ಪರಿಸರ ಮತ್ತು ಆರೋಗ್ಯದ ಕಾಳಜಿಯೊಂದಿಗೆ ಹಬ್ಬಗಳನ್ನು ಆಚರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
RSS chief Mohan Bhagwat has called for celebrating Diwali in an environmentally conscious manner while respecting traditional practices. Speaking at an event in Nagpur, Maharashtra, he highlighted the traditional use of oil and ghee lamps and discussed the importance of healthy food habits, agriculture and simple living. He also emphasised the significance of Dhanvantari Puja and maintaining good health to fulfil social responsibilities.


