ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್(82) ಸೋಮವಾರ ವಿಧಿವಶರಾದರು. ಅವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ಕೆಲವು ದಿನಗಳಿಂದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ ಜೀವರಕ್ಷಕ ಔಷಧಿಗಳನ್ನು ನೀಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಂಜೀವ್ ಗುಪ್ತ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮುಲಾಯಂ ಸಿಂಗ್ ಯಾದವ್ ಆಗ್ರಾ ವಿಶ್ವವಿದ್ಯಾಲಯದಿಂದ ಪೊಲಿಟಿಕಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 15ನೇ ವಯಸ್ಸಿನಲ್ಲಿಯೇ ರಾಜಕೀಯದ ಸಂಪರ್ಕ ಪಡೆದ ಅವರು, ರಾಮ್ ಮನೋಹರ್ ಲೋಹಿಯಾ ಪ್ರಭಾವಕ್ಕೆ ಒಳಗಾದರು.1939, ನವೆಂಬರ್ 22ರಂದು ಜನಿಸಿದ ಮುಲಾಯಂ ಸಿಂಗ್ ಯಾದವ್ 1967 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.1974 ರಲ್ಲಿ ಮರು ಆಯ್ಕೆಯಾದರು. ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಬಂಧನಕ್ಕೊಳಗಾದರು. 1977ರಲ್ಲಿ ಬಿಡುಗಡೆಗೊಂಡ ಬಳಿಕ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು. 1989-91, 1993-95 ಮತ್ತು 2003-07ರ ತನಕ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು.