ನಮಗೆ ಬಾಲ್ಯದ ನೆನಪಿನ ಸಾಲುಗಳು ಮಾತ್ರ ಅಮ್ಮನ ಮೂರ್ತಸ್ವರೂಪ…ಅದಕ್ಕೇ ಇರಬೇಕು ಕವಿ ಕಾವ್ಯ…
ಅಮ್ಮಾ..
ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕಾ ಮೀನೂ
ಮಿಡುಕಾಡುತಿರುವೇ ನಾನೂ…
ಅಮ್ಮ ಎನ್ನುವ ಕೊಂಡಿ ,ಯಬ್ಬಬ್ಬ , ಕಳಚಲಾರದ ಕೊಂಡಿ ಅದು….ಈ ಭವ ಬಂದನದೊಳು ಅಮ್ಮನ ಭಾವ ಬಂಧನವಿದೆಯಲ್ಲಾ …ಇಲ್ಲ…ಸಾದ್ಯವೇ ಇಲ್ಲ….ಕಳಚಲಾರದದು….ಕಳಚಲೊಲ್ಲದ್ದು …ಪರ್ಯಾಯವಿಲ್ಲದ್ದು…ಆದಿ ಅಂತ್ಯವಿಲ್ಲದ್ದು..
*”ಸಹಸ್ರ ಶೀರ್ಷಾ ಪುರುಷಃ
ಸಹಸ್ರಾಕ್ಷ ಸಹಸ್ರಪಾತ್
ಸ ಭೂಮಿಂ ವಿಶ್ವತೋ ವೃತ್ವಾ
ಅತ್ಯತಿಷ್ಠದ್ಧಶಾಂಗುಲಮ್.”*
.ಅಂತರ್ಮುಖಿಯಾಗಿ ಒಳಕಣ್ಣ ನೊಟ ಹರಿಸಿದರೆ ಅಮ್ಮ ಅಂದರೆ ಇಷ್ಟೇ.. ಇಷ್ಟೇ….”
ಮನಸೆಂಬ ಬ್ರಹ್ಮಾಂಡದ ಮೂಲೆಯಲ್ಲಿ ಅಣುರೂಪದಲ್ಲಿ ಅಡಗಿ ಕುಳಿತು ಯಾವುದೇ ಕ್ಷಣದಲ್ಲೂ ಧುತ್ತೆಂದು ಮಹದ್ರೂಪ ತಾಳಿ ತನ್ನ ಮಡಿಲಿಗೆಳೆಯುವ ಶಕ್ತ ಸ್ವರೂಪವೇ ಅಮ್ಮನಲ್ಲವೇ.
ಹ್ಹ..
ನಮಗಷ್ಟಕ್ಕೇ ಸೀಮಿತ.
ಕೇವಲ ನೆನಪುಗಳು ,ಭಾವನೆಗಳು..
ಅರ್ಧ ದಶಕವೇ ಸಂದು ಹೋಯಿತಲ್ಲಾ…
ಅಂದೊಂದು ದಿನ ಬೆಳ ಬೆಳಗಿನ ಕ್ಷಣಗಳಲ್ಲಿ ಅಮ್ಮನ ರಕ್ತ ಹಂಚಿಕೊಂಡು ಈ ಭುವಿಗೆ ಬಿದ್ದೆವಂತೆ….
ಹೌದು…ಬಿದ್ದಾಗ ಮಾತ್ರ ಏಳಬಹುದಷ್ಟೆ…ಎದ್ದೇ ಇದ್ದರೆ ಬೀಳುವುದಷ್ಟೇ, ಕೊನೆಗೆ. ಎದ್ದು ನಿಲ್ಲುವ ಚೈತನ್ಯ ತುಂಬಿ, ಬಿದ್ದ ಕುಡಿಯ ಪೊರೆದು ಭುವಿಯ ತೋರಿದ್ದು ಮಾತ್ರ ಕೆಲಕಾಲವಷ್ಟೇ….ಹೊರಗಿನ ಪ್ರಪಂಚದ ಅಗೋಚರ ಚಿತ್ರ ಅರಿಯುವ ಮೊದಲೇ ಅಮ್ಮ ಮಹತ್ತಿನಲ್ಲಿ ಲೀನವಾಗಿ ಹೋದಳು..
ಹ್ಹ…
ನೆನಪುಗಳ ಸರದಿ ನಾ ಮುಂದು ತಾ ಮುಂದೆಂದು ನುಗ್ಗುತಿವೆ…
ಅಮ್ಮನ ಬಟ್ಟಲಿನಿಂದಲೇ ಹಾಲೂಟದ ರುಚಿಯ ಸವಿದದ್ದೂ…ಅಮ್ಮನ ಊಟದ ಕೊನೆಯ ತುತ್ತಿನ ಸವಿಯ ತಾನುಣದೆ ನಮಗೆ ಉಣಿಸಿದ್ದೂ…ಒಣಗಲೆಂದು ಹಾಕಿದ್ದ ಅಮ್ಮನ ಸೀರೆಯ ಹಿಂದೆ ನಿಂತು ಕದ್ದು ಚಾಕಲೇಟ್ ತಿನ್ನುತ್ತಾ ಅಮ್ಮನ ಸೀರೆಯನ್ನು ಬ್ಲೇಡಿನಲ್ಲಿ ಕೊಯ್ದು ಚಿಂದಿ ಮಾಡಿದ್ದೂ….ರಾತ್ರಿಯಾದಂತೆಯೇ ಓದಿಗೆ ಬೆಳಕಾಗಿ ತಿದ್ದಿ ತೀಡಿದ್ದೂ, ಊಟದ ಮೊದಲು ದೇವರ ಕೋಣೆಯಲ್ಲಿ ನಮ್ಮನ್ನು ಕುಳ್ಳಿರಿಸಿ
“ಬೆನಕ ಬೆನಕಾ
ಏಕದಂತ, ಮುತ್ತಿನುಂಡೆ,
ಹೊನ್ನಗಂಟೆ ಇಂತಿಪ್ಪ ಶ್ರೀ ಮಹಾಗಣಪತಿ ದೇವರ ಪಾದಕ್ಕೆ ನಮಸ್ತೇ ನಮಸ್ತೇ ಎಂದು ದೇವರಿಗೆ ಅಮ್ಮನೊಂದಿಗೆ ನಮಿಸಿ,ದೇವರಿಗಿಟ್ಟ ಹಾಲನ್ನು ಅಲ್ಲೇ ಕುಡಿದು ಮುಗಿಸಿದ್ದೂ, ರಾತ್ರಿ…ಏಳೂ ವರೆಗೆ ಊಟವಾಗಿ ಲಾಟೀನು ಬೆಳಕನ್ನಾರಿಸಿ ವಾರ್ತಾ ಪ್ರಸಾರದ ನಂತರದ ಚಿತ್ರಗೀತೆಯನ್ನು ಕೇಳುತ್ತಾ ಅಮ್ಮನ ಬಳಿಯಲ್ಲೇ ಮಹಾಭಾರತ, ರಾಮಾಯಣ ಕತೆಗಳ ಕೇಳುತ್ತಾ, ನಿದ್ರಾವಶವಾದದ್ದೂ….ಬೆಳಗಾಗೆದ್ದು,ಅಪ್ಪನ ಕಣ್ಣು ತಪ್ಪಿಸಿ ಅಣ್ಣ ತಂಗಿ ಜಗಳಾಡುತ್ತಾ ಕತ್ತಲ ಅಡಿಗೆ ಕೋಣೆಯ ,ಒಲೆ ಬದಿಯ ನೆಲದಲ್ಲಿ ಕುಳಿತು ಕಾಫಿ ತಿಂಡಿ ಮಾಡಿದ್ದೂ , ಪಾಟೀ ಚೀಲವ ಏರಿಸಿ ಶಾಲೆಗೆ ನಡೆದಾಗ ಅಮ್ಮ ಹಿಂದೆ ಹಿಂದೆಯೇ ಮುರಕಲ್ಲ ಪಾರೆಯ ತುದಿ ವರೆಗೂ ಬಂದು ಕಣ್ಣೆತ್ತುವಲ್ಲಿ ವರೆಗೂ ನೋಡಿ ಗೋಳಿಮರದ ಇಳಿ ಬೇರುಗಳಲ್ಲಿ ಜೋಕಾಲಿಯಾಡದಂತೆ ತಾಕೀತು ಮಾಡುತ್ತಾ ಮರೆಯಾದದ್ದೂ,…ಅಮ್ಮನ ಸೆರಗ ಹಿಡಿದು ನಡೆನಡೆದು ,ದೋಣಿ ಹತ್ತಿ, ಆಚೆ ದಡ ಸೇರಿ ಶಂಕರ್ ವಿಠಲ್ ಬಸನ್ನೇರಿ ಅಜ್ಜನ ಮನೆಗೆ ಪಯಣಿಸಿದ್ದೂ, ಮಂಗಳೂರಿಗೆ ಬಸ್ಸನ್ನೇರಿ ಹೋಗಿ ಮೆಟಿನಿ ಸಿನಿಮಾ ನೋಡಿದ್ದೂ, …ಶಾಲಾ ಮೈದಾನದಲ್ಲಿ ನೆಲದ ಮೇಲೆ ಬಟ್ಟೆ ಹಾಸಿ ಯಕ್ಷಗಾನ ನೋಡಲು ಕುಳಿತು ಅಮ್ಮನ ಮಡಿಲಲ್ಲೇ ಬೆಳಗಿನ ಸೂರ್ಯನ ಕಂಡದ್ದೂ,
ಹೀಗೇ….
ಹೀಗೇ…
ಕೊನೆಗೊಂದು ದಿನ ಇಲ್ಲವೆಂದಾದದ್ದು…ನಮ್ಮನ್ನು
ಭುವಿಗೇ ಬಿಟ್ಟು ಹೋದದ್ದು…..ನೀಲಾಕಾಶದಲ್ಲಿ ಮೇಲೆ ಮೇಲೇ ಮತ್ತೂ ಮೇಲಕ್ಕೆ ಚಿಮ್ಮಿ ಮಹಾಮಾಯೆಯಾದದ್ದು…ಇಲ್ಲಿ..ಕೆಳಗೆ….ಮತ್ತೂ ಕೆಳಗೆ….ಅಮ್ಮ
ಬಿಟ್ಟು ಹೋದ ಕುಡಿಗಳನ್ನೆತ್ತಿ ಬೆಳೆಸಿದ್ದೂ…ಕಾಲ ಪ್ರವಾಹದಲ್ಲಿ ಅಮ್ಮನಾರೆಂದು ದಿಕ್ಕುತೋಚದಾದಾಗ ಆಸರೆಯಾದದ್ದೂ, ಅಜ್ಜ ಅಜ್ಜಿಯರೇ ಸಹಿತ ಹತ್ತು ಹಲವರು ಅಪ್ಪ ಅಮ್ಮನ ರೂಪ ತಾಳಿ ನೆರಳನಿತ್ತದ್ದೂ..ನೋವ ಮರೆಸಿ ನಲಿವ ಉಣಿಸಿ….ನಮಗೊಂದು ವ್ಯಕ್ತಿ ರೂಪ ಕೊಟ್ಟಿದ್ದೂ…ಈ ಜಗದಲ್ಲಿ ಎಷ್ಟೊಂದು ಮಾತೃ ಸ್ವರೂಪಗಳೂ ಎಂಬುದ ಕಲಿಸಿದ ಕಾಲವೇ ಮಾತೆಯೋ ಎಂಬ ಭಾವನೆಗೆ ಇಂಬುಕೊಟ್ಟವರೂ..
ಹುಮ್…
ದಿನಗಳುರುಳಿ ವರುಷಗಳು ಕಾಲರೂಪಿಯಾಗಿ ಓಡಿದ್ದೂ….ಕಲಿತದ್ದು ,ಕೂಡಿದ್ದೂ,ಕಳೆದದ್ದೂ ಉಫ್…
ಇಷ್ಟಲ್ಲಾ ಚಿತ್ರಗಳು ಪರದೆಯಲ್ಲಿ ಓಡೋಡಿ ಸಾಗುತಿರೆ,
ಜೀವನ ರಂಗದಲ್ಲಿ ಇಂದು ನಾವೇ ಅಪ್ಪ ಅಮ್ಮನಾಗಿ ವೇಶಾಂತರಗೊಂಡದ್ದು….
ಯಬ್ಬಬ್ಬ..
ಜಗವೇ ನಾಟಕ ರಂಗವಂತೆ….
ಅಷ್ಟೇ..
ಅಷ್ಟೇ ಎಂಬ ನಿಜ ತತ್ವದ ಹೊಳಹು ಮೂಡಿದಾಗ …
ನಮ್ಮ ಮಕ್ಕಳೂ ಅಪ್ಪ ಅಮ್ಮನಾಗುವ ಹಂತಕ್ಕೆ ಬಂದದ್ದೂ….
ನಮ್ಮ
ನಾಟಕ ರಂಗದ ಪರದೆ ಇಳಿಸುವ ಹಂತ ಬಂತೆಂಬುದ ನೆನಪಿಸುವ ನೆನಪಿನ ಓಲೆಯಾಗಿ ಅಮ್ಮನ ದಿನ ಬಂದದ್ದೂ……ಅಮ್ಮಂದಿರೇ ನಮನಗಳು ನಿಮಗೆ.
ಕಾಲಚಕ್ರದಲಿ ಇಂದಿನ ಅಮ್ಮನೇ ನಾಳಿನ ಮಕ್ಕಳು, ಇಂದಿನ ಮಕ್ಕಳೇ ನಾಳಿನ ಅಮ್ಮ ಅಪ್ಪಂದಿರು ಎಂಬುದ ಅರಿತಾಗ ಎಲ್ಲವೂ ಸುಸೂತ್ರವಲ್ಲವೇ…
ಜಗದ ಸೃಷ್ಟಿಗೆ ಕಾರಣಳಾಗಿ
ಸೃಷ್ಟಿಗೆ ದೃಷ್ಟಿತನಿತ್ತವಳಾಗಿ
ಜೀವ ಭಾವ ಕೊಂಡಿಯಾಗಿ
ಅವ್ಯಕ್ತ ವಿಶ್ವ ಪ್ರವಾಹವಾಗಿರುವ
ಅಮ್ಮಂದಿರೇ
ಇಂದು ನಿಮ್ಮ ದಿನವಂತೆ, ಅಲ್ಲಲ್ಲ.. ಇಂದು ನಮ್ಮೆಲ್ಲರ ದಿನ….ಎಂದಿನಂತೆಯೇ ಹರಸುತ, ಜಗದ ಪ್ರವಾಹಕೆ ದಿಕ್ಕ ತೋರುತ ಜಗದ ಚೇತನವಾಗಿರಿ.
“ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ
ಚರಿಸುತಿರೆ ನರನದರ ಗುರುತನರಿಯದೆಯೆ
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ
ತೊರೆಯುವನು ದೊರೆತುದನು..ಮಂಕುತಿಮ್ಮ
# ಟಿ ಆರ್ ಸುರೇಶ್ಚಂದ್ರ , ಕಲ್ಮಡ್ಕ