ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಮಂಗಳವಾರದ ವೇಳೆಗೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾಗುವ ದಿನಗಳಿಂತ ಒಂದು ವಾರ ಮುಂಚಿತವಾಗಿಯೇ ಈ ಬಾರಿ ಮುಂಗಾರು ಪ್ರಾರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ಇದೇ ವೇಳೆ ಮುಂಗಾರು ಪೂರ್ವ ಮಳೆಯಾಗಲಿದ್ದು ಕೇರಳದಲ್ಲಿ ಇಂದು ವ್ಯಾಪಕ ಮಳೆಯಾಗಲಿದೆ. ಪತ್ತನಂತಿಟ್ಟ, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಡುಗು, ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. …..ಮುಂದೆ ಓದಿ….
2020 ರಲ್ಲಿ ಬಿಡುಗಡೆಯಾದ ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ ಅದರ ನಂತರ ಆರಂಭವಾಗುತ್ತದೆ. ಈ ಬಾರಿ ಒಂದು ವಾರ ಮುಂಚಿತವಾಗಿ ಅಂಡಮಾನ್ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಲಿದೆ. ಕಳೆದ 24 ಗಂಟೆಗಳಲ್ಲಿ ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಕ ಮಳೆಯಾಗಿದ್ದು, ನಿಕೋಬಾರ್ ದ್ವೀಪಗಳಲ್ಲಿ ಮಳೆಯ ಚಟುವಟಿಕೆಯು ಮುಂದಿನ 24 ಗಂಟೆಗಳಲ್ಲಿ ವ್ಯಾಪಕವಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಮುಂದಿನ 4-5 ದಿನಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್, ಕೊಮೊರಿನ್ ಪ್ರದೇಶದ ಕೆಲವು ಭಾಗಗಳು, ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿಯಲು ಸದ್ಯ ಅನುಕೂಲಕರವಾದ ಪರಿಸ್ಥಿತಿ ಇದೆ ಎಂದು ಐಎಂಡಿ ತಿಳಿಸಿದೆ.
ಮೇ 10 ರಂದು, ಹವಾಮಾನ ಸಂಸ್ಥೆಯು ಮೇ 27 ರಂದು ಕೇರಳದಲ್ಲಿ ಮುಂಗಾರು ಪ್ರಾರಂಭವಾಗಬಹುದು ಎಂದು ಹೇಳಿತ್ತು. ಹೀಗಾಗಿ ಜೂನ್ 1 ರ ಸಾಮಾನ್ಯ ಪ್ರಾರಂಭ ದಿನಾಂಕಕ್ಕಿಂತ ನಾಲ್ಕು ದಿನಗಳ ಮೊದಲು ಮಳೆಯಾಗಬಹುದು ಎಂದು ಹೇಳಿತ್ತು. ಈ ನಡುವೆ ಸದ್ಯ ಚಂಡಮಾರುಗಳು ಸೃಷ್ಟಿಯಾದರೆ ಮುಂಗಾರು ವಿಳಂಬವಾಗುವ ಸಾಧ್ಯತೆ ಕೂಡಾ ಇದೆ.