26.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಇವತ್ತು ರಾಜ್ಯದಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿದೆ.
ಮಹಾರಾಷ್ಟ್ರದ ಕರಾವಳಿ ತಲುಪಿರುವ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದರೂ ಅಲ್ಪ ಪ್ರಮಾಣದಲ್ಲಿ ತಿರುಗುತ್ತಿದ್ದು, ಭೂ ಪ್ರವೇಶಿಸಿ ಮಧ್ಯಪ್ರದೇಶ ತನಕ ಸಾಗುವ ನಿರೀಕ್ಷೆ ಇದೆ. ಇದರ ಪರಿಣಾಮದಿಂದ ಮುಂಗಾರು ಕೇರಳದಿಂದ ಮಹಾರಾಷ್ಟ್ರ ತನಕವೂ ಒಮ್ಮೆಲೇ ಆರಂಭವಾಗಿದೆ. ರಾಜ್ಯದಾದ್ಯಂತ ಅಬ್ಬರಿಸಲಿರುವ ಮುಂಗಾರು ಮಳೆಯು ಈ ತಿಂಗಳ ಕೊನೆಯ ತನಕ ಮುಂದುವರಿದು, ವಾಯುಭಾರ ಕುಸಿತವು ಸಂಪೂರ್ಣ ಶಿಥಿಲಗೊಳ್ಳುತ್ತಿದ್ದಂತೆಯೇ ಅಂದರೆ ಜೂನ್ 2 ಅಥವಾ 3ರಿಂದ ಅಲ್ಪ ಅವಧಿಯ ಬಿಡುವು ಪಡೆಯುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು. ರಾಜ್ಯದ ಕರಾವಳಿ ಜಿಲ್ಲೆಗಳಾದ್ಯಂತ ಹಾಗೂ ಮಲೆನಾಡು ಭಾಗಗಳಲ್ಲಿ ಮೇ 25ರಿಂದ 30ರ ತನಕ ಭಾರಿ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3 ದಿನಗಳ ಕಾಲ Red Alert ಘೋಷಣೆಯ ಸಾಧ್ಯತೆ ಇದೆ.