ಮಲೆನಾಡಿನ ರೈತರಿಗೆ ಇತ್ತೀಚಿನ ವರ್ಷಗಳಲ್ಲಿ ಎದುರಾಗುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಅಂಕೆತಪ್ಪಿದ ಹವಾಮಾನ ಮತ್ತು ಕಾಡು ಪ್ರಾಣಿಗಳಿಂದ ಕೃಷಿ ಭೂಮಿಯ ಮೇಲಿನ ದಾಳಿ. ಈ ಪ್ರಾಣಿಗಳ ಸಂಘರ್ಷದಲ್ಲೇ ಅತಿ ಹೆಚ್ಚು ಸಮಸ್ಯೆ ಯಾಗಿರುವುದು “ಮಂಗನ ಕಾಟ” ಆ ಬಗ್ಗೆ ಒಂದು ಚಿಂತನೆ ಚರ್ಚೆ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಅಚ್ಚ ಕಾಡಿನ ತಪ್ಪಲಿನಲ್ಲಿ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಸಾವಿರಾರು ಕೃಷಿಕರಿದ್ದಾರೆ. ಆಗಲೂ ಆಗೊಮ್ಮೆ ಈಗೊಮ್ಮೆ ಕಾಡುಕೋಣ , ಜಿಂಕೆ ಕಡವೆ , ಕಾಡು ಹಂದಿ ಮತ್ತು ಮಂಗಗಳ ಹಾವಳಿ ಇರುತ್ತಿತ್ತು. ಆ ನಡುವೆಯೂ ನೆಮ್ಮದಿಯಿಂದ ಅಡಿಕೆ, ಭತ್ತ ಬೆಳೆಯುತ್ತಿದ್ದರು.ಭತ್ತದ ಗದ್ದೆ ಕೊಯಿಲಿನ ನಂತರ
ಊರ ಸೌತೆ, ಕುಂಬಳ, ಮನೆ ಖರ್ಚಿಗಾಗುವಷ್ಟು ಹುರಳಿ , ಉದ್ದು , ಕಬ್ಬು ಹಾಕಿಕೊಂಡು ನಿಜವಾದ ಅನ್ನದಾತರಾಗಿದ್ದರು.
ಈ ಮೂವತ್ತು ನಲವತ್ತು ವರ್ಷಗಳ ಹಿಂದೆ ಮಲೆನಾಡು ಹೀಗಿತ್ತು. ಆ ಸಮಯಕ್ಕೆ ಮತ್ತು ಒಂದೆರೆಡು ದಶಕದ ಮೊದಲು ನಡು ಮಲೆನಾಡಿನ ವ್ಯಾಪ್ತಿಯಲ್ಲಿ ವಿವಿಧ ನದಿಗಳಿಗೆ ಆಣೆಕಟ್ಟುಗಳು ನಿರ್ಮಾಣವಾಗ ತೊಡಗಿದವು.
ಆ ಆಣೆಕಟ್ಟುಗಳ ವ್ಯಾಪ್ತಿಯೊಳಗಿನ ಜನರು ಜಮೀನು ಮನೆ ಕಳೆದುಕೊಂಡು ಸಂತ್ರಸ್ತರಾದರು. ಇವರಲ್ಲಿ ಕೆಲವರಿಗೆ ಪರಿಹಾರ ಸಿಕ್ಕಿ ಬೇರೆ ಜಾಗದಲ್ಲಿ ಜಮೀನು ಕೊಂಡು ಜೀವನ ನೆಡೆಸಿದರು. ಮತ್ತೆ ಒಂದಷ್ಟು ಜನ ಬೇರೆ ಪ್ರದೇಶಕ್ಕೆ ವಲಸೆ ಹೋದರು. ಒಂದಷ್ಟು ಜನರು ಆಣೆಕಟ್ಟಿನಾಚೆಯ ಉಳಿದ ಮಲೆನಾಡಿನ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡತೊಡಗಿದರು.
ಆ ಬೆಳವಣಿಗೆ ಸಂಭವಿಸುವಾಗುವ ಹೊತ್ತಿಗೇ ಮಲೆನಾಡಿನ ಹುಲ್ಲುಗಾವಲು ಕುರುಚಲು ಕಾಡಿನ ಗುಡ್ಡ ಪ್ರದೇಶವನ್ನು ಸರ್ಕಾರ ಅನುಪಯುಕ್ತ ಬಂಜರು ಭೂಮಿಯೆಂದು ಪರಿಗಣಿಸಿ ಮೈಸೂರು ಪೇಪರ್ ಮಿಲ್ಸ್ ಗೆ ಪಲ್ಪ್ ವುಡ್ ಗೆ ಪ್ಲಾಂಟೇಷನ್ ಬೆಳೆಸಲು ನಲವತ್ತು ವರ್ಷಗಳ ಕಾಲದ ಗುತ್ತಿಗೆ ನೀಡಿತು. ಅಲ್ಲಿಗೆ ಮಲೆನಾಡಿನ ತೊಂಬತ್ತು ಪ್ರತಿಶತ ಅರಣ್ಯ ಒತ್ತುವರಿಯಾಯಿತು.
ಈ ಆಣೆಕಟ್ಟು, ಎಂಪಿಎಂ ಮತ್ತು ಜನಸಂಖ್ಯೆಯ ಹೆಚ್ಚಳದ ಕಾರಣದ ಒತ್ತುವರಿಯಿಂದ , ಇತರೆ ಒತ್ತಡದಿಂದ
ಆ ಕಾಡಿನಲ್ಲಿದ್ದ ಕಡವೆ ಜಿಂಕೆಗಳು, ಹುಲಿ , ಚಿರತೆ , ಕಾಡುಕೋಣ , ಕಾಡು ಹಂದಿಗಳು ಆಹಾರ ವಾಸದ ಸಮಸ್ಯೆಯ ಕಾರಣದಿಂದಾಗಿ ದಿಕ್ಕಾ ಪಾಲಾದವು. ಹುಲ್ಲುಗಾವಲು ನಾಶವಾದ ಕಾರಣ ಸಸ್ತನಿ ಪ್ರಾಣಿಗಳು ನಾಶವಾದವು . ಇದರಿಂದಾಗಿ ಈ ಕಾಡು ಕೋಣ ಜಿಂಕೆಯಂತಹ ಸಸ್ತನಿಗಳನ್ನು ನಂಬಿಕೊಂಡ ಹುಲಿ ಚಿರತೆಗಳಿಗೆ ಆಹಾರವಿಲ್ಲದೇ ಸತ್ತು ಹೋದವು.
ಉಳಿದವು ಶಿಖಾರಿಯಾದವು ಹಾಗೂ ಉಳಿದವು ಆಹಾರದ ಕೊರತೆಯ ಕಾರಣದಿಂದಾಗಿ ಮನುಷ್ಯನ ಕೃಷಿ ಭೂಮಿಗೆ ದಾಳಿ ಇಡತೊಡಗಿವೆ.
ಈ ಮೂವತ್ತು ನಲವತ್ತು ವರ್ಷಗಳಲ್ಲಿ ವೈದ್ಯಕೀಯ ಕ್ರಾಂತಿಯ ಕಾರಣದಿಂದಾಗಿ ಜನರ ಸಾವಿನ ಸಂಖ್ಯೆ ಕಡಿಮೆಯಾಗಿ ಜನಸಂಖ್ಯೆ ಅತಿಯಾಗಿ ವೃದ್ಧಿಸಿದೆ. ಒಂದನ್ನೊಂದು ತಿನ್ನುವ ಆಹಾರ ಸರಪಳಿ ಕಡಿದು ಹೋಗಿ ಮದ್ಯೆ ಮದ್ಯೆ
ಕೆಲವೇ ಜಾತಿಯ ಜೀವಿಗಳು ಹೆಚ್ಚುತ್ತಾ ಹೋಗುತ್ತಿದೆ. ಆ ಸಾಲಿನಲ್ಲಿ ಮಂಗ ಅತಿ ಪ್ರಮುಖ ಪ್ರಾಣಿಯಾಗಿದೆ…!!
ಮಂಗನನ್ನ ಆಹಾರವಾಗಿ ಇಷ್ಟ ಪಟ್ಟು ತಿನ್ನುತ್ತಿದ್ದ ಚಿರತೆಗಳ ಸಂಖ್ಯೆ ಕಡಿಮೆಯಾಗಿದ್ದು ಜನ ಸಂಖ್ಯಾ ಸ್ಪೋಟ ದಂತೆಯೇ ಮಂಗಗಳ ಸಂಖ್ಯೆ ಹೆಚ್ಚಾಗಿ “ವಾನರ ಸಂಖ್ಯಾ ಸ್ಪೋಟ” ವಾಗಲು ಮುಖ್ಯ ಕಾರಣವಾಗಿದೆ.ಇದರ ಜೊತೆಯಲ್ಲಿ ಮಂಗನನ್ನು ಭಾರತೀಯರು ಹನುಮಂತನ ಸ್ವರೂಪಿಯೆಂದೂ ಭಕ್ತಿಯಿಂದ ನೋಡುವುದರಿಂದ ಮಂಗಗಳು ಮನುಷ್ಯನ ಪ್ರಹರಣಾಯುಧ ಗಳಿಂದ ಬಚಾವಾಗಿ ಉಳಿದು ಮನುಷ್ಯನಿಗೇ ಸವಾಲಾದ ಕಾರಣ ವಾಗಿದೆ.
ಆದರೆ, ಒಂದು ಗಮನಾರ್ಹ ಸಂಗತಿ ಏನೆಂದರೆ ಈಗ್ಗೆ ಮೂವತ್ತು ವರ್ಷಗಳ ಹಿಂದೆ ಕಾಡಿನಲ್ಲಿದ್ದ ಮಂಗಗಳು ಇತರೆ ವನ್ಯ ಮೃಗಗಳಂತೆ ಒತ್ತವರಿ ಮಾನವ ಸಂಘರ್ಷದಿಂದ ನಾಶವಾಗಿವೆ. ಇದಕ್ಕೆ ಒಂದು ಉದಾಹರಣೆ ಎಂದರೆ ವಾನರ ಜಾತಿಯ “ಸಿಂಗಳಿಕ”.
ಸಿಂಗಳಿಕ ಸಂತತಿ ಕಾಡಿನಲ್ಲೇ ಉಳಿದು ಈಗ ಅಳಿವಿನಂಚಿಗೆ ಬಂದಿದೆ.ಆದರೆ ಕೆಲವು ಮಂಗಗಳ ಗುಂಪುಗಳು ಈಗಿರುವ ಮಂಗಗಳು ಹಿಂದಿನಿಂದಲೂ ಪೇಟೆ ಪಟ್ಟಣದ ದೇವಸ್ಥಾನ ಇತರೆ ಜಾಗದಲ್ಲಿ ಮನುಷ್ಯನ ಹತ್ತಿರದಲ್ಲೇ ವಾಸ ಮಾಡುತ್ತಿದ್ದವು. ಅವೇ ಪಟ್ಟಣವಾಸಿಗಳು ಮಲೆನಾಡಿನ ಹಳ್ಳಿಗೆ ತಂದು ಬಿಟ್ಟ ” ವಲಸೆ ಮಂಗ” ಗಳಾಗಿವೆ. ಕಾಡಿನಲ್ಲಿ ಉಳಿದ ಮೂಲ ಆದಿವಾಸಿ ವಾನರಗಳು ಅಳಿದು ಹೋಗಿವೆ.
ಕಾಡಿನಿಂದ ಪೇಟೆ ಪಟ್ಟಣ ಸೇರಿದ ಮಂಗಗಳು ಮಾತ್ರ ಅತಿಯಾಗಿ ತಮ್ಮ ಸಂಖ್ಯೆ ವೃದ್ಧಿಸಿಕೊಂಡು ನಗರ ವಾಸಿಗಳಿಗೆ ಇನ್ನಿಲ್ಲದ ಕಾಟ ಕೊಡುತ್ತಿದ್ದವು. ನಗರ ಪಾಲಿಕೆ , ಪುರ, ಪಂಚಾಯತಿಗಳು ಈ ಪೀಡಕ ವಾನರ ಸಂತತಿಯನ್ನು ಅರಣ್ಯ ಗಳಿಗೆ ಬಿಟ್ಟು ಬರಲು ವ್ಯವಸ್ಥೆ ಮಾಡಿದರೆ ಎಂದಿನಂತೆ ಪರ್ಸೆಂಟೇಜು ವ್ಯವಸ್ಥೆ ಮಂಗಗಳನ್ನ ಕಾಡಂಚಿನ ಊರುಗಳಿಗೆ ಬಿಟ್ಟು ಬಂದಿದೆ.
ಇದೀಗ ಮಲೆನಾಡಿನ ಹಳ್ಳಿ ಗಳಲ್ಲಿರುವ ಮಂಗಗಳನ್ನ ಪೇಟೆ ಪಟ್ಟಣ ದಿಂದ ತಂದು ಬಿಟ್ಟವು. ಮಲೆನಾಡಿನಲ್ಲಿ ಒಂದಷ್ಟು ಜನರು ಮಂಗಗಳನ್ನ ಹಿಡಿದು ಪಂಜರದಲ್ಲಿ ತುಂಬಿ ರಾತ್ರೋರಾತ್ರಿ ಪಕ್ಕದ ಊರಿಗೆ ಬಿಟ್ಟು ಬರುವ ವ್ಯವಹಾರ ಮಾಡತೊಡಗಿದ್ದಾರೆ.
ಕೆಲವು ಸತಿ ಪಟ್ಟಣ ದ ಕಂಪೌಂಡ್ ಮನೆಯ ಜನರು ಈ ಮನೆಯ ಕಂಪೌಂಡ್ ನ ಕಸವನ್ನು ಆ ಮನೆಗೆ ಚೆಲ್ಲುವುದೂ,ಆ ಮನೆಯ ಕಂಪೌಂಡ್ ನ ಮಾಲಿಕರು ಈ ಮನೆಯ ಕಂಪೌಂಡ್ ನೊಳಗೆ ಕಸ ಸುರಿದಂತೆ ಯೂ ಮಂಗಗಳು ಊರಿಂದ ಊರಿಗೆ ಟ್ರಾನ್ಸಫರ್ ಆಗುತ್ತಿವೆ.
ಮಂಗ ನ ಕಾಟ ತಡೆಯಲಾಗದೇ ಕೆಲವು ರೈತರು ಮಂಗಗಳಿಗೆ ಸಾಮೂಹಿಕವಾಗಿ ವಿಷ ಕೊಟ್ಟು ಕೊಂದ ಹಲವಾರು ಘಟನೆ ಗಳು ನೆಡೆದಿವೆ ಮತ್ತು ನೆಡೆಯುತ್ತಿವೆ.
ನಿಜ… ಮಂಗಗಳನ್ನ ಸಾಮೂಹಿಕವಾಗಿ ಆ ಊರಿನಿಂದ ಬೇರೆ ಊರಿಗೆ ಬಿಟ್ಟು ಬರುವುದು ಇಲ್ಲವೇ ಮಂಗಗಳನ್ನ ಸಾಮೂಹಿಕವಾಗಿ ಕೊಲ್ಲುವುದು ಮಾತ್ರ ಮಂಗಗಳ ನಿಯಂತ್ರಣಕ್ಕಿರುವ ಸದ್ಯದ ಪರಿಹಾರವಾಗಿದೆ…!!. ಮಾನವ ಕುಲಕ್ಕೆ ಅತಿ ಹತ್ತಿರವಾಗಿರುವ ದೈವ ಸ್ವರೂಪಿ ಎಂಬ ಕಾರಣಕ್ಕೆ ಮನುಷ್ಯ ಮಂಗನನ್ನ ಸಹಿಸಿಕೊಂಡಿದ್ದಾನೆ. ಆದರೂ ಮಂಗನ ಕಾಟ ಸಹಿಸಲಸಾಧ್ಯ…
ಮಂಗ ಬರೀ ಮನುಷ್ಯನ ಮನೆ ಕೃಷಿ ಗೆ ಮಾತ್ರವಲ್ಲದೇ ಇತರೆ ವನ್ಯ ಜೀವಿಗಳಿಗೂ ತೊಂದರೆ ಕೊಡುತ್ತಿವೆ..!!. ಹತ್ತು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಆವರಿಸಿದ ಬಿದುರು ಕಟ್ಟೆ ರೋಗದಿಂದ ಬಿದುರು ಮೆಳೆ ಒಣಗಿ ಕರಕಲಾಗಿ ನಾಶವಾಗಿ ಹೋದವು . ಈ ವಿನಾಶದಿಂದ ಪಕ್ಷಿಗಳ ಆವಾಸ ಸ್ಥಾನಕ್ಕೆ ದೊಡ್ಡ ತೊಂದರೆಯಾಯಿತು. ಬಿದುರು ಕಟ್ಟೆಯ ನಂತರ ಪಕ್ಷಿಗಳಿಗೆ ಮಾಮೂಲಿ ಮರಗಳನ್ನು ಗೂಡು ಕಟ್ಟಲು ಆಶ್ರಯಿಸಿದರೆ ಮಂಗಗಳು ಆ ಮರವನ್ನು ಹತ್ತಿ ಹಕ್ಕಿಗಳ ಗೂಡನ್ನು ಹಾಳು ಮಾಡಿ ಮರಿ ಮೊಟ್ಟೆ ನಾಶ ಮಾಡಿ ಪಕ್ಷಿ ಸಂಕುಲಗಳಿಗೆ ನೆಲೆ ಇಲ್ಲದಂತೆ ಮಾಡುತ್ತಿವೆ.
ಇದೇ ತರಹ ಹಣ್ಣು ಹಂಪಲಿನ ಮರಗಳನ್ನು ಮಂಗಗಳಂತೆ ಅಳಿಲು , ಮೊಲ, ಇತರೆ ಚಿಕ್ಕ ಪುಟ್ಟ ಮರಿಗಳು ಕೂಡ ಆಹಾರಕ್ಕಾಗಿ ಅವಲಂಬಿಸಿದೆ. ಮಂಗಗಳು ಈ ಮರಗಳ ಹೂ ಆಗಿ ಕಾಯಿ ಕಚ್ಚುವ ಹಂತದಲ್ಲೇ ನಾಶ ಮಾಡುತ್ತಿವೆ. ಯಾವುದೇ ಪರಿಸರದಲ್ಲಿ ಏಕ ರೂಪದ ಸಸ್ಯ, ಪ್ರಾಣಿ ಪ್ರಬೇಧಗಳು ಮನುಷ್ಯನನ್ನೂ ಸೇರಿಸಿ ಹೆಚ್ಚಾಗುವುದು ಅನೈಸರ್ಗಿಕವಾದದ್ದು. ಪರಿಸರ ವಿವಿಧತೆ ಯಿಂದ ಕೂಡಿರಬೇಕಾದ್ದು.ಈ ವಿವಿಧತೆಯ ಸಸ್ಯ ಪ್ರಾಣಿ ಸಂಕುಲಗಳು ಈ ಜೀವಿಗಳಲ್ಲಿ ಪರಸ್ಪರ ಕೊಂಡಿಯಿಂದ ಅಂಟಿ ಕೊಂಡಿರುತ್ತದೆ.ಆದರೆ ಇಂದು ಕೊಂಡಿಯ ಅನೇಕ ಜೀವಿಗಳು ವಿನಾಶವಾಗಿ ಪ್ರಕೃತಿ ವಿಕೋಪಗೊಂಡಿದೆ..
ಹಾಗೆಯೇ ಈ ವಾನರಗಳ ಸಂಖ್ಯೆ ಒಂದು ಸಾವಿರ ಎಕರೆ ಅರಣ್ಯ ಭೂಮಿಯಿರುವ (ಅರಣ್ಯ ಇಲಾಖೆಯ ಲೆಕ್ಕದಲ್ಲಿ ) ಅರಣ್ಯ ಭೂಮಿ ಕೃಷಿ ಭೂಮಿಯನ್ನೂ ಸೇರಿಸಿ ಪ್ರದೇಶದಲ್ಲಿ ಇರಬಹುದಾದಕ್ಕಿಂತ ಹತ್ತಾರು ಪಟ್ಟು ಹೆಚ್ಚಿದೆ. ಮಂಗಗಳು ಗುಂಪಿನಲ್ಲಿ ವಾಸಿಸುವಂತವು.ಒಂದು ಗುಂಪಿನಲ್ಲಿ ನಲವತ್ತು ಮಂಗಗಳಿಂದ ಆರಂಭವಾಗಿ ಅರವತ್ತು ಮಂಗಗಳಿರುತ್ತದೆ. ಮಂಗಗಳು ಮನುಷ್ಯ ಹೇಗೆ ಊರಿಂದ ಊರಿಗೆ ಒಂದು ನಿರ್ದಿಷ್ಟವಾದ ರಸ್ತೆಯಲ್ಲಿ ಓಡಾಡುತ್ತಾನೋ ಹಾಗೆಯೇ ನಿರ್ದಿಷ್ಟವಾದ ಮರಗಿಡ ಮನೆಗಳನ್ನು ಹಾದೇ ಹೋಗುತ್ತದೆ.
ಒಂದು ಗುಂಪಿನ ಮಂಗಗಳು ಒಂದು ನಿರ್ದಿಷ್ಟ ಪ್ರದೇಶದ ” ಅರಣ್ಯ ಮನೆಗಳು ಮತ್ತು ಕೃಷಿ ಭೂಮಿಯನ್ನು” ಸೇರಿ ನೂರರಿಂದ ನೂರೈವತ್ತು ಎಕರೆಯನ್ನು ಆಕ್ರಮಿಸಿಕೊಂಡಿರುತ್ತದೆ. ಒಂದು ಗುಂಪಿನ ಪಾಳೆಗಾರಿಕೆಯ ಭೂಮಿ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಇನ್ನೊಂದು ಗುಂಪಿನ ಮಂಗಗಳು ಹಸ್ತ ಕ್ಷೇಪ ಮಾಡುವುದಿಲ್ಲ…!!. ಇದೇ ಕಾರಣಕ್ಕೆ ಹಲವಾರು ಮಂಗಗಳ ಗುಂಪಿನ್ನು ಒಂದೇ ಕಡೆಯಲ್ಲಿ ಸೇರಿಸಡಲು ಸಾಧ್ಯವಿಲ್ಲ.
ಮಂಗಗಳು ಮನುಷ್ಯನ ನಂತರ ಅಗತ್ಯಕ್ಕಿಂತ ಹೆಚ್ಚು ಕೃಷಿ ಅರಣ್ಯ ಉತ್ಪನ್ನವನ್ನು ನಾಶ ಮಾಡುತ್ತವೆ.ಮಂಗಗಳು ಮನುಷ್ಯನ ನಂತರ ಅಥವಾ ಮನುಷ್ಯನಷ್ಟೇ ಪ್ರಕೃತಿ ವಿನಾಶಕಗಳು.ಮಂಗಗಳು ಮಲೆನಾಡಿನಲ್ಲಿ ಕೃಷಿಕರಿಗೆ ಕಡಿಮೆ ಪ್ರಮಾಣದ ನಷ್ಟ ಉಂಟು ಮಾಡುವ ಬೆಳೆಯೆಂದರೆ ಅಡಿಕೆ ಮತ್ತು ಕಾಳುಮೆಣಸು.
ಮಂಗಗಳು ತಾವು ಹಾದು ಹೋಗುವ ಅಡಿಕೆ ತೋಟದ ಒಂದು ಎಕರೆ ಆ ಕಡೆ ಈ ಕಡೆಯ ಶೇಕಡಾ ನಲವತ್ತು ಪ್ರತಿಶತ ಅಡಿಕೆ ಗೊನೆಯ ಕಾಯಿ ಹಾಳು ಮಾಡುತ್ತದೆ. ಮಂಗಗಳ ಹಾದಿಯಾಚೆ ಈಚೆಯ ಜಾಗವನ್ನು monkey buffer zone ಎನ್ನುಬಹುದೇನೋ. ಮಂಗಗಳು ಸಾಮಾನ್ಯವಾಗಿ ದೊಡ್ಡ ಅಡಿಕೆ ತೋಟದ ಕೋಗಿನ ಮದ್ಯೆ ಭಾಗದಲ್ಲಿ ಇಪ್ಪತ್ತು ಶೇಕಡಾ ಅಡಿಕೆ ಫಸಲನ್ನು ಮಾತ್ರ ಹಾಳು ಮಾಡುತ್ತವೆ. ಮದ್ಯೆ ಭಾಗದ ಅಡಿಕೆ ತೋಟದ ಫಸಲು ಸ್ವಲ್ಪ ಸೇಫ್.
ಮಂಗಗಳು ಅಡಿಕೆ ಗೊನೆಯ ಅಡಿಕೆ ಕಾಯಿ ನೀರಿನ ರಸ ತುಂಬಿ ಕಾಯಿ ಗಟ್ಟಿಯಾಗುವ ಇಪ್ಪತ್ತು ದಿನಗಳ ಕಾಲದಲ್ಲಿ ಮಾತ್ರ ತಿಂದು ಉದುರಿಸಿ ಅಡಿಕೆ ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತದೆ. ಈ “ಅಡಿಕೆ ನೀರಾಡುವ” ಸಮಯದಲ್ಲಿ ಈ ನೀರಿನಂಶದಲ್ಲಿ “ಮತ್ತೇರುವ ಅಮಲು ಕಾರಕ” ಇರುತ್ತದೆ. ಆ ಕಾರಣಕ್ಕೆ ಅಡಿಕೆ ಕಾಯಿಯನ್ನು ತಿಂದು ಜೊತೆಯಲ್ಲಿ ಮತ್ತೇರಿದ ಕಾರಣ ಇನ್ನಷ್ಟು ಹೆಚ್ಚು ನಷ್ಟವನ್ನು ಮಾಡುತ್ತವೆ.
ಮಂಗಗಳು ಭಾರೀ ಮಳೆಗಾಲದ ಹವಾಮಾನ ಪ್ರತಿಕೂಲ ವಾತಾವರಣ ಇರುವ ಸಂಧರ್ಭದಲ್ಲಿ ತೋಟದಿಂದ ತೋಟಕ್ಕೆ ಲಗ್ಗೆಯಿಡುವಾಗ ಆ ಅಡಿಕೆ ತೋಟದ ಮರದಲ್ಲಿ ಅಡಿಕೆ ಕೊಳೆಯ ಶಿಲೀಂಧ್ರ ಇದ್ದಲ್ಲಿ ಆ ಮಂಗಗಳ ಮೂಲಕ ಇನ್ನೊಂದು ಆರೋಗ್ಯದಾಯಕ ಮರದ ಅಡಿಕೆ ಗೊನೆಗೆ ಅಡಿಕೆ ಕೊಳೆ ಶಿಲೀಂದ್ರ ಪ್ರಸರಣ ವಾಗುತ್ತದೆ.
ಬಹುಶಃ ಇದೇ ಬಗೆಯಲ್ಲಿ ಅಡಿಕೆ ಎಲೆಚುಕ್ಕಿ ರೋಗ ಶಿಲೀಂಧ್ರ ವೂ ಈ ಮಂಗಗಳ ಸಂಚಾರದ ಮೂಲಕವೂ ಪ್ರಸರಣ ವಾಗಿರಲಿಕ್ಕೂ ಸಾಕು. ಮಂಗಗಳ ಕಾಟ ಮಲೆನಾಡಿನ ರೈತರು ಭತ್ತ, ಕಬ್ಬು, ಧಾನ್ಯ ಮತ್ತು ತರಕಾರಿ ಬೆಳೆಯದಂತೆ ತಡೆಯಾಗಿವೆ.
ಮಲೆನಾಡಿಗರು ತಮ್ಮ ಮನೆ ಖರ್ಚಿಗಾಗುವಷ್ಟಾದರೂ ಮನೆಯಂಗಳದಲ್ಲಿ ಹಣ್ಣು ತರಕಾರಿ ಬೆಳೆದುಕೊಳ್ಳುತ್ತಿದ್ದರು.
ಬೀನ್ಸು ಬದನೆ ಹರವೆ ಸೌತೆ ಇತರೆ ತರಕಾರಿಗಳನ್ನೂ, ಇವತ್ತು ಪ್ರತಿ ಮನೆಯ ಮಧುಮೇಹಗಳಿರುವ ಸಂದರ್ಭದಲ್ಲಿ ಪೇರಲೆ, ಪಪ್ಪಾಯದಂತಹ ಹಣ್ಣುಗಳೂ, ಚಿಕ್ಕು, ಮಾವು ಇತರೆ ಎಲ್ಲಾ ಕಡೆಗಳಲ್ಲೂ ಸಲೀಸಾಗಿ ಬೆಳೆಯಬಹುದಾದ ಹಣ್ಣಿನ ಬೆಳೆಗಳನ್ನೂ ಮಲೆನಾಡಿನಲ್ಲಿ ಬೆಳೆಯಲಾಗುತ್ತಿಲ್ಲ.
ಅಡಿಕೆ ಕಾಳುಮೆಣಸು ಬಿಟ್ಟು ನಮ್ಮ ಸಮಶೀತೋಷ್ಣ ವಲಯದಲ್ಲಿ ಸಲೀಸಾಗಿ ಲಾಭದಾಯಕ ವಾಗಿ ಬೆಳೆಯ ಬಹುದಾದ ದೇಶ ವಿದೇಶಗಳ ತಳಿಗಳ ಹಣ್ಣು ತರಕಾರಿ ಬೆಳೆಗಳನ್ನು ಕೇವಲ ಮಂಗನ ಕಾಟದ ಕಾರಣಕ್ಕೆ ಬೆಳೆಯಲಾಗುತ್ತಿಲ್ಲ.
ಮಂಗನ ವಿಷಯದಲ್ಲಿ ಬರೀ ಬೆಳೆದು ನಷ್ಟವಾಗುವುದಲ್ಲದೇ ” ಬೆಳೆಯಲಾಗದೇ ನಷ್ಟ” ಅನುಭವಿಸುತ್ತಿರುವ ರೈತರಿಗೆ ಪರಿಹಾರ ಏನು..ಇವತ್ತು ಎಲೆಚುಕ್ಕಿ ರೋಗದಿಂದ ಅಡಿಕೆ ತೋಟ ನಾಶವಾದಲ್ಲಿ ಮಲೆನಾಡಿಗೆ ಯಾವುದೇ ಪರ್ಯಾಯ ಬೆಳೆ ಇಲ್ಲ…..
ಅದಕ್ಕೆ ಅತಿ ಮುಖ್ಯ ಕಾರಣ ಮಂಗನ ಕಾಟ…!!
ಒಂದು ಹಳ್ಳಿಯಲ್ಲಿ ಐದನೂರು ಕೃಷಿ ಕುಟುಂಬವಿದ್ದಲ್ಲಿ… ಒಂದು ಕುಟುಂಬ ಇಂದು ವಾರಕ್ಕೆ ಕನಿಷ್ಠ ನೂರೈವತ್ತು ರೂಪಾಯಿ ತರಕಾರಿ ಕೊಂಡರೆ , ಆರೋಗ್ಯ ವರ್ಧನೆಗೆ ನೂರು ರೂಪಾಯಿ ಹಣ್ಣು ಕೊಂಡಲ್ಲಿ ಇನ್ನೂರೈವತ್ತು ರೂಪಾಯಿ ವಾರಕ್ಕೆ ಖರ್ಚು ಎಂದು ಕೊಂಡರೆ ತಿಂಗಳಿಗೆ ಸಾವಿರ ರೂಪಾಯಿಯಂತೆ ವರ್ಷಕ್ಕೆ ಹನ್ನೆರಡು ಸಾವಿರ ರೂಪಾಯಿ ಹಣ್ಣು ತರಕಾರಿಗೆ ಬಂಡವಾಳ ಹಾಕುತ್ತಾನೆ. ಇದನ್ನು ಐದುನೂರು ಕುಟುಂಬ ಕ್ಕ ಗುಣಿಸಿದರೆ ರೂಪಾಯಿ ಆರು ಲಕ್ಷ ಹಣವನ್ನು ವ್ಯಯವಾಗುತ್ತದೆ. ಇದು ಕನಿಷ್ಠ ಅಂದಾಜು ಮಾತ್ರ.
ಒಂದು ಗುಂಪಿನ ಮಂಗಗಳು ಒಂದು ಊರಿನ ನೂರೈವತ್ತು ಎಕರೆ ಅಡಿಕೆ ತೋಟದ ಫಸಲಿನ ನಷ್ಟ ಮಾಡುತ್ತದೆ ಎಂದು ಅಂದಾಜು ಲೆಕ್ಕಾಚಾರ ಹಾಕಿದರೆ..ಒಂದು ಮಂಗನ ಗುಂಪು ನೂರು ಎಕರೆ ಅಡಿಕೆ ತೋಟದಲ್ಲಿ ತಲಾ ಎಕರೆ ಗೆ ಎರಡು ಕ್ವಿಂಟಾಲ್ ಅಡಿಕೆ ನಷ್ಟ ಮಾಡುತ್ತದೆ ಎಂದು ಅವರೇಜ್ ಲೆಕ್ಕಾಚಾರ ಹಾಕಿದರೆ ಕನಿಷ್ಠ ಎಂಬತ್ತು ಲಕ್ಷ ರೂಪಾಯಿ ಮೊತ್ತದ ಅಡಿಕೆ ಉತ್ಪನ್ನವನ್ನು ಒಂದು ಗುಂಪಿನ ಮಂಗಗಳು ನಷ್ಟ ಮಾಡು ತ್ತದೆ ಎಂಬುದು ಅಚ್ಚರಿಯ ವಿಷಯವಲ್ವ…? ಇದಕ್ಕಿಂತ ಹೆಚ್ಚೇ ನಷ್ಟ ವಾಗಬಹುದು.
ಮನುಷ್ಯನ ತಲಾದಾಯ ಹದಿನೈದು ಇಪ್ಪತ್ತು ಸಾವಿರ ಅಂತ ಸರ್ಕಾರ ಲೆಕ್ಕ ಹಾಕಿದರೆ . ಮಂಗಗಳ ತಲಾದಾಯ ಅಥವಾ ತಲಾ ನಷ್ಟ ಮಾಡುವ ಸಾಮರ್ಥ್ಯ ಸುಮಾರು ಎರಡು ಲಕ್ಷ ರೂಪಾಯಿ…!!
ಹೀಗೆ ಮಂಗಗಳು ನಷ್ಟ ಮಾಡಿದರೆ ರೈತರ ಭವಿಷ್ಯ ವೇನು…? ಎಲ್ಲಾ ಕಾಡು ಪ್ರಾಣಿಗಳು ಆಹಾರಕ್ಕಾಗಿಯೇ ರೈತರ ಕೃಷಿ ಭೂಮಿಗೆ ದಾಳಿ ಮಾಡುತ್ತವಾದರೂ ಮಂಗನ ದಾಳಿಯ ಮಟ್ಟದಲ್ಲಿ ಯಾವುದೇ ಕಾಡು ಪ್ರಾಣಿಯೂ ದಾಳಿ ಮಾಡಿ ನಷ್ಟ ಮಾಡುವುದಿಲ್ಲ.
ಬೃಹದಾಕಾರದ ಆನೆ ಕಾಡುಕೋಣಗಳನ್ನಾದರೂ ನಿಯಂತ್ರಣ ಮಾಡಬಹುದು . ಆದರೆ ಇವತ್ತಿನ ವರೆಗೂ ಮಂಗನ ನಿಯಂತ್ರಣ ಕ್ಕೆ ಯಾವುದೇ ಪರಿಹಾರವಿಲ್ಲ. ಸರ್ಕಾರ ಮಂಕಿ ಪಾರ್ಕ್ ಮಾಡುತ್ತೇವೆ ಎನ್ನುತ್ತದೆಯಾದರೂ ಅದು ಯಶಸ್ವಿಯಾಗುವ ಲಕ್ಷಣಗಳು ಇಲ್ಲ. ಹಲವಾರು ಗುಂಪು ಮಂಗಗಳನ್ನ ಒಂದೇ ಕಡೆ ಕೂಡಿ ಹಾಕಲು ಬರುವುದಿಲ್ಲ. ಈ ಮಂಕಿ ಪಾರ್ಕ್ ಕಲ್ಪನೆ ಅವೈಜ್ಞಾನಿಕ.
ಆದರೆ ಮನುಷ್ಯನಿಗಾಗಿ ಮತ್ತು ಮನುಷ್ಯನಷ್ಟೇ ಇತರೆ ಪ್ರಾಣಿ ಪಕ್ಷಿಗಳಿಗಾಗಿ ಮಂಗಗಳನ್ನು ನಿಯಂತ್ರಣ ಮಾಡುವುದು ಅನಿ ವಾರ್ಯವಾಗಿದೆ.
ಈಗಿರುವ ಮಂಗಗಳು ಮನುಷ್ಯನ ಇತರೆ ಸಾಕು ಪ್ರಾಣಿಗಳಂತೆ ಮನುಷ್ಯನ ಜೊತೆಯಲ್ಲೇ ಹತ್ತಿರದಲ್ಲೇ ವಾಸ ಮಾಡಲು ಕಲಿತಿವೆ.
ಮಂಗಗಳು ಈಗ ವನ್ಯ ಮೃಗಗಳಂತೆ ಇಲ್ಲ. ಈಗಿನ ಮಂಗಗಳಿಗೆ ಅಳಿದುಳಿದ ಕಾಡಿನಲ್ಲಿ ಆಗುವ ಹಣ್ಣು ಹಂಪಲು ಸೊಪ್ಪು ಗಳನ್ನು ತಿಂದು ಜೀವಿಸಲು ಬರುವುದಿಲ್ಲ. ಮಂಗಗಳು ಮನುಷ್ಯ ತಿನ್ನುವ ಎಲ್ಲ ಬಗೆಯ ಆಹಾರವನ್ನು ತಿಂದು ಬದುಕುತ್ತಿವೆ.ಇದಕ್ಕೆ ಪುರಾವೆಗಾಗಿ ಯಾವುದೇ ವೈಜ್ಞಾನಿಕ ಅಧ್ಯಯನವೂ ಬೇಡ. ಇದಕ್ಕೆ ಈಗ ಬದುಕಿರುವ ಮಂಗಗಳೇ ಸಾಕ್ಷಿ.
ಖಂಡಿತವಾಗಿಯೂ ಒಂದು ಮಂಗನ ಗುಂಪು ವರ್ಷಕ್ಕೆ “ಒಂದು ಕೋಟಿ” ರೂಪಾಯಿ ಗಿಂತ ಹೆಚ್ಚಿನ “ಬೆಳೆ ಹಾನಿ” ಮಾಡುತ್ತವೆ.
ಮಲೆನಾಡಿನ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಹಂಚಿನ ಮನೆಯ ವಾಸವಿರುವ ಚಿಕ್ಕ ಕುಟುಂಬದ ಪತಿ ಪತ್ನಿಯಿಬ್ಬರೂ ಈ ಮೊದಲು ಮನೆ ಬೀಗ ಹಾಕಿ ಕೂಲಿ ಇತರೆ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಇದೀಗ ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ಮನೆ ಕಾವಲಿಗೆ ಒಂದು ಜನ ಇರಲೇ ಬೇಕು. ಒಬ್ಬರು ಮನೆಯಲ್ಲಿ ಇದ್ದರೆ ಮಾತ್ರ ಇನ್ನೊಬ್ಬರು ಹೊರಗೆ ಕೆಲಸಕ್ಕೆ ಹೋಗಲು ಸಾಧ್ಯ…!!
ಮಂಗಗಳು ಒಮ್ಮೆ ಮನೆ ಬಾಗಿಲು ಹಾಕಿ ಹೋದಾಗ ಮನೆಯೊಳಗೆ ನುಗ್ಗಿದವೆಂದರೆ ‘ರಣ ರಂಪ’ ಮಾಡಿ ತಿಂದು ಹೇತು ಹೋಗುತ್ತವೆ.
ಅದಕ್ಕಾಗಿ ಮಂಗಗಳಿಗೆ ಭಯ ಪಟ್ಟು ಗ್ರಾಮೀಣ ಪ್ರದೇಶದ ವಿಶೇಷವಾಗಿ ಹಂಚಿನ ಮನೆಯ ವಾಸಿಗಳು ಮನೆಯಲ್ಲಿ ಯಾರೂ ಇಲ್ಲದೇ ಬಾಗಿಲು ಬೀಗ ಹಾಕಿ ಹೋಗುವುದಿಲ್ಲ. ಈ ಲೆಕ್ಕಾಚಾರ ದಲ್ಲಿ ಹೊರಗೆ ದುಡಿದು ಜೀವನ ಮಾಡುವ ಕುಟುಂಬಕ್ಕೆ ಈ ಮಂಗನ ಕಾಟದಿಂದ ಎಷ್ಟು ನಷ್ಟ ವಾಗಬಹುದು…? ವರ್ಷ ಕ್ಕೆ ಕುಟುಂಬವೊಂದಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿ ನಷ್ಟ ವಾಗುತ್ತದೆ..!! ಈ ಮಂಗನಿಂದ ಯಾರಿಗೂ ನೆಮ್ಮದಿಯಿಲ್ಲವಾಗಿದೆ…
ಮನೆಯಂಗಳದಲ್ಲಿ ಆರೋಗ್ಯಕರವಾಗಿ ಯಾವುದೇ ರಾಸಾಯನಿಕ ಔಷಧ ಸಿಂಪಡಣೆ ಮಾಡದೇ ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ತರಕಾರಿ ಬೆಳೆದು ತಿಂದು ಹಬ್ಬ ಹರಿದಿನ ಮದುವೆ ಮುಂಜಿಗಳಲ್ಲದೇ ಬೇರೆ ದಿನಗಳಲ್ಲಿ ಅಂಗಡಿ ಸಂತೆಗಳಲ್ಲಿ ತರಕಾರಿ ಕೊಂಡೇ ಗೊತ್ತಿಲ್ಲದೆ ಇದ್ದ ಮಲೆನಾಡಿಗರು ಇಂದು ವಾರದ ಸಂತೆಗಳು ತೀರ್ಥಹಳ್ಳಿ ಯ ಎಳ್ಯಮಾಸೆ ಜಾತ್ರೆಯಂತೆ ಜನರಿಂದ ತುಂಬಿ ತುಳುಕುತ್ತಿದೆ…!! ಜನ ರಾಸಾಯನಿಕ ಸಿಂಪಡಣೆಯಾದ ವಿಷಕಾರಿ ತರಕಾರಿ ಕೊಂಡು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ವಿಷಕಾರಿ ಹಣ್ಣು ತರಕಾರಿ ತಿಂದು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗಳಿಗೆ ಲಕ್ಷ ಲಕ್ಷ ಸುರಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಂಗಗಳು.
ಒಂದು ಮಂಗನ ಕುಟುಂಬದ ನೆಡಾವಳಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಿಗೆ ಸೂಕ್ತ ಆಹಾರ ವ್ಯವಸ್ಥೆ ಮಾಡಿದರೆ ಹೀಗೆ ಕೋಟ್ಯಂತರ ರೂಪಾಯಿ ನಷ್ಟವಾಗುವುದು ತಪ್ಪುತ್ತದೆ.
ಮಂಗನ ಸಮಸ್ಯೆಯಂತಹ ಗಂಭೀರವಾದ ಸಮಸ್ಯೆ ಗೆ ಹಲವಾರು ವರ್ಷಗಳಾದರೂ ಇದು ಪರಿಹಾರ ಇಲ್ಲದ ಸಮಸ್ಯೆ ಎಂದು ನಮ್ಮ ಆಡಳಿತ ವ್ಯವಸ್ಥೆ ಕೈಚೆಲ್ಲಿ ಕೂತಿರುವುದು ವಿಷಾದನೀಯ ಸಂಗತಿಯಾಗಿದೆ.
ಈಗ ಗ್ರಾಮೀಣ ಜನರಿಗೆ ಪೀಡಕವಾಗಿರುವ ಪೂಜನೀಯ ಪ್ರಾಣಿ ಮಂಗಗಳಿಗೂ ಒಂದು ಕೃತಕ ಅನ್ನಾಸರೆ ನೀಡುವ “ಮಂಗನ ವಾಡಿ” ಮಾಡಿ ಸಲಹುವುದು ತಪ್ಪೇನಿಲ್ಲ.ರೈತ ಈ ಮಂಗಗಳಿಗೆ ರೋಸಿ ಹೋಗಿ ಇಡೀ ಇಡೀ ಮಂಗಗಳ ಗುಂಪನ್ನೇ ಕೊಂದು ನಾಶ ಮಾಡುವುದಕ್ಕಿಂತ ಹೀಗೆ ನೆಲೆ ಕಲ್ಪಿಸಿ ಆಹಾರ ಕೊಟ್ಟು ಉಳಿಸುವುದು ಉತ್ತಮ ಅಲ್ವಾ..? ಪ್ರಾಣಿ ದಯೆಯೂ ಆಗುತ್ತದೆ. ಮನುಷ್ಯ ಮಾತ್ರ ವಲ್ಕದೇ ಇತರೆ ಪ್ರಾಣಿ ಪಕ್ಷಿಗಳಿಗೂ ಒಳಿ ತಾಗುತ್ತದೆ.
ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಮಂಗಗಳ ಗುಂಪುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆ ಊರಿನ ಅರಣ್ಯ/ ಎಂಪಿಎಂ ಜಾಗದಲ್ಲಿ ಒಂದು ಜಾಗ ಗುರುತಿಸಿ ನೆಲೆಗೊಳಿಸಿ ಅಲ್ಲಿಗೆ ಪ್ರತಿ ದಿನವೂ ನಿರ್ದಿಷ್ಟ ಸಮಯಕ್ಕೆ ಆ ಮಂಗಗಳಿಗೆ ಹೊಟ್ಟೆ ತುಂಬುವಷ್ಟು ಅನ್ನ ಕೊಡಬೇಕು. ಐವತ್ತು ಮಂಗಗಳಿಗೆ ಹೆಚ್ಚೆಂದರೆ ಒಂದು ಐದು ಕೆಜಿ ಅಕ್ಕಿಯ ಅನ್ನ ಸಾಕಾಗುತ್ತದೆ.
ಅನ್ನ ಮನುಷ್ಯರ ಆಹಾರ ಪ್ರಾಣಿಗಳ ಆಹಾರ ಅಲ್ಲ.ಅನ್ನ ಹಾಕಿದರೆ ಮಂಗಗಳ ಜಠರ ಕರಳು ಏನೋ ಆಗುತ್ತದೆ ಅಂತ ವೈದ್ಯಕೀಯ ಜ್ಞಾನ ಇರುವವರು ಹೇಳಬಹುದು. ಆದರೆ ಅವರಿಗೆ ಜ್ಞಾಪಕದಲ್ಲಿರಲಿ… ಈಗ ಮಂಗಗಳು ಬದುಕುತ್ತಿರುವುದೇ ಮನುಷ್ಯರ ಆಹಾರ ಕಿತ್ತು ತಿಂದು. ಹಾಗಂತ, ಮಂಗಗಳು ಮನುಷ್ಯರು ಕೊಟ್ಟ ಆಹಾರ ತಿಂದು ಅಲ್ಲೇ ಆರಾಮವಾಗಿ ಕೂರುವ ಜಾತಿಯಲ್ಲ.ಅವು ಖಂಡಿತವಾಗಿಯೂ ಮನುಷ್ಯರ ವಾಸಸ್ಥಾನ ಮತ್ತು ಕೃಷಿ ಭೂಮಿಗೆ ದಾಳಿಯಿಡಲು ಬರುತ್ತವೆ.
ಆಗ ಮನುಷ್ಯ ರು ಕೋವಿಯಿಂದ ಹುಸಿ ಗುಂಡು ಹಾರಿಸಿ ಬೆದರಿಸಿದರೆ ಅವು ತಮಗೆ ಆಹಾರ ಕೊಡುತ್ತಿದ್ದಲ್ಲಿಗೆ ಮರಳುತ್ತದೆ.
ಈ ಪರಿಹಾರವನ್ನು ಪ್ರತಿ ಊರಿನ ಪ್ರತಿ ಮಂಗನ ಕುಟುಂಬಕ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಮಂಗನ ನಿಯಂತ್ರಣ ಸಾಧ್ಯ.
ಮಂಗನ ನಿಯಂತ್ರಣ ತೆರಿಗೆ ಎಂದು ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ರೈತರಿಗೆ ಎಕರೆಗಿಷ್ಟು ಮತ್ತು ಜನ ಸಾಮಾನ್ಯರಿಗೆ ಮನೆಗಿಷ್ಟು ಎಂದೂ ನಿಗದಿಪಡಿಸಬಹುದು. ಇದರಲ್ಲಿ ಯಾವ ತಪ್ಪು ಇಲ್ಲ..!!. ಮಂಗನಿಗೆ ಅನ್ನ ಆಹಾರ ಮಾಡಿ ಕೊಡುವುದೇ ಪರಿಹಾರ.ಇದೊಂದೇ ಮಂಗನ ಉಪಟಳಕ್ಕಿರುವ ಪರಿಹಾರ.
ಈ “ಮಂಗನ ವಾಡಿ” ನಿರ್ವಹಣೆ ಮತ್ತು ಮಂಗನ ಕಾವಲಿಗೆ ಎಷ್ಟೇ ಖರ್ಚು ಮಾಡಿದರೂ ಒಂದು ಮಂಗನ ಗುಂಪಿಗೆ ಹತ್ತು ಲಕ್ಷ ರೂಪಾಯಿ ವರ್ಷ ಕ್ಕೆ ಬೀಳಬಹುದು. ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹತ್ತು ಮಂಗನ ಗುಂಪುಗಳಿದ್ದರೆ ಆಹಾರ ತಯಾರಿಸಿ ಮಂಗಗಳಿಗೆ ನೀಡಲು ಒಂದೇ ಕಡೆಯಲ್ಲೇ ತಯಾರಿಸಿದರೆ ತಯಾರಿಕಾ ವೆಚ್ಚ ಕಡಿಮೆಯಾಗಬಹುದು. ಪ್ರತಿ ಊರಿನಲ್ಲೂ ಸ್ವ ಸಹಾಯ ಸಂಘಗಳಿವೆ. ಉತ್ಸಾಹಿಗಳ ಸಮೂಹ ಇರುತ್ತದೆ. ಸರ್ಕಾರ ಗ್ರಾಮ ಪಂಚಾಯತಿ ಆಡಳಿತ ಈ ಸ್ವ ಸಹಾಯ ಸಂಘಗಳನ್ನು ಬಳಸಿ ಕೊಳ್ಳಬಹುದು.
ಪ್ರತಿ ವರ್ಷವೂ ಮಂಗನಿಗೆ ಆಹಾರ ಕೊಟ್ಟು ನಿರ್ವಹಣೆ ಮಾಡುವ ಕಂಟ್ರಾಕ್ಟ್ ನ್ನ ಈ ಸ್ವ ಸಹಾಯ ಗುಂಪುಗಳಿಗೆ ನೀಡಬೇಕು. ಈ ಮಂಗನಿಗೆ ಆಹಾರ ಒದಗಿಸುವ ಮತ್ತು ಮಂಗಗಳು ತೋಟಕ್ಕೆ ಕಾವಲು ಮಾಡುವವರನ್ನು ನಿರ್ವಹಣೆ ಮಾರ್ಗದರ್ಶನ ಮಾಡಲು ಆ ಭಾಗದ ಕೃಷಿಕರು ಮತ್ತು ಗ್ರಾಮ ಪಂಚಾಯತಿ ಸದಸ್ಯರ ಒಂದು ಮೇಲ್ವಿಚಾರಣೆ ಸಮಿತಿ ಮಾಡಬೇಕು…. ಮಂಗಗಳ ನಿರ್ವಹಣೆ ಗೆ ತಲಾ ಒಂದು ಮಂಗನ ಗುಂಪಿಗೆ ಹತ್ತು ಲಕ್ಷ ರೂಪಾಯಿ ಖರ್ಚಾದರೂ ಆ ಗುಂಪಿನ ಮಂಗಗಳಿಂದಾಗುವ ನಷ್ಟ
ತೊಂಬತ್ತು ಲಕ್ಷ ರೂಪಾಯಿ ರೈತರಿಗೆ ಉಳಿತಾಯವಾಗುತ್ತದೆ. ಇದನ್ನುಳಿದು ಮಂಗನ ನಿಯಂತ್ರಣ ಕ್ಕೆ ಬೇರೆ ಯಾವುದೇ ಪರಿಹಾರೋಪಾಯವಿರುವುದಿಲ್ಲ.
ಒಂದು ಎಕರೆ ಅಡಿಕೆ ತೋಟದ ಕನಿಷ್ಠ ಎರಡು ಕ್ವಿಂಟಾಲ್ ಅಡಿಕೆ ಬೆಳೆ ನಷ್ಟ ವನ್ನು ಮಂಗಗಳು ಮಾಡುತ್ತವೆಯಂತಾದರೆ
ಸರ್ಕಾರದ ತೋಟಗಾರಿಕೆ ಇಲಾಖೆಯೋ , ಅರಣ್ಯ ಇಲಾಖೆಯೋ ಎಕರೆವೊಂದಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಸಾದ್ಯವೇ…? ಹಾಗೆ ಪರಿಹಾರ ನೀಡುವುದಾದಲ್ಲಿ ತೀರ್ಥಹಳ್ಳಿ ತಾಲ್ಲೂಕೊಂದಕ್ಕೇ “ಸಾವಿರ ಕೋಟಿ” ರೂಪಾಯಿ ಬೆಳೆ ನಷ್ಟ ಪರಿಹಾರ ಕೊಡಬೇಕಾಗಬಹುದು…!!!
ಸರ್ಕಾರ ಅಥವಾ ವರ್ಷಕ್ಕೆ ಆರುನೂರು ಕೋಟಿ ವರಮಾನ ಇರುವ ಅರಣ್ಯ ಇಲಾಖೆ ಖಂಡಿತವಾಗಿಯೂ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಅದರ ಬದಲಿಗೆ “ಮಂಗನವಾಡಿ” ಮಾಡಿದರೆ ಮಂಗಗಳೂ ಉಳಿಯುತ್ತದೆ.
ಮತ್ತು ಮಂಗಗಳಿಂದ ಕೃಷಿ ಉತ್ಪನ್ನ ನಷ್ಟ ಆಗುವುದೂ ತಪ್ಪುತ್ತದೆ. ರೈತರು ಮನೆ ಖರ್ಚಿಗಾಗುವಷ್ಟು ಆರೋಗ್ಯಕರವಾಗಿ ತರಕಾರಿ ಹಣ್ಣು ಬೆಳೆದುಕೊಳ್ಳುತ್ತಾರೆ.
ಈ ಆಹಾರ ಕೊಡುವ ಕ್ರಮ ವನ್ನು ಇತರೆ ಕಾಡು ಪ್ರಾಣಿಗಳಿಗೂ ವಿಸ್ತರಣೆ ಮಾಡಿದರೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಕಡಿಮೆ ಮಾಡಬಹುದು.
ಇದೀಗಂತೂ ಎಲೆಚುಕ್ಕಿ ರೋಗ ಎಲ್ಲಡೆ ವ್ಯಾಪಿಸುತ್ತಿದ್ದು ರೈತರು ಅಡಿಕೆಗೆ ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿರುವಾಗ ಮಂಗ ನಿಯಂತ್ರಣ ಈ ಕಾಲದ ಅತಿ ಅನಿವಾರ್ಯ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…