ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಹಲವೆಡೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರ ಕಾರ್ಮಿಕರ ಜೀವ ಹಾನಿ ಜೊತೆಗೆ ಬೆಳೆಗಳನ್ನು ನಾಶಮಾಡುತ್ತಿವೆ. ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಆನೆ ದೊಡ್ಡಿಗಳ ನಿರ್ಮಾಣ ಮಾಡಿ ಶಾಶ್ವತ ಪರಿಹಾರದ ಯೋಜನೆ ರೂಪಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಕಳೆದ 5 ದಿನಗಳ ಹಿಂದೆ ಜಿಲ್ಲೆಯ ಬಾಳೆಹೊನ್ನೂರು ಬಳಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದ್ದು ಬಿಳುಕೊಪ್ಪ ಅರಣ್ಯದಲ್ಲಿ 14 ವರ್ಷದ ಕಾಡಾನೆಯನ್ನು ಸೆರೆ ಹಿಡಿದು ಸಕ್ರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಈ ಭಾಗದಲ್ಲಿ ಮತ್ತೊಂದು ಕಾಡಾನೆ ಸಂಚರಿಸುತ್ತಿದ್ದು ನಾಳೆಯಿಂದ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

