ಕಳೆದ ಒಂದು ತಿಂಗಳಿನಿಂದ ಸಂಪಾಜೆ, ಚೆಂಬು, ಮಡಿಕೇರಿ ಪ್ರದೇಶದಲ್ಲಿ ಭೂಕಂಪನದ ಸದ್ದಿನ ಬಳಿಕ ಇದೀಗ ಭೂಕುಸಿತದ ಸದ್ದು ಕೇಳುತ್ತಿದೆ. ಎರಡು ದಿನಗಳ ಹಿಂದೆ ರಾಮಕೊಲ್ಲಿಯಲ್ಲಿ ಭೂಕುಸಿತ ಸಂಭವಿಸಿದ ಬಳಿಕ ಮದೆನಾಡು ಬಳಿ ಬೆಟ್ಟ ಕುಸಿತಗೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಣ್ಣು ಮಿಶ್ರಿತ ನೀರು ಹೊಳೆಯಲ್ಲಿ ಹರಿದು ಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Land Slide near Madenadu, Kodagu. ಮದೆನಾಡು ಬಳಿಯ ಕೊಪ್ಪಡ್ಕ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.#landslide #rain #kodagu #ಭೂಕುಸಿತ #ruralmirror pic.twitter.com/qvJrXKdM1Q
— theruralmirror (@ruralmirror) July 22, 2022
ಗುರುವಾರ ತಡರಾತ್ರಿ ಮದೆನಾಡಿನ ಕೊಪ್ಪಡ್ಕ ಪ್ರದೇಶದಲ್ಲಿ ಬೆಟ್ಟದಿಂದ ಸದ್ದು ಕೇಳಿತ್ತು. ಶುಕ್ರವಾರ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಸದ್ಯ ಯಾವುದೇ ಮನೆಗಳು , ಕೃಷಿ ಭೂಮಿ ಇಲ್ಲ. ಅಪಾಯದ ಹಿನ್ನೆಲೆಯಲ್ಲಿ ಆಸುಪಾಸಿನ ಮನೆಯವರನ್ನು ಸ್ಥಳಾಂತರ ಈ ಹಿಂದೆಯೇ ಮಾಡಲಾಗಿತ್ತು. ಇದೀಗ ಬೆಟ್ಟ ಕುಸಿದಿರುವ ಬಗ್ಗೆ ದೂರದಿಂದ ಗೋಚರವಾಗುತ್ತದೆ ಎನ್ನುವುದು ಸ್ಥಳೀಯರ ಮಾಹಿತಿ. ಅಧಿಕಾರಿಗಳು, ಸ್ಥಳೀಯರು ಬೆಟ್ಟ ಕುಸಿತದ ಕಾರಣದಿಂದ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ.
ಈ ನಡುವೆ ಎರಡನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಜನರಿಗೆ ಆತಂಕ ಉಂಟಾಗಿತ್ತು. ಇದೀಗ ನಿಶಾನಿ ಬೆಟ್ಟದ ಪ್ರದೇಶಕ್ಕೆ ಹಾಗೂ ಮೊಣ್ಣಂಗೇರಿಯ ರಾಮಕೊಲ್ಲಿ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.