ಮಲೆನಾಡು(Malenadu) ಹೊರಗಿನವರಿಗೆ ಬಹಳ ಅದ್ಬುತ ಪ್ರದೇಶ, ಸ್ವರ್ಗದ ಹೆಬ್ಬಾಗಿಲು. ಅಲ್ಲೇ ಬದುಕು ಕಟ್ಟಿಕೊಂಡ ಹಿಂದಿನ ತಲೆಮಾರಿನವರಿಗೆ ಅಲ್ಲಿನ ಸವಾಲುಗಳ ಪರಿಚಯವೂ ಇತ್ತು. ಅಲ್ಲಿರುವ ಸಣ್ಣ ಹಿಡುವಳಿದಾರರಲ್ಲಿ(Small Land) 80% ಜನ ಉಳುವವನೆ ಹೊಲದೊಡೆಯ ಕಾಯಿದೆಯ(Act of tillage) ಫಲಾನುಭವಿಗಳೇ ಜಾಸ್ತಿ. ಮಲೆನಾಡು ಸಾಂಪ್ರಾದಾಯಿಕ ಬೆಳೆಗಳಾದ ಅಡಿಕೆ(Arreca), ಕಾಳು ಮೆಣಸು(Black Pepper)(ಸ್ವಲ್ಪ ಪ್ರಮಾಣದಲ್ಲಿ) ಮತ್ತು ಭತ್ತ(Paddy) ಈ ಬೆಳೆಗಳ ಮೇಲೆಯೇ ಆಧಾರಿತ. ಮಲೆನಾಡಿನಲ್ಲಿ ಯಾರೋ ದಾಳಿಂಬೆ ಬೆಳಿತಿನಿ, ಪಪ್ಪಾಯ ಬೆಳಿತೇನೆ, ಇನ್ನೇನೋ ಅಂತ ಹೋಗೋದು ಅಷ್ಟು ಸುಲಭದ ಮಾತಲ್ಲ ಕಾರಣ ಪ್ರತಿಕೂಲ ವಾತಾವರಣ.
ಸರಿ ಇನ್ನು ಭತ್ತ ಬೆಳೆಯುವ ವಿಚಾರಕ್ಕೆ ಬಂದರೆ ಅಲ್ಲಿ 30 ವರ್ಷದ ಕೆಳಗೆ ಇದ್ದ ವಿಧಾನ ಅಂದರೆ ಹುಡಿ ಬೀಜ ಅನ್ನೋ ಪದ್ದತಿ. ಅಂದರೆ may ತಿಂಗಳ ಕೊನೆಯಲ್ಲಿ ಒಂದು ನಾಲ್ಕು ಮಳೆ ಬಂದ ನಂತರ ಗದ್ದೆಯನ್ನು ಹಸನು ಮಾಡಿ ನೇಗಿಲ ಸಾಲಿಗೆ ಭತ್ತವನ್ನು ಬಿತ್ತನೆ ಮಾಡ್ತ ಹೋಗೋದು ಮತ್ತು ಇನ್ನೊಂದ್ ಸಾಲಿಗೆ ನೇಗಿಲು ಬರುವಾಗ ಬಿತ್ತನೆಯಾದ ಭತ್ತ ಮಣ್ಣಿನಲ್ಲಿ ಹುದುಗಿ ಹೋಗ್ತಾ ಇತ್ತು.ಹೀಗೆ ಬಿತ್ತಿದ ಭತ್ತ ಮಳೆ ಶುರುವಾಗುತ್ತಿದ್ದ ಹಾಗೆ ಮೊಳಕೆ ಒಡೆದು ಸಸಿ ಆಗ್ತಾ ಇತ್ತು.ಮತ್ತು ನಾಟಿ ಮಾಡುವ ಸಮಯ ಜುಲೈ 20ರ ನಂತರ ಅಥವಾ ಆಗಸ್ಟ್ ಆಗಿದ್ದರಿಂದ ಪಾತೆ ಹಾಕಿದ ಸಸಿ ಸಮರ್ಪಕವಾಗಿ ಬೆಳೆದು ಮತ್ತು ಸಾವಯವ ಕೃಷಿ ಆದ್ದರಿಂದ ನೈಸರ್ಗಿಕವಾಗಿಯೇ ಅದರ ದಂಟು ಗಟ್ಟಿಯಾಗಿರುತ್ತಿತ್ತು . ಮಣ್ಣಿನ ಒಳಗೆ ಬಿತ್ತನೆ ಆದ ಕಾರಣ ಬೇರುಗಳು ಗಟ್ಟಿಯಾಗಿದ್ದು, ಕೀಳುವವರಿಗೆ ಹೆಚ್ಚು ಕೆಲಸ ಮತ್ತು ಶ್ರಮ ಹಾಕಬೇಕಿತ್ತು. ಆದ್ರೆ ನಾಟಿ ಮಾಡಿದ ಮೇಲೆ ಗದ್ದೆ ತುಂಬಾ ಏಡಿಗಳು ಇದ್ದರು, ಗಟ್ಟಿಯಾಗಿ ಬಲಿತ ದಂಟನ್ನು ಕತ್ತರಿಸಲು ಸಾಧ್ಯವಾಗುತ್ತಿರಲಿಲ್ಲ.
ನಿಧಾನಕ್ಕೆ ಜನ ಸುಲಭ ವಿಧಾನದ ಮೊರೆ ಹೋಗಲು ಶುರು ಮಾಡಿದರು ಮಳೆಯ ಟೈಮ್ ಟೇಬಲ್ ಚೇಂಜ್ ಆಗಿದ್ದು ಕಾರಣ ಅನ್ನೋ ಸಬೂಬು ಕೊಟ್ಟರು ಸಹ, ಸುಲಭ ಮಾರ್ಗದ ಬೆನ್ನು ಬಿದ್ದಿದ್ದು ಅಷ್ಟೇ. ಈ ವಿಧಾನದಲ್ಲಿ ಚೆನ್ನಾಗಿ ಮಳೆ ಬಂದು ಗದ್ದೆಗಳಲ್ಲಿ ನೀರು ನಿಂತ ಮೇಲೆ ಭತ್ತವನ್ನು ಒಂದು ಚೀಲದಲ್ಲಿ ತುಂಬಿ ನೀರಿನಲ್ಲಿ ನೆನೆ ಹಾಕಿ ಮೊಳಕೆ ಬಂದ ನಂತರ ತೆಗೆದುಕೊಂಡು ಹೋಗಿ ಸಸಿ ಪಾತಿಗೆ ರೆಡಿ ಆದ ಗದ್ದೆಯಲ್ಲಿ ಒಂದೇ ಸಮನಾಗಿ ಬಿಕ್ಕುವುದು ಅಥವಾ ಬಿಸಾಕುವುದು…. ಈ ವಿಧಾನದಲ್ಲಿ ಬೀಜ ಮಣ್ಣಿನ ಕೆಳಗೆ ಹೂತು ಹೋಗುವುದಿಲ್ಲ ಕೇವಲ ಮೊಳಕೆ ಬಂದ ಬೇರು ಅಷ್ಟೇ ನಿಧಾನಕ್ಕೆ ಮಣ್ಣಿನ ಒಳಗೆ ಇಳಿಯುತ್ತದೆ.ಈ ವಿಧಾನ ಮಾಡುವಾಗ ಗದ್ದೆ ತುಂಬಾ ನೀರು ತುಂಬಿರಬೇಕು ಅಂತ ಕಾಯುತ್ತ ಜೂನ್ ಕೊನೆ ಸಮೀಪಿಸಿರಿತ್ತದೆ ಮತ್ತು ನಾಟಿಗೆ ಒಂದು ತಿಂಗಳು ಅಷ್ಟೇ ಸಮಯ ಬಾಕಿ ಇರುವ ಕಾರಣಕ್ಕೆ ಸಸಿ ವೇಗವಾಗಿ ಬೆಳೆಯಲು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಶುರು ಆಯ್ತು. ಸಸಿ ಸಹ ಬಹಳ ಬೇಗನೆ ಬೆಳೆದು ಲೇಟ್ ಆಗಿ ಬಿತ್ತನೆ ಮಾಡಿದರು ಸಮಯಕ್ಕೆ ಸರಿಯಾಗಿ ನಾಟಿ ಮಾಡಲು ಸಹಕಾರಿ ಆಯ್ತು.
ಅಸಲಿ ಮಾರಣಹೋಮದ ಅಧ್ಯಾಯ ತೆರೆದುಕೊಳ್ಳುವುದೇ ಇಲ್ಲಿಂದ. ನನ್ನ ಮಟ್ಟಿಗೆ ಇದು ಅಂತಿಂತಹ ಮಾರಣಹೋಮವಲ್ಲ ಮಲೆನಾಡಿನ ಅರ್ಧ ನೈಸರ್ಗಿಕ ವ್ಯವಸ್ಥೆಯ ಬುಡ ಅಲ್ಲಾಡಿಹೋಗಿದೆ ಅಂತಹ ಘನಘೋರ ಮಾರಣ ಹೋಮ. ಯಾವಾಗ ಅವಧಿಗೂ ಮೊದಲೇ ರಾಸಾಯನಿಕ ಗೊಬ್ಬರ ಬಳಸಿ ಸಸಿ ಬೆಳೆಯಲಾಯಿತೋ.. ಅವು ಹೇಗೆ ಅಂದರೆ ನಾಟಿ ಕೋಳಿ ಮತ್ತು ಫಾರಂ ಕೋಳಿಗಳ ರೀತಿಯೇ .. ನಾಟಿ ಕೋಳಿ ಎಷ್ಟು ಗಟ್ಟಿ ಅದೇ ಕೆಮಿಕಲ್ ಫುಡ್ ನ ಫಾರಂ ಕೋಳಿ ಎಷ್ಟು ನಾಜೂಕು? ಅಂತೆಯೇ ಇಲ್ಲಿ ಸಹ ..
ಈ ನಾಜೂಕಿನ ಭತ್ತದ ಸಸಿಗಳ ನಾಟಿ ವ್ಯಾಪಕವಾಗಿ ಶುರುವಾದ ಮೇಲೆ ಈ ಏಡಿಗಳು ಯಾವ ಕಾರಣಕ್ಕೆ ನಾಟಿ ಮಾಡಿದ ತಕ್ಷಣ ಸಸಿಗಳನ್ನು ಕತ್ತರಿಸಲು ಶುರು ಮಾಡಿದವೋ ಗೊತ್ತಿಲ್ಲ ಆದ್ರೆ ಗದ್ದೆಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಇರುತ್ತಿದ್ದ ಮಳೆಗಾಲದಲ್ಲಿ ಮಲೆನಾಡಿಗರ ಮನೆಯಲ್ಲಿ ತಿಂಗಳಿಗೆ 10 ದಿನವಾದರೂ ಸಾರಿಗೆ ಆಗುತ್ತಿದ್ದ ಏಡಿಗಳು ನಾಟಿ ಬುಡವನ್ನು ಕತ್ತರಿಸಲು ಶುರು ಮಾಡಿದವು. ಈ ಮೊದಲು ದಂಟು ಬಲಿತು ಗಟ್ಟಿಯಾಗಿದ್ದು ಕತ್ತರಿಸಲು ಆಗ್ತಾ ಇರ್ಲಿಲ್ಲ. ಆದ್ರೆ ಈಗ ಫಾರಂ ಕೋಳಿಯಂತ ನಾಜೂಕು ಸಸಿ ಕೊಂಬಿಗೆ ಸಿಕ್ಕ ತಕ್ಷಣ ಕಲಾಸ್.. ಹೀಗೆ ನಾಟಿಯಾದ ಗದ್ದೆಗಳು ಏಡಿಗಳ ಕೊಂಬಿಗೆ ಸಿಕ್ಕಿ ಖಾಲಿ ಬಯಲುಗಳಾಗಿ ಪರಿವರ್ತನೆ ಆಗೋಕೆ ಶುರು ಆಯ್ತು. ನೋಡಿ ಆಗ ಬಂದವನೇ ಸುಪಾರಿ ಪಡೆದ ರಕ್ಕಸ ತಿಮಿಟ್ ಅಂತೇನೋ ಹೆಸರಿನ ಸುಪಾರಿ ಕಿಲ್ಲರ್. ಏಡಿ ಔಷಧಿ ಅನ್ನೋ ಹೆಸರಲ್ಲಿ ಮಲೆನಾಡಿನ ಪ್ರತಿ ಗದ್ದೆಗೂ ಸೆಕ್ಯೂರಿಟಿ ಗಾರ್ಡ್ ಆಗಿ ಬಂದ ನೋಡಿ.
ಅದೆಂತಹ ಅಪಾಯಕಾರಿ ವಿಷ ಅದು ಅಂದರೆ, ಗದ್ದೆಗೆ ಸುರಿದ ಕೆಲವೇ ನಿಮಿಷಗಳಲ್ಲಿ ನೀರಿನೊಂದಿಗೆ ಕಲೆತು ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೀನುಗಳ ಒದ್ದಾಟ ಮಾರಣಹೋಮ, ಅಲ್ಲಿಂದ ಕುಣಿಯೊಳಗೆ ಅಡಗಿ ಕುಳಿತ ಏಡಿಗಳನ್ನು ಬಿಡದೆ ಸಾವಿರ ಲಕ್ಷ ಸಂಖ್ಯೆಯಲ್ಲಿ ಏಡಿಗಳ ಮಾರಣ ಹೋಮ. ನಾವು ಅವತ್ತಿಗೆ ಭಾವಿಸಿದ್ದು ಇಷ್ಟೇ. ಪ್ರಕೃತಿಯ ಆಹಾರ ಸರಪಳಿ ಅಷ್ಟಕ್ಕೇ ನಿಲ್ಲೋದಿಲ್ಲ ನೋಡಿ, ಯಾವ ಆಹಾರ ಸರಪಳಿ ಇತ್ತೋ ಅದು ಸಾವಿನ ಸರಪಳಿಯಾಗಿ ಸುಪಾರಿ ಕೊಟ್ಟವನನ್ನ ಬಿಟ್ಟು ಉಳಿದೆಲ್ಲ ಮೂಕ ಪ್ರಾಣಿಗಳ ಅಪೋಷನ ತೆಗೆದುಕೊಳ್ಳಲು ಶುರುವಾಯಿತು. ಏಡಿಗಳಿಗೆ ನೇರ ವಿಷವಾದರೆ ಉಳಿದ ಜೀವಿಗಳಿಗೆ ಒಂಥರ ಸ್ಲೋ ಪಾಯಿಸನ್ ಆಗಿ ಕೆಲಸ ಮಾಡಿತು. ಯಾರ ನಾಪತ್ತೆಯೂ ಒಮ್ಮೆಲೇ ಗಮನಕ್ಕೆ ಬರುವ ಹಾಗೆ ಆಗಲಿಲ್ಲ, ಆದರೆ 25 ವರ್ಷಗಳ ನಂತರ ಒಮ್ಮೆಲೇ ಹಿಂತಿರುಗಿ ಬಾಲ್ಯದಲ್ಲಿ ಕಂಡದ್ದೆಲ್ಲ ನೋಡಿದರೆ ಈಗ ಅವ್ಯಾವುದು ಇಲ್ಲ. ಮನುಷ್ಯ ,ಮನುಷ್ಯನ ಪೂರ್ವಜ ಮಂಗ ಮತ್ತು ಅಕೇಶಿಯ ನೆಡುತೋಪು. ಮನುಷ್ಯನಿಗಿಂತ ದೈತ್ಯ ಜೀವಿ ಕಾಡುಕೋಣ ಇಷ್ಟೇ .
ಮಲೆನಾಡಿನಲ್ಲಿ ಆ 90ರ ದಶಕದಲ್ಲಿ ಪ್ರಾಣಿ ಪಕ್ಷಿಗಳಿಗೆ ಬರವೇ… ಬೆಳಿಗ್ಗೆ ಕೋಳಿ ಕೂಗುವ ಮೊದಲೇ ಕೋಗಿಲೆಯ ಕೂಗು. ಆದರೆ ಅದಕ್ಕೆ ವಸತಿ ಕೊಟ್ಟು ಮರಿಯಾಗಲು ಅಸರೆಯಾದ ಕಾಗೆಯ ಅರಚಾಟ ನಸುಕಿನಲ್ಲೇ, ಗುಬ್ಬಿ, ಗಿಳಿ, ಮಂಗಟೆ ಹಕ್ಕಿಗಳ ಸದ್ದು, ಗೋರವಾಂಕ ಮಿಂಚುಳ್ಳಿ, ಬೆಳ್ಳಕ್ಕಿ ಇಲ್ಲದ ಪಕ್ಷಿ ಸಂಕುಲ ಯಾವುದು? ಮದ್ಯಾಹ್ನದ ಸುಡು ಬಿಸಿಲಲ್ಲೂ ಕೀ ಕೀ ಅಂತ ಕೆನೆಯುತ್ತಿದ್ದ ಗಿಡುಗಗಳೆಷ್ಟು? ಕತ್ತಲಾಗುವುದೇ ಬೇಡ ಸಂಜೆ ಆಗುತ್ತಲೇ ತಾ ಮುಂದು ತಾಮುಂದು ಎಂದು ಎಲ್ಲ ದಿಕ್ಕುಗಳಿಂದ ಊಳಿಟ್ಟು ಕಿವಿ ತಮಟೆ ಹರಿಯುತ್ತಿದ್ದ ನರಿಗಳೆಷ್ಟು. ಆ ಏಡಿಗಳ ಮಾರಣ ಹೋಮ ನಡೆಸಿದ್ದಾಯ್ತು.. ವಿಷಕ್ಕೆ ಟ್ರೈನಿಂಗ್ ಕೊಟ್ಟಿರಲಿಲ್ಲ ಅಲ್ವಾ ಏಡಿಗಳನ್ನು ಮಾತ್ರ ಸಾಯಿಸಬೇಕು ಅಂತ, ಏಡಿಗಳ ಜೊತೆಗೆ ಸಣ್ಣ ಮೀನುಗಳು, ಕಪ್ಪೆಗಳು ರೈತನ ಮಿತ್ರ ಎರೆಹುಳು ಹೀಗೆ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನು ಮುಗಿಸಲು ಟೊಂಕ ಕಟ್ಟಿ ನಿಂತಿತ್ತು.
ಆ ಸಂಧರ್ಭದಲ್ಲಿ ನೀವು ಗದ್ದೆ ಸಮೀಪ ಹೋದರೆ ದುರ್ನಾತ, ಎಷ್ಟು ಜನ ಮಲೆನಾಡಿನವರು ಈ ದುರ್ನಾತದ ಅನುಭವ ಪಡೆದಿದ್ದಾರೋ, ದುರ್ನಾತಕ್ಕೆ ಕಾರಣ, ದುಷ್ಟ ಏಡಿ, ಪಾಪದ ಕಪ್ಪೆ, ಏಡಿಯ ಪುಟ್ಟ ಕಂದಮ್ಮ ಅನ್ನುವ ಬೇಧವಿಲ್ಲದೆ ಜೀವ ತೊರೆದು ಬಿದ್ದು ಕೊಳೆತ ಆ ಜೀವಿಗಳ ಕಳೆಬರದ ದುರ್ನಾತ. ಯಾರ ಮನೆಯ ಹುಂಜವನ್ನೋ ಹೊತ್ತೊಯ್ಯಲು ಹೊಂಚು ಹಾಕಿ ರಿಸ್ಕಿ ಕೆಲಸ ಮಾಡುತ್ತಿದ್ದ ದುಷ್ಟ ನರಿಯೂ ಮಳೆಗಾಲದಲ್ಲಿ ಮಾತ್ರ ಸುಮ್ನೆ ರಿಸ್ಕ್ ಬೇಡ ಅಂತ ಏಡಿಗಳನ್ನೇ ಪ್ರಮುಖ ಆಹಾರ ಮಾಡಿಕೊಂಡಿತ್ತು.. ಅದಕ್ಕೇನು ಗೊತ್ತಿತ್ತು ಇವೆಲ್ಲ ವಿಷವುಂಡು ಹೊಟ್ಟೆ ಮೇಲಾಗಿರೋ ಏಡಿಗಳು ಎಂದು.. ಸುಲಭವಾಗಿ ಸಿಕ್ಕ ಏಡಿಗಳನ್ನು ಹೊಟ್ಟೆ ಬಿರಿಯುವಷ್ಟು ತಿಂದವು ನಿಧಾನಕ್ಕೆ ನರಿಗಳು ಇದ್ದವು ಅನ್ನುವ ನಿಶಾನೆಗೂ ಸಹ ಒಂದೇ ಒಂದು ನರಿ ಇಲ್ಲದ ಹಾಗೆ ಸರ್ವನಾಶ ಆಗಿ ಹೋದವು. ಬಹುಶ ಮಲೆನಾಡಿನಲ್ಲಿ 90% ಜನ ನರಿಯನ್ನು ನೋಡದೆ ಕೊನೆ ಪಕ್ಷ ನರಿ ಊಳಿಡುವುದ ಕೇಳಿ ಅದೆಷ್ಟೋ ವರ್ಷಗಳೇ ಕಳೆದವು. ಮತ್ತದೇ ಏಡಿಗಳ ನಂಬಿಕೊಂಡಿದ್ದ ಕಾಗೆ, ಬೆಳ್ಳಕ್ಕಿ, ಗಿಡುಗ ಎಲ್ಲವೂ ಕೆಲವೇ ವರ್ಷದಲ್ಲಿ ತೆರೆ ಮರೆಗೆ ಸರಿದವು..
ಹುಲ್ಲಿನ ಬಣವೆಯಲ್ಲಿ ಅಂಗಾತ ಮಲಗಿಕೊಂಡು ಆಕಾಶದಲ್ಲಿ ಸುಮ್ಮನೆ ತೇಲುತ್ತ ಕೆನೆಯುತ್ತ ಹಾರುತ್ತಿದ್ದ 10 20 ಗಿಡುಗಗಳ ಆ ತೇಲುವ ಕಲೆಯನ್ನು ಕಣ್ಣು ಮುಚ್ಚದೆ ನೋಡುತ್ತಿದ್ದ ನಾನು ಗಿಡುಗ ಹೇಗೆ ತೇಲುತ್ತಿತ್ತು ಅನ್ನೋದನ್ನೇ ಮರೆತಿದ್ದೇನೆ.. ಕಾಗೆಗಳಲ್ಲಿ ಕಡುಗಪ್ಪು ಬಣ್ಣದ ಕೆದರಿದ ಪುಕ್ಕದ ಕಾಗೆಗೆ ದೈಯ್ ಕಾಗೆ ಅನ್ನುತ್ತಿದ್ದ ಅಜ್ಜಿಯ ಮಾತುಗಳು ನೆನಪಿವೆ. ಕಾಗೆಯಂತ ಸಾಮಾನ್ಯ ಹಕ್ಕಿಯನ್ನು ಸಹ, ಬೆಂಗಳೂರಿನಲ್ಲಿ ನೋಡಿ ಓಹ್ ಇದು ಕಾಗೆ ಮೊದಲು ಸಿಕ್ಕಾಪಟ್ಟೆ ಇದ್ದವು ಮಲೆನಾಡಿನಲ್ಲಿ ಅಂದುಕೊಳ್ಳುತ್ತಿದ್ದೆನೆ. ಕಾಗೆಯೇ ಹೋದ ಮೇಲೆ ಗೂಡು ಕಟ್ಟಲು ಯಾರು ಬರ್ತಾರೆ ಕೋಗಿಲೆ ಮೊಟ್ಟೆ ಎಲ್ಲಿ ಇಡತ್ತೆ.. ಕೋಗಿಲೆಯ ಕೂಗು ಮರೆಯಾಯಿತು..
ಪಕ್ಷಿಗಳಲ್ಲಿ ಹೆಚ್ಚಿನವು ಮಿಶ್ರಹಾರಿಗಳು. ಎರೆಹುಳು ಕೀಟಗಳು ಏಡಿ ಮೀನು ಕಪ್ಪೆ ಇವೆಲ್ಲವನ್ನು ತಿಂದೆ ಬದುಕುವಂತವು.. ಬೀ ಈಟರ್ ಗಳು ಸಾವಿರ ಸಂಖ್ಯೆಯಲ್ಲಿ ಕರೆಂಟ್ ಲೈನ್ ಮೇಲೆ ತೋರಣ ಕಟ್ಟಿದ ಹಾಗೆ ಕುಳಿತಿರ್ತಾ ಇದ್ದವು ಈಗ ಎಲ್ಲ ಕಡೆ ಕರೆಂಟ್ ಲೈನ್ ಇದೆ ಆದ್ರೆ ಹಸಿರಾಗಿ ತೋರಣದಂತೆ ಕಾಣುತ್ತಿದ್ದ ಬೀ ಈಟರ್ ಪಕ್ಷಿ ಸುಳಿವಿಲ್ಲ. ಬೆಳಿಗ್ಗೆ ಹೆಬ್ಬಲಿಸಿನ ಮರದ ಮೇಲೆ ಒಮ್ಮೆ ಕುಳಿತು ಅರ್ಧ ಗಂಟೆ ಪ್ರೈಮರಿ ಶಾಲೆಯ ಗದ್ದಲ ಸೃಷ್ಟಿಸಿ ಮತ್ತೆ ಒಮ್ಮೆಲೇ ದೂರದೂರಿಗೆ ಆಹಾರ ಅರಸಿ ಹೊರಡುತ್ತಿದ್ದ ಹುರುಳಿ ಹಕ್ಕಿ( ಇಂಗ್ಲಿಷ್ ಹೆಸರು ಅಥವಾ ಬೇರೆ ಹೆಸರು ಗೊತ್ತಿಲ್ಲ)ಗಳ ಹಿಂಡು ಮತ್ತೆ ಸಂಜೆ ಕರಾರುವಕ್ಕೂ ಸಮಯಕ್ಕೆ ಬಂದು ಕುಳಿತು ಅರ್ಧ ಗಂಟೆ ಮತ್ತೆ ಕಲರವ ಮಾಡಿ ಹೋಗ್ತಿದ್ದವು.. ಅದೇ ಬೃಹತ್ ಹೆಬ್ಬಲಸಿನ ಮರ ಇದೆ ಆದ್ರೆ ಹುಳ್ಳಿ ಹಕ್ಕಿಗಳ ಸುಳಿವಿಲ್ಲ.
ಮರಕುಟಿಗದ ಸದ್ದು ಇಲ್ಲ, ಗೋರವಾಂಕನ ಕಿಚಿಕಿಚಿಯು ಇಲ್ಲ. ಮಂಗಟೆ ಹಕ್ಕಿಯ ಮಂಗಾಟವೂ ಕಡಿಮೆ. ಹೊರಸಲು ಹಕ್ಕಿ ಕಣ್ಮರೆ, ಅಸಂಖ್ಯಾತ ಹಕ್ಕಿಗಳ ಹೆಸರು ನೆನಪಿಗೆ ಬಾರದಷ್ಟು ನೇಪಥ್ಯಕ್ಕೆ ಸರಿದಿವೆ. ಸರಿ ಏಡಿಗಳ ತಿಂದ ಹಕ್ಕಿಗಳು ಸತ್ತವು, ಚಿಲಿಪಿಲಿ ಮಾಡ್ತ ಮರದ ತುಂಬೆಲ್ಲ ಕುಳಿತಿರುತ್ತಿದ್ದ ಗಿಳಿಗಳೆಲ್ಲಿ ಮಾಯ? ಭತ್ತವನ್ನು ಮೊಳಕೆ ಕಟ್ಟಿ ಮೇಲಕ್ಕೆ ಬಿಕ್ಕಿದರು, ಮೊಳಕೆ ಭತ್ತವ ಕಂಡ ಗಿಳಿಗಳ ಹಿಂಡು ಹಿಂಡೇ ಗದ್ದೆಯ ಸಸಿ ಪಾತಿಯಲ್ಲಿ …ರೈತ ರೊಚ್ಚಿಗೆದ್ದು ಓಡಿಸುತ್ತಿದ್ದ, ರಾಸಾಯನಿಕದಲ್ಲಿ ಮಿಂದೆದ್ದ ಭತ್ತ ತಿಂದವು.. ಊರು ಬಿಟ್ಟವೋ ಪ್ರಾಣ ಬಿಟ್ಟವೋ ಯಾರು ಬಲ್ಲರು
ಕಂಬಳಿ ಹುಳು ಎಲೆ ತಿಂದಿತೆಂದು ಅದಕ್ಕೂ ವಿಷ, ಮಕ್ಕಳಿಗೆ ಚಿಟ್ಟೆಯನ್ನೆಲ್ಲಿ ತೋರಿಸುವುದು. ನೋಡು ಬಟರ್ ಫ್ಲೈ ಅಂತ ಮೊಬೈಲ್ ನಲ್ಲಿ ತೋರಿಸೋದು, ಹೆಲಿಕಾಪ್ಟರ್ ಹುಳ ( ಪೀರಲಕ್ಕಿ)ಅಥವಾ dragon ಫ್ಲೈ ಹಿಡಿದು ಅದಕ್ಕೆ ದಾರ ಕಟ್ಟಿ ಹಾರಿಸಿ ಆಟ ಆಡ್ತಾ ಇದ್ದೆವು.. ಅವು ಇಲ್ಲ. ವಾರಕ್ಕೊಮ್ಮೆ ಜುಯ್ ಅಂತ ವಿಮಾನ ಹೋದ ಹಾಗೆ ಊರಿಗೆಲ್ಲ ಗೊತ್ತಾಗುವ ಹಾಗೆ ಸದ್ದು ಮಾಡುತ್ತಾ ಹಾರುತ್ತಿದ್ದ ಜೇನು ಹುಳುಗಳ ಹಾರಾಟ ವಿರಳವಾಗಿದೆ. ಮನೆ ಬಾಗಿಲಿಗೆ ಬಂದು ಛಿವ್ ಛಿವ್ ಅನ್ನುತ್ತಿದ್ದ ಅಳಿಲು ಅಪರೂಪ ನಾಗನ ಸುಳಿವು ಕೇವಲ ನಾಗಪಾತ್ರಿಗಳು ಮತ್ತು ಪುರೋಹಿತರ ದಿವ್ಯ ದೃಷ್ಟಿಯಲ್ಲಿ ನಾಗ ನಡೆಯಲ್ಲಿ ಎನ್ನುವಷ್ಟರ ಮಟ್ಟಿಗೆ ವಿರಳವಾಗಿವೆ..
ನವಿಲಿನ ಮರಿಗಳ ಹೊಂಚು ಹಾಕಿ ಬೇಟೆ ಆಡಲು ನರಿ ಇಲ್ಲ, ಗಿಡುಗ ಇಲ್ಲ, ನವಿಲು ಮಾತ್ರ ಕೋಳಿಗಿಂತ ಕಡೆಯಾಗುವಷ್ಟು ಹೇರಳವಾಗಿವೆ. ಅಳಿದುಳಿದ ಸಣ್ಣಪುಟ್ಟ ಹಾವುಗಳನ್ನು ಬಡಿದು ಬಾಯಿಗೆ ಹಾಕಿಕೊಂಡು ಮನುಷ್ಯನ ಜೊತೆಜೊತೆಗೆ ಸಮತೋಲನ ತಪ್ಪಿಸುವ ಕಾರ್ಯಕ್ಕೆ ಸಾತ್ ನೀಡುತ್ತಿವೇ ಕಾರಣ ಅವು ಸಹ ನಮ್ಮ ಸಂವಿಧಾನದಲ್ಲಿ ಹಕ್ಕು ಪಡೆದಿದ್ದಾವಲ್ಲ ಹಾಗಾಗಿ. ಕಾಳಿಂಗ ಸರ್ಪವನ್ನು ಪ್ರಕೃತಿಯೇ ನಿಯಂತ್ರಿಸುತ್ತಿತ್ತು ಎಷ್ಟು ಬೇಕೋ ಅಷ್ಟಕ್ಕೇ, ಉಹೂಂ ಒಂದು ಕಡೆ ಸರ್ವನಾಶ ಮಾಡಿದ್ದು ಸಾಲದು ಎಂಬಂತೆ ಕಾಳಿಂಗ ಸಂಶೋಧನೆ ಮಾಡ್ತೀವಿ ಅಂತ ಸಿಕ್ಕ ಸಿಕ್ಕ ಕಾಳಿಂಗದ ಮೊಟ್ಟೆಯನ್ನೆಲ್ಲ ಸಂರಕ್ಷಿಸಿ ಮರಿ ಮಾಡಿ ಕಾಡಿಗೆ ಬಿಟ್ಟು ಅಳಿದುಳಿದ ರೈತನ ಮಿತ್ರ ಕೇರೆ ಹಾವನ್ನು ಸಹ ದೈತ್ಯ ಕಾಳಿಂಗದ ಬಾಯಿಗೆ ಹಾಕಿದ್ದು ಆಯ್ತು, ಒಂದು ಕಡೆ ನಾನು ಉಳಿಯಬೇಕು ಅಂತ ಮಾರಣ ಹೋಮ ಮಾಡಿ ಮತ್ತೊಂದು ಕಡೆ ನಾನು ಉಳಿಸುತ್ತೇನೆ ಅಂತ ಮಾರಣಹೋಮ
ಕಾಡೆನು ನಾಶ ಆಗಿಲ್ಲ ನಾವು ಬೊಬ್ಬೆ ಹೊಡೆಯುವಷ್ಟು, ಕಾಡು ಮೊದಲಿಗಿಂತಲೂ ತುಸು ಹೆಚ್ಚೆ ಆಗಿದೆ , ಒತ್ತುವರಿ ಕಾರಣಕ್ಕೆ ಕಡಿಮೆ ಆದರೂ ದಿನ ಬಳಕೆಗೆ ಬದಲಿ ವ್ಯವಸ್ಥೆಗಳು ಬಂದ ಕಾರಣ ಕಾಡಿನ ಮರಗಳ ಅವಲಂಬನೆ ಕಡಿಮೆ ಆಗಿದೆ. ಆದರೆ ಕಾಡು ಮಾತ್ರವೇ ಇದ್ದು ಕಾಡಲ್ಲಿ ವಾಸ ಇರಬೇಕಾದ ಪ್ರಾಣಿ ಪಕ್ಷಿಗಳೇ ಇಲ್ಲದೆ ಹೋದರೆ? ಯಾರು ವಾಸವಿಲ್ಲದ ಪಾಳು ಬಂಗಲೇಯಂತೆ. ಒಂದೇ ಒಂದು ಸರಿಸೃಪ, ಕೀಟ, ಹಕ್ಕಿ ಮನುಷ್ಯನಿಗೆ ಸಣ್ಣ ಕಾಟ ಕೊಟ್ಟರು, ಉಪಟಳ ಅಂತ ಪರಿಗಣಿಸಿ ಸುಪಾರಿ ರಕ್ಕಸನ ಆಗಮನ ಆಗತ್ತೆ ನಾವು ಬದುಕಬೇಕು ನಿಜ, ನಾನು ಸ್ವಾರ್ಥಿಯೇ ಆದರೆ ಯಾಕೋ ಈಗೀಗ ಖಾಲಿ ಮಲೆನಾಡಿನಲ್ಲಿ ದೂರದಲ್ಲಿ ಕುಳಿತರು ಸಹ ಜೊತೆಗಾರರ ಹಾಗೆ ಇದ್ದ, ಕಾಗೆಯಂತ ಪಕ್ಷಿಯನ್ನು ಸಹ ಮಿಸ್ ಮಾಡಿಕೊಳ್ಳುವಷ್ಟು ಬರಿದು ಮಾಡಿಬಿಟ್ಟೆವ ಅನ್ನಿಸತ್ತೆ.
ನರಿಯ ಕೂಗು ಮತ್ತೆ ಕೇಳಬೇಕು ಅನ್ನಿಸತ್ತೆ, ಗಿಡುಗ ತೇಲುವ ಅದರ ಏರೋ ಡೈನಾಮಿಕ್ ಟೆಕ್ನಾಲಜಿ ದೇಹ ವಿನ್ಯಾಸ ಕಣ್ಣು ತುಂಬಿಕೊಳ್ಳುವ ಅನ್ನಿಸತ್ತೆ, ಗದ್ದೆ ಬಯಲಿನಲ್ಲಿ ಕೇರೆ ಹಾವುಗಳು ಎಣೆಯಾಡುವುದು(ಸರಸ) ನೋಡಬೇಕು ಅನ್ನಿಸತ್ತೆ. ಮಲೆನಾಡಿನ ವೈಭವ ಮತ್ತೆ ಮರುಕಳಿಸುವುದಿಲ್ಲ, ಭೂಮಿ ಮತ್ತೊಮ್ಮೆ ಯುಗಾಂತ್ಯವ ಮಾಡುವವರೆಗೂ.. ಮಲೆನಾಡು ಈಗ ಮಂಗಗಳ ಮತ್ತು ಮಂಗನಂತವರ ಬೀಡು, ಬೇಲಿ ಮುರಿದು ನುಗ್ಗಿ ಲೂಟಿ ಮಾಡುವ ಕಾಡುಕೋಣಗಳ ಮತ್ತು ಅಂತದ್ದೇ ಮನಸ್ಥಿತಿಯವರ ನಾಡು. ಈಗ ಜೀರುಂಡೆಯ ಸದ್ದು ಸಹ ಅಡಗಿ ಹೋಗಿದೆ ನೀರವ ಮೌನ. ನರಿಗಳ ಬದಲಿಗೆ ಆಗಾಗ ಊಳಿಡುವ ನಾಯಿಗಳು, ಗಿಡುಗಳ ಬದಲಿಗೆ ರಾತ್ರಿ ಸಹ ಕೀ ಕೀ ಕೆನೆಯುವ ಬೈಕುಗಳು ……
ಇಷ್ಟೇನಾ ನಾವೇನೋ ಯಾರೋ ಯಾರಿಂದಲೋ ಹತ್ಯೆಯಾಗಿ ಹೋದವರ ಬಗ್ಗೆ ಬರೆಯುತ್ತಾನೆ ಏನು ಕೊಂಡರೆ ಇದ್ಯಾವ್ದೋ ಹಕ್ಕಿ ಪಿಕ್ಕಿ ಕಥೆ, ಇಷ್ಟಕ್ಕೆ ಇಷ್ಟು ಬಿಲ್ಡಪ್ ಕೊಟ್ಟಿದ್ದ ಅನ್ನಿಸಬಹುದು….ಯಾಕಂದ್ರೆ ನಮಗೆ ಮನುಷ್ಯ ಸತ್ತರಷ್ಟೇ ಹತ್ಯೆ, ನರಮೇಧ ಪ್ರಾಣಿ ಮೇಧ ಅನ್ನುವುದು ಇಲ್ಲವಲ್ಲ. ಹಾಗಾಗಿ ನರಮೇಧಕ್ಕೆ ಇರುವ ಅಟೆನ್ಷನ್ ಪ್ರಾಣಿಮೇಧಕ್ಕೆ ಇಲ್ಲ. ಯುದ್ಧದಲ್ಲಿ ತಮ್ಮವರ ಕಳೆದುಕೊಂಡು ಅನಾಥವಾದ ಮಕ್ಕಳ ನೋಡಿ , ವಯೋವೃದ್ಧರ ನೋಡಿ ಮರುಗುತ್ತೇವೆ. ಯುದ್ದವನ್ನೇ ಮಾಡದೆ ಹೊಟ್ಟೆಪಾಡು ಮಾಡಿದ್ದಕ್ಕೆ ಏಡಿ ಮಾಡಿದ ತಪ್ಪಿಗೆ ಎಲ್ಲರನ್ನು ಕಳೆದುಕೊಂಡು ಅಳಿದುಳಿದ ನಾಲ್ಕು ಹಕ್ಕಿಗಳ ಬಗ್ಗೆ ಮರುಕ ಬರೋಲ್ಲ ನಮಗೆ
ಕೊನೆಯಲ್ಲೊಮ್ಮೆ ತಣ್ಣಗೆ ಯೋಚಿಸಿ ಬಿಡಿ.. ನರಿ ಸಂಘ ಜೀವಿ ಕುಟುಂಬಗಳನ್ನು ಮಾಡಿಕೊಂಡು ಬದುಕುವ ಪ್ರಾಣಿ, ವಿಷ ಪ್ರಾಶನದ ಏಡಿ ತಿಂದು ಕಣ್ಣೆದುರೇ ನರಳಿ ನರಳಿ ಸತ್ತ ಮರಿಯ ನೋಡಿ ತಾಯಿ ನರಿ ಅದೆಷ್ಟು ಅತ್ತಿರಬಹುದು. ದಿನೇ ದಿನೇ ಒಬ್ಬೊಬ್ಬರೇ ತನ್ನ ಕುಟುಂಬಸ್ಥರು ಪ್ರಾಣ ಬಿಡುವಾಗ ಅದೆಷ್ಟು ಮನದಲ್ಲೇ ಉಮ್ಮಳಿಸಿ ಅತ್ತು ಕೊನೆಗೆ ಒಬ್ಬಂಟಿಯಾಗಿ ಅಲೆಯುತ್ತ ಎಲ್ಲೋ ಬಿದ್ದು ತಾನು ಪ್ರಾಣ ಬಿಟ್ಟಿರಬಹುದು. … ನಮ್ಮ ಕುಟುಂಬ ನಮ್ಮ ಕಣ್ಣೆದುರೇ ಹೀಗೆ ಛಿದ್ರವಾದರೆ ಹೇಗಿರಬಹುದು ಎಂದು …ಈಗ ಮಾರಣಹೋಮ ಸ್ವಲ್ಪ ಮನಸ್ಸಿಗೆ ತಟ್ಟಬಹುದು ಯಾಕಂದ್ರೆ ಸುಮ್ಮನೆ ಬರೆಯಲು ಕುಳಿತ ನನಗಂತೂ ಕುತಂತ್ರಿ ನರಿಯ ಕೊನೆ ದಿನಗಳ ನೆನೆದು ಒಂದರೆ ಕ್ಷಣ ಕಣ್ಣು ತೇವವಾಗಿದ್ದು ಅನುಭವಕ್ಕೆ ಬಂತು..