ನಮ್ಮ ಕನ್ನಡ ನೆಲೆದ ಸಂಸ್ಕೃತಿ, ಆಚಾರ ವಿಚಾರ, ಧಾರ್ಮಿಕ ಆಚರಣೆ ಎಲ್ಲದಕ್ಕೂ ಅದರದ್ದೇ ಆದ ವಿಶೇಷತೆಯಿದೆ. ನಮ್ಮ ಕನ್ನಡ ನಾಡಿನ ಕಲೆ, ಧಾರ್ಮಿಕ ವಿಚಾರಗಳು ಕೇವಲ ನಮ್ಮಲ್ಲಿ ಮಾತ್ರ ಆಚರಣೆ ಮಾಡದೆ, ಹೊರ ದೇಶದಲ್ಲೂ ಪಸರಿಸಿದೆ. ಇದಕ್ಕಾಗಿ ನಮ್ಮ ರಾಜ್ಯದ ಅದೆಷ್ಟೋ ಮಠಗಳು, ಸ್ವಾಮೀಜಿಗಳು ಮಹಾನ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ನಮ್ಮ ರಾಜ್ಯದ ಹೆಮ್ಮೆಯ ಆದಿ ಚುಂಚನಗಿರಿ ಮಠ ತನ್ನ ಕಾರ್ಯವನ್ನು ದೂರದ ಅಮೇರಿಕಾದಲ್ಲೂ ಕೈಗೊಂಡಿದೆ.
ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ಶಿಪ್ ನಲ್ಲಿ ಶ್ರೀ ಆದಿ ಚುಂಚನಗಿರಿ ಮಠದ ವತಿಯಿಂದ 80 ಕೋಟಿ ರೂ. ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣವಾಗುತ್ತಿದ್ದು, ಮಠಾಧಿಪತಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು #NirmalanandaSwamiji ಕಾಮಗಾರಿ ಪರಿಶೀಲನೆ ಮಾಡಿದರು.
ಶ್ರೀಗಳು ದೇಗುಲ ಕಾಮಗಾರಿ ಪರಿಶೀಲನೆಗಾಗಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದಿ ಚುಂಚನಗಿರಿ ಮಹಾಸಂಸ್ಥಾನ ಈ ಟೌನ್ಶಿಪ್ ನಲ್ಲಿ 20 ಎಕರೆ ಜಮೀನು ಖರೀದಿಸಿದೆ. ಇಲ್ಲಿ ನಿರ್ಮಾಣ ಆಗುತ್ತಿರುವ 5000 ಚದರ ಮೀಟರ್ ಕಟ್ಟಡದಲ್ಲಿ ಯೋಗ, ಧ್ಯಾನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಉದ್ದೇಶ ಹೊಂದಿದೆ.
ಮೊದಲ ಹಂತದಲ್ಲಿ ದೇವಾಲಯ, ಅರ್ಚಕರ ನಿವಾಸ ನಿರ್ಮಾಣವಾಗಲಿದೆ. ಡಾ. ಅಮರನಾಥಗೌಡ, ಡಾ. ಬಾಬು ಕಿಲಾರ ಅವರ ಮುಂದಾಳತ್ವದಲ್ಲಿ ಈ ಕಾಮಗಾರಿಗಳು ಆರಂಭವಾಗಿವೆ. ಸುಮಾರು 10 ಮಿಲಿಯನ್ ಡಾಲರ್ (80 ಕೋಟಿ ರೂ.) ಮೊತ್ತದ ಯೋಜನೆ ಇದಾಗಿದೆ. ಕಿಲಾರ ಅವರು ದೇವಾಲಯದ ವಿನ್ಯಾಸ, ಪರಿಸರ ಇಲಾಖೆ ಅನುಮತಿ ಮತ್ತು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.