ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ ಸ್ಥಿತಿ ಅಮ್ಮನದ್ದು. ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು ನವ ಜೀವನವನ್ನು ಆರಂಭಿಸುವಳು.. ತನ್ನದೆಂಬ ಮನಸಿನ ಮಾತಿಗೆ ಕಿವಿಯಾಗುತ್ತಾ ಕನಸಿನ ಹಾದಿಯ ಮರೆವಳು, ವಾಸ್ತವಕ್ಕೆ ಮೈಯೊಡ್ಡುತಾ ಬದುಕಿನ ದಾರಿಗೆ ಸಿದ್ಧಳಾಗುವಳು. ಮನೆಯ ಆಗು ಹೋಗುಗಳಿಗೆ ಸ್ಪಂದಿಸುವ ಮನಸಿರುವುದು ಅಮ್ಮನಿಗೆ. ಇಲ್ಲಗಳ ಸರಮಾಲೆಯನ್ನೆಂದೂ ಪಟ್ಟಿ ಮಾಡದೆ, ಇರುವುದರಲ್ಲೇ ತೃಪ್ತಿ ಕಾಣುವುದು ಅಮ್ಮನಿಗೆ ಮಾತ್ರ ಸಾಧ್ಯ.
ಕೊರೊನಾ ಸಂಕಷ್ಟ ಸಮಯದಲ್ಲಿ ತಾನು ಧೈರ್ಯಗುಂದದೆ ದಿನಕ್ಕೊಂದು ಕಷಾಯ , ತಂಬುಳಿ ಮಾಡಿ ಮಾನಸಿಕ ಸ್ಥೈರ್ಯ ತುಂಬುವುದು ಅಮ್ಮಂದಿರ ಮನಸಿಗೆ ಮಾತ್ರ ಸಾಧ್ಯ.
***********************************************************
ಕನ್ನಡಿಯೊಳಗಿನ ಗಂಟುಸುಮ್ಮನೇ ಹೇಳುವುದಿಲ್ಲ ಅಮ್ಮೆಂನೆಂದರೆ ಕನ್ನಡಿಯೊಳಗಿನ ಗಂಟು, ಅರ್ಥವಾಗದು ಆಕೆಯ ಮನಸು.
ಅಮ್ಮನಲ್ಲವೇ ಆಕೆ!
ತೊರೆಗೊಂದು ಗುರಿಯಿದೆ
ಅದು ನದಿಯ ಸೇರುವುದು,
ಅಮ್ಮನಿಗೂ ಒಂದು ಗುರಿಯಿದೆ
ಅದು ಮಕ್ಕಳು ದಡ ಸೇರಲೆಂದು
ಹಗಲೆನ್ನದೆ ಇರುಳೆನ್ನದೆ ಬೆವರ
ಹರಿಸುವಳು ಗುರಿಯೆಡೆಗೆ .
ಸಾಗಲು ತೊರೆಯಂತೆ ನದಿಯೆಡೆಗೆ
ಹಸಿವು ನೀರಾಡಿಕೆಯ ಅರಿವಿರದೆ
ಪಯಣವೆಲ್ಲವೂ ಗುರಿಯೆಡೆಗೆ
ಪಯಣ ಗಮ್ಯದತ್ತಲಿರುವಾಗ ಯಾವುದೂ ಬಾಧಿಸದು
ಜ್ವರ, ಶೀತ, ಕಾಲು ನೋವು ಲೆಕ್ಕಕ್ಕಿಲ್ಲದೆ
ಗಮನವತ್ತಲೇ ಗುರಿಯೆಡೆಗೆ
ಮಾತೆಯ ಕಷ್ಟವ ನೋಡಿ ಬೆಳೆದ ಮಕ್ಕಳಿಗೆ ಆದರ್ಶವಾಗುವುದು ಅಮ್ಮನ ನಡೆಯೇ.
ಮಕ್ಕಳೂ ನಡೆಯುವರು ತಮ್ಮ ಗುರಿಯಡೆಗೆ.
ಮಕ್ಕಳು ನಿದ್ದೆಗೆಟ್ಟರೆ ಮರುಗುವಳು ಮಾತೆ
ಆಕೆಗರಿಯದೆ ಮಕ್ಕಳು
ಸಾಗುತಿರುವರು ಅವರ ಗುರಿಯೆಡೆಗೆ
ಅಮ್ಮನ ಮನಸು ಕನ್ನಡಿಯೊಳಗಿನ ಗಂಟು
ಅರ್ಥವಾಗದು ಎಂದಿಗೂ,
ಆಕೆ ಅಮ್ಮನಲ್ಲವೇ
ಸಾಗುವುದೊಂದೇ ಗೊತ್ತು ಗುರಿಯೆಡೆಗೆ
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ