ರಾಜ್ಯದ ಒಂದು ಕಡೆ ಧಾರಾಕಾರ ಮಳೆ. ಕೃಷಿ ಹಾನಿ. ಇನ್ನೊಂದು ಕಡೆ ಮಳೆಯ ಕೊರತೆ, ಬರಗಾಲ. ಕಡೆ ಕೃಷಿ ಹಾನಿ. ಎರಡೂ ಕಡೆ ಕೃಷಿಕರ ಸಂಕಷ್ಟ. ಗ್ರಾಮೀಣ ಬದುಕು ದುಸ್ತರ. ಅದರಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಿರುವ ಹಾಗೂ ಮಳೆ ಆಶ್ರಯಿಸಿ ಬಿತ್ತನೆ ಮಾಡಿರುವ ಕೃಷಿಕರು ಮಳೆಯಾಗದೆ ಕಂಗಾಲಾಗಿದ್ದಾರೆ. ಈಚೆಗಿನ ಮಾಹಿತಿ ಪ್ರಕಾರ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಹಾವೇರಿ ಜಿಲ್ಲೆಯೊಂದರಲ್ಲೇ 18 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಾಗಿದೆ.ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ.
ಹುಬ್ಬಳ್ಳಿ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕುಮಾರಗೋಪ್ಪ ಗ್ರಾಮದಲ್ಲಿ ಶಿವಯೋಗಿ ಚನ್ನಯ್ಯ ಖಾತೇದಾರ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಕೃಷಿಗಾಗಿ ಪತ್ನಿಯ ಹೆಸರಿನಲ್ಲಿ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದರು.2 ಎಕರೆ ಹಾಗೂ ಬೇರೆಯವರ ಹೊಲವನ್ನು ಲಾವಣಿ ರೂಪದಲ್ಲಿ ಪಡೆದು ಕೃಷಿ ಮಾಡುತ್ತಿದ್ದರು. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹೊಲದಲ್ಲಿ ಬಿತ್ತನೆ ಮಾಡಿದ ಹೆಸರಿನ ಬೆಳೆ ಹಾಳಾಗಿದೆ. ಹೀಗಾಗಿ, ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡ ಸಾವಿಗೆ ಶರಣಾಗಿದ್ದಾರೆ.
ಹಿರೇಕೆರೂರಿನ ಸಾತೇನಹಳ್ಳಿ ಗ್ರಾಮದ ಶಾಂತಪ್ಪ ಚನ್ನಬಸಪ್ಪ ಕೂಡಲದವರ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಪ್ಪ ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಗಾಗಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು.ಜಮೀನಿನಲ್ಲಿ ಎರಡು ಬೊರವೆಲ್ ಕೊರೆಸಿದ್ದು, ಅದರಲ್ಲಿ ನೀರು ಸಿಕ್ಕಿರಲಿಲ್ಲ. ಹಿಂದಿನ ವರ್ಷ ಬೆಳೆ ಕೈಕೊಟ್ಟಿದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೀಗೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ವಿಫಲವಾಗುತ್ತಿದೆ. ಕೃಷಿಗಾಗಿ ಮಾಡಿರುವ ಸಾಲ ತೀರಿಸಲಾಗದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ದಿಕ್ಕು ತೋಚದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ 18 ರೈತರು ಸೇರಿದಂತೆ ಕಳೆದ ಎರಡು ತಿಂಗಳಲ್ಲಿ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕದ ಬೆಳವಣಿಗೆಯಾಗಿದೆ. ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೃಷಿ ಮಾಡಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಕೃಷಿ ಒಣಗಲು ಆರಂಭವಾಗಿದೆ.
ಇದೀಗ ಕೃಷಿಕರ ಸಾಲ ವಸೂಲಾತಿ ವಿಸ್ತರಣೆ ಹಾಗೂ ತಡೆಗೆ ಒತ್ತಾಯ ಕೇಳಿಬರುತ್ತಿದೆ. ರೈತರ ಆತ್ಮಹತ್ಯೆ ಯಾಕೆ ಹೆಚ್ಚಾಗುತ್ತಿವೆ ಎಂಬ ಕುರಿತು ರಾಜ್ಯ ಸರ್ಕಾರ ವಿಸ್ತೃತ ಅಧ್ಯಯನ ನಡೆಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬಕ್ಕೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ದಬ್ಬಾಳಿಕೆ ನಡೆಸಿ, ನೋಟಿಸ್ ನೀಡಿ ಸಾಲ ವಸೂಲಿ ಮಾಡದಂತೆ ಬ್ಯಾಂಕ್, ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇದೀಗ ವಿಪಕ್ಷಗಳೂ ಮುಂದಾಗಿವೆ. ಮಳೆ ಕೊರತೆಯಿಂದ ಬಿತ್ತನೆಗೆ ಸಂಕಷ್ಟವಾಗಿದ್ದು ರೈತರಿಗೆ ಸಮಸ್ಯೆಯಾಗಿದೆ. ಇದಕ್ಕಾಗಿ ಪರಿಹಾರ ಅಗತ್ಯವಿದೆ ಎಂಬುದರ ಬಗ್ಗೆ ಗಮನ ಸೆಳೆದಿದೆ.ಮಳೆ ಕೊರತೆಯಿಂದ ಆಗಿರುವ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನಪರಿಷತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದಾರೆ.
ಒಟ್ಟಾಗಿ ರಾಜ್ಯದಲ್ಲಿ ಮಳೆ ಕೊರತೆ ಇದೀಗ ಗಂಭೀರ ಪರಿಣಾಮ ಬೀರುತ್ತಿದೆ.