ಕೇರಳದ ಕಡೆಗೆ ವೇಗವಾಗಿ ಆಗಮಿಸಿದ ನೈರುತ್ಯ ಮಾನ್ಸೂನ್ ಈಗ ಹೆಚ್ಚಿನ ಪ್ರಗತಿ ಕಂಡಿಲ್ಲ. ಹೀಗಾಗಿ ಉತ್ತರ ಕೇರಳ, ಕರ್ನಾಟಕ ಮತ್ತು ಮಧ್ಯ ತಮಿಳುನಾಡಿಗೆ ಈಗ ಮಳೆಯ ನಿರೀಕ್ಷೆ ಇದೆ. ಮೇ 29 ರಂದು ಕೇರಳ, ದಕ್ಷಿಣ ತಮಿಳುನಾಡು ಮತ್ತು ಲಕ್ಷದ್ವೀಪದ ಕೆಲವು ಪ್ರದೇಶಗಳನ್ನು ತಲುಪಿದ ನೈಋತ್ಯ ಮಾನ್ಸೂನ್ ನಂತರ ವೇಗ ಪಡೆಯಲಿಲ್ಲ, ದುರ್ಬಲವಾದ ಕಾರಣ ಎರಡು ದಿನಗಳಲ್ಲಿ ವ್ಯಾಪಕ ಮಳೆಯಾಗಿಲ್ಲ.ಆದರೆ ಹವಾಮಾನ ಇಲಾಖೆಯ ಪ್ರಕಾರ ಮಾರುತವು ಕರ್ನಾಟಕದ ಕೆಲವು ಪ್ರದೇಶಗಳಿಗೂ ತಲುಪಿದೆ. ವೇಗ ಪಡೆದ ತಕ್ಷಣವೇ ಮಳೆಯಾಗುವ ನಿರೀಕ್ಷೆ ಇದೆ.
ಮಾನ್ಸೂನ್ ಆರಂಭದ ನಂತರ ಕೇರಳದ 14 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗಿದೆ. ಅಲಪ್ಪುಳ ಮತ್ತು ಕೊಟ್ಟಾಯಂನಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಕ್ರಮವಾಗಿ 53ಮಿಮೀ ಮತ್ತು 52ಮಿಮೀ ಮಳೆಯಾಗಿದೆ. ಜೂನ್ 2 ರವರೆಗೂ ಇದೇ ಲಕ್ಷಣಗಳು ಮುಂದುವರಿಯಲಿದೆ. ಆದರೆ , ಭಾರತದ ಮಳೆಯಾಶ್ರಿತ ಕೃಷಿ ಪ್ರದೇಶವು ಈ ಮಾನ್ಸೂನ್ ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಕಚೇರಿ ಮಂಗಳವಾರ ತಿಳಿಸಿದೆ.