ಕಳೆದ ಒಂದು ವರ್ಷದಲ್ಲಿ ಹಲವು ಶ್ರೀಮಂತರ ಬಹಳಷ್ಟು ಸಂಪತ್ತು ಕರಗಿದೆ. ಭಾರತೀಯ ಉದ್ಯಮಿಗಳ ಅನೇಕರೂ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಮುಕೇಶ್ ಅಂಬಾನಿ ಈ ವರ್ಷ ಶೇ. 20ರಷ್ಟು ಸಂಪತ್ತು ಕಳೆದುಕೊಂಡಿದ್ದಾರೆ. ಅಂದರೆ 21 ಬಿಲಿಯನ್ ಡಾಲರ್ (ಸುಮಾರು 1.72 ಲಕ್ಷ ಕೋಟಿ ರುಪಾಯಿ) ಹಣ ಕಳೆದುಕೊಂಡಿದ್ದಾರೆ. ಆದರೆ, ವಿಶ್ವ ಶ್ರೀಮಂತರಲ್ಲಿ ಅವರ ಸ್ಥಾನ ಟಾಪ್-10ಗಿಂತ ಕೆಳಗೆ ಇಳಿದಿಲ್ಲ. 2023ರ M3M Hurun’s Global Rich List ಪ್ರಕಾರ ಮುಕೇಶ್ ಅಂಬಾನಿ ವಿಶ್ವದ 9ನೇ ಅತಿ ಶ್ರೀಮಂತ ಎನಿಸಿದ್ದಾರೆ. 21 ಬಿಲಿಯನ್ ಡಾಲರ್ ಸಂಪತ್ತು ಕರಗಿದರೂ ಅಂಬಾನಿ ಬಳಿ 82 ಬಿಲಿಯನ್ ಡಾಲರ್ (6.74 ಲಕ್ಷ ಕೋಟಿ ರುಪಾಯಿ) ಮೊತ್ತದಷ್ಟು ಆಸ್ತಿ ಇದೆ ಎನ್ನಲಾಗಿದೆ.
ಕುತೂಹಲವೆಂದರೆ ಮುಕೇಶ್ ಅಂಬಾನಿ ಹಲವು ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎನಿಸಿರುವುದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಏಷ್ಯಾದ ಅತೀ ಶ್ರೀಮಂತ ಎನ್ನುವ ಪಟ್ಟ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ.
ಒಂದು ಹಂತದಲ್ಲಿ ಗೌತಮ್ ಅದಾನಿ ಫೀನಿಕ್ಸ್ನಂತೆ ಮೇಲೆದ್ದು ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ ವಿಶ್ವದ ಟಾಪ್-3 ಶ್ರೀಮಂತರಲ್ಲಿ ಒಬ್ಬರೆನಿಸಿದ್ದರು. ಈ ಜನವರಿ ತಿಂಗಳಲ್ಲಿ ಹಿಂಡನಬರ್ಗ್ ರಿಸರ್ಚ್ ವರದಿ ಬಂದ ಬಳಿಕ ಅದಾನಿಗೆ ಭಾರೀ ಆಘಾತ ಕೊಟ್ಟಿದೆ. ಶೇ. 35ರಷ್ಟು ಆಸ್ತಿ ಕಳೆದುಕೊಂಡಿರುವ ಗೌತಮ್ ಅದಾನಿಯ ಸಂಪತ್ತು ಈಗ 53 ಬಿಲಿಯನ್ ಡಾಲರ್ (4.36 ಲಕ್ಷ ಕೋಟಿ ರುಪಾಯಿ) ಆಗಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅದಾನಿ ಈಗ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ವರ್ಷ ಗೌತಮ್ ಅದಾನಿ ಸರಾಸರಿಯಾಗಿ ಒಂದು ದಿನಕ್ಕೆ 1,600 ಕೋಟಿ ರುಪಾಯಿಯಂತೆ ಸಂಪತ್ತು ಶೇಖರಿಸುತ್ತಾ ಹೋಗಿದ್ದರು. ದಿನಸಿ ವಸ್ತುಗಳಿಂದ ಹಿಡಿದು ಸಿಮೆಂಟ್, ಏರ್ಪೋರ್ಟ್, ಸೀ ಪೋರ್ಟ್, ಗಣಿಗಾರಿಕೆ ಹೀಗೆ ನಾನಾ ಉದ್ಯಮಗಳಿಗೆ ಗೌತಮ್ ಅದಾನಿ ವ್ಯವಹಾರ ವಿಸ್ತರಣೆಯಾಗಿತ್ತು. ಅತಿವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದ ಗೌತಮ್ ಅದಾನಿಗೆ ಹಿನ್ನಡೆ ತಂದಿದ್ದು ಹಿಂಡನ್ಬರ್ಗ್ ರಿಸರ್ಚ್ ರಿಪೋರ್ಟ್. ಈ ಬೆಳವಣಿಗೆ ಆದ ಬಳಿಕ ಅವರ ಗ್ರೂಪ್ನ ಸ್ಟಾಕ್ ಮಾರ್ಕೆಟ್ ಆಸ್ತಿ ಶೇ. 60ರಷ್ಟು ಕುಸಿದಿದೆ. ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಸತತವಾಗಿ ಕುಸಿದಿವೆ.
ಎಂ3ಎಂ ಹುರುನ್ಸ್ ವಿಶ್ವ ಶ್ರೀಮಂತರಲ್ಲಿ ಬೇರೆ ಭಾರತೀಯರು
ವಿಶ್ವದ 50 ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗೆ ಇನ್ನೂ ಇಬ್ಬರು ಭಾರತೀಯ ಉದ್ಯಮಿಗಳಿದ್ದಾರೆ. ಸೈರಸ್ ಪೂನಾವಾಲಾ ಮತ್ತು ಶಿವ್ ನಾದರ್ ಅವರು ಕ್ರಮವಾಗಿ 46 ಮತ್ತು 50ನೇ ಸ್ಥಾನದಲ್ಲಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಮೊದಲಾದ ಸಂಸ್ಥೆಗಳ ಒಡೆಯ ಸೈರಸ್ ಪೂನಾವಾಲ ಬಳಿ 27 ಬಿಲಿಯನ್ ಡಾಲರ್ (ಸುಮಾರು 2.22 ಲಕ್ಷ ಕೋಟಿ ರುಪಾಯಿ) ಆಸ್ತಿ ಇದೆ. ಇನ್ನು, ಐಟಿ ಕಂಪನಿ ಎಚ್ಸಿಎಲ್ ಟೆಕ್ನಾಲಜೀಸ್ ಸ್ಥಾಪಕ ಶಿವ್ ನಾದರ್ ಆಸ್ತಿ 26 ಬಿಲಿಯನ್ ಡಾಲರ್ (2.13 ಲಕ್ಷ ಕೊಟಿ ರುಪಾಯಿ) ಇದೆ.
ಇಲ್ಲಿ ಕುತೂಹಲದ ಸಂಗತಿ ಎಂದರೆ ವಿಶ್ವದ 100 ಅತೀ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಉದ್ಯಮಿಗಳ ಪೈಕಿ ಸೈರಸ್ ಪೂನಾವಾಲ ಮಾತ್ರವೇ ಆಸ್ತಿ ಹೆಚ್ಚಿಸಿಕೊಂಡಿರುವುದು.
ಒಂದು ವರ್ಷದಲ್ಲಿ ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡ 41 ಭಾರತೀಯರು
M3M Hurun Global Rich List ಪ್ರಕಾರ ಒಂದು ವರ್ಷದಲ್ಲಿ 1 ಬಿಲಿಯನ್ ಡಾಲರ್ಗೂ ಅಧಿಕ ಸಂಪತ್ತು ಕಳೆದುಕೊಂಡ ಸಿರಿವಂತರು ಬಹಳ ಮಂದಿ ಇದ್ದಾರೆ. ಚೀನಾದ 178, ಅಮೆರಿಕದ 123 ಮಂದಿ 1 ಬಿಲಿಯನ್ ಡಾಲರ್ ಮೊತ್ತದಷ್ಟು ಸಂಪತ್ತನ್ನು ಒಂದು ವರ್ಷದಲ್ಲಿ ಕಳೆದುಕೊಂಡಿದ್ದಾರೆ. ಭಾರತದ 41 ಮಂದಿ ಶ್ರೀಮಂತರೂ ಈ ಪಟ್ಟಿಯಲ್ಲಿದ್ದಾರೆ.
ಇನ್ನು, ಒಂದು ವರ್ಷದಲ್ಲಿ 1 ಬಿಲಿಯನ್ ಡಾಲರ್ಗೂ ಹೆಚ್ಚು ಸಂಪತ್ತು ಸಂಪಾದನೆ ಮಾಡಿದವರ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಹೊಸ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲೂ ಭಾರತೀಯರು ಮುಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ 16 ಭಾರತೀಯರು ಹೊಸದಾಗಿ ಬಿಲಿಯನೇರ್ಗಳಾಗಿದ್ದಾರೆ. ರಾಕೇಶ್ ಝುಂಝುನವಾಲ ಅವರ ಕುಟುಂಬದವರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಹಾಂಕಾಂಗ್ ಜಿಡಿಪಿಗೆ ಸಮವಾದ ಭಾರತೀಯ ಶ್ರೀಮಂತರ ಸಂಪಾದನೆ
ಎಂ3ಎಂ ಹುರುನ್ ಗ್ಲೋಬರ್ ರಿಚ್ ಲಿಸ್ಟ್ ಪ್ರಕಾರ ಕಳೆದ 5 ವರ್ಷದಲ್ಲಿ ಭಾರತೀಯ ಶತಕೋಟ್ಯಾಧಿಪತಿಗಳ ಸಂಪತ್ತು 360 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. ಅಂದರೆ ಸುಮಾರು 30 ಲಕ್ಷ ಕೋಟಿ ರುಪಾಯಿಯಷ್ಟು ಸಂಪತ್ತನ್ನು ಭಾರತೀಯ ಶ್ರೀಮಂತರು ಹೆಚ್ಚಿಸಿಕೊಂಡಿದ್ದಾರೆ. ಇದು ಹಾಂಕಾಂಗ್ನಂತಹ ಸಿರಿವಂತ ನಾಡಿನ ಜಿಡಿಪಿಗೆ ಸಮವಾಗಿದೆ.