ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಹರಡಿದೆ. ಈಗಾಗಲೇ 24 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೈರಸ್ ಕಂಡುಬಂದಿದ್ದು 435 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಮಂಕಿಪಾಕ್ಸ್ ವೈರಸ್ ನಿರ್ವಹಣೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ವಿವಿಧ ದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಮಾರ್ಗಸೂಚಿಯಲ್ಲಿ ರೋಗಿ ಅಥವಾ ಸಾಂಕ್ರಾಮಿಕ ಅವಧಿಯಲ್ಲಿ ರೋಗಿಯ ಸಂಪರ್ಕ ಹೊಂದಿದರೆ 21 ದಿನಗಳ ಅವಧಿಯವರೆಗೆ ಚಿಹ್ನೆಗಳು/ರೋಗಲಕ್ಷಣಗಳ ಬಗ್ಗೆ ಪ್ರತಿದಿನವೂ ಮೇಲ್ವಿಚಾರಣೆ ಅಗತ್ಯವಿದೆ. ಜ್ವರ ಕಂಡುಬಂದಲ್ಲಿ ತಕ್ಷಣವೇ ಪರೀಕ್ಷೆ ಅಗತ್ಯವಿದೆ. ರಕ್ತದಾನ ಇತ್ಯಾದಿಗಳ ಮೇಲೂ ನಿಗಾ ಅಗತ್ಯ.
ಈ ವೈರಸ್ ತಡೆಗಟ್ಟಲು ಅನಾರೋಗ್ಯದ ವ್ಯಕ್ತಿಯೊಂದಿಗೆ ಸಂಪರ್ಕವನ್ನು ತಪ್ಪಿಸುವುದು, ಸೋಂಕಿತ ರೋಗಿಗಳನ್ನು ಇತರರಿಂದ ಪ್ರತ್ಯೇಕಿಸುವುದು, ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸುವುದು ಇತ್ಯಾದಿ ಮಾರ್ಗಸೂಚಿಯನ್ನು ತಿಳಿಸಲಾಗಿದೆ.