ಬೈನೆ ಮರ(Fish Tail Palm) ಅದರ ಉಪಯೋಗ ಬಹಳಷ್ಟಿದೆ. ಶೇಂದಿ(Toddy) ಎನ್ನುವ ಪಾನೀಯವನ್ನು ಈ ಮರದಿಂದಲೇ(Tree) ಪಡೆಯುವುದು. ತುಳು ಭಾಷಿಕರು(Tuluvas) ಅದನ್ನು ಕಳಿ ಎಂದು ಹೆಸರಿಸಿದ್ದಾರೆ. ಕಳಿಯನ್ನು ಅಥವಾ ಶೇಂದಿಯನ್ನು ಸಂಗ್ರಹಿಸುವುದು ಅಷ್ಟು ಸಲೀಸಾದ ಕಸುಬಲ್ಲ(Work). ಅದೊಂದು ಬಹಳ ತಾಳ್ಮೆ ಮತ್ತು ಶ್ರದ್ದೆಯ ಕೆಲಸ.
ಇತರ ಸಮುದಾಯದಾವರಿಗೆ ಅದರ ಗುಟ್ಟು ಕಲಿಸಿದರೂ ಮರವೇರುವುದಕ್ಕೆ, ಅಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಎಳ್ಳಿನ ಒಂದು ಭಾಗದಷ್ಟು ಧೈರ್ಯ ಬರುವುದಿಲ್ಲ. ಆ ಧೈರ್ಯ ಅದು ಒಂದೇ ಜಾತಿಗೆ, ಬಿಲ್ಲವರಿಗೆ (ಪೂಜಾರಿ, ಬೈದ) ಕೋಟೀ ಚೆನ್ನಯ್ಯ ಕತೆಯಲ್ಲಿ ಬರುವ ಮೂರ್ತೆದಾರ ಪಾಯ ಬೈದ ಕೂಡ ಬಿಲ್ಲವನಾಗಿರುತ್ತಾನೆ. ಬಿಲ್ಲವರಿಗೆ ಮೂರ್ತೆ ಕೆಲಸಕ್ಕೆ ಪ್ರೇರಣೆ ಅದು ಅವರಿಗೆ ದೊರಕಿದ ದೇವರ ವರ ಎನ್ನಲಾಗುತ್ತದೆ. ಬೈನೆ ಮರದಲ್ಲಿ ಹೂವು ಬಂದಾಗ ಅದರ ಬುಡಕ್ಕೆ ಹದ ಮಾಡುವುದಕ್ಕುಂಟು. ತುಳು ಭಾಷಿಕರು ಆ ಹೂವನ್ನು ಕೊಂಬು ಎನ್ನುತ್ತಾರೆ. ಅದು ಅರಳುವುದಕ್ಕೆ ಮುನ್ನ ಅದರ ಮೊಗ್ಗು ದಪ್ಪವಾದ ಹೊದಿಕೆಯಿದ್ದು ಕೊಂಬಿನಾಕೃತಿಯಲ್ಲಿರುತ್ತದೆ. ಹೂವರಳುವುದಕ್ಕೆ ತುಂಬಾ ದಿನಗಳು ಹಿಡಿಯುತ್ತದೆ.
ಮರಕ್ಕೆ ಇಂತಿಷ್ಟ ವಯಸ್ಸಾಗಿರಬೇಕು, ಆ ಮರದ ಕೊಂಬಿನಿಂದ ಮಾತ್ರ ಶೇಂದಿ ಪಡೆಯಲಿಕ್ಕೆ ಸಾಧ್ಯ ಇತ್ಯಾದಿ ಮಾಹಿತಿ ಆ ಕೆಲಸ ನಿರ್ವಹಿಸುವವರಿಗೆ ಮಾತ್ರ ಗೊತ್ತಿರುತ್ತದೆ. ಆ ಕೊಂಬಿನ ಬುಡದ ದಿಂಡನ್ನು ಕೆಲವು ಗಿಡಮೂಲಿಕೆಗಳ ಬಳಕೆಯಿಂದ ಹಣ್ಣಾಗಿಸುತ್ತಾರೆ. ಆ ಕೆಲಸಕ್ಕೆ ಎರಡು ಮೂರು ವಾರ ಬೇಕು. ಹಾಗೆನೆ ಅದರ ಹೂವಿನ ಜಡೆಯನ್ನು ಕೂಡಾ ನೇವರಿಸಿ ತಿಕ್ಕವುದಕ್ಕಿದೆ. ತನ್ನ ಅಂಗೈಯಲ್ಲೇ ಬಿರುಸಾಗಿರುವ ಆ ಜಡೆೆಯನ್ನು ತಿಕ್ಕಿ ನೇವರಿಸಬೇಕು, ಕೈ ಕೆಂಪಾಗುವುದು ದಡ್ಡುಗಟ್ಟುವುದು ಸಹಜ. ಅಂಗೈಯಲ್ಲೆ ಜಾಸ್ತಿ ಕೆಲಸ ಮಾಡುತ್ತಿದ್ದರೆ ಮೃದುತ್ವ ಮಾಯವಾಗಿ ಅಂಗೈ ಮರಗಟ್ಟುತ್ತದೆ. ಸೂಜಿ ಚುಚ್ಚಿದರೂ ಅದರ ಮೊನೆಯೇ ಮೊಟಕಾಗುವಷ್ಟು. ಅದಕ್ಕೆ ದಡ್ಡುಗಟ್ಟುವುದು ಎಂದು ತುಳುವಿನಲ್ಲಿ ಹೇಳುವುದು. ಕನ್ನಡ ಉಪಭಾಷೆಯಲ್ಲಿಯೂ ಹಾಗೇ ಹೇಳುವುದುಂಟು.
ಹಾಗೆ ನೇವರಿಸಿ ಮೃದು ಮಾಡಿದ ಹೂವಿನ ಜಡೆಗೆ ತೆಳುವಾದ ಗೋಣಿ ಬಟ್ಟೆಯನ್ನು ಸುತ್ತಿ ಬಿಡುತ್ತಾರೆ, ಮೇಲೆ ಬುಡದಿಂದ ಜಡೆಯ ಕೆಳ ತುದಿವರೆಗೆ, ಬೆಳಿಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಆ ನೇವರಿಸಿ, ಬುಡ ಹದ ಮಾಡುವುದು ಕಡ್ಡಾಯ. ಅದರ ಹೂವಿನ ಜಡೆಗೆ ಗೋಣಿ ಬಟ್ಟೆಯನ್ನು ಚೆನ್ನಾಗಿ ಸುತ್ತಿ ಮುಚ್ಚುವುದೇಕೆಂದರೆ ಆ ಜಡೆ ಸಂಪೂರ್ಣ ಮೆದುವಾಗಿ ಹದವಾಗುವುದಕ್ಕೆ. ಶೇಂದಿ ದ್ರವ ಇಳಿಯುವುದೇ ಆ ಜಡೆಯಲ್ಲಿ. ಇಂತಿಷ್ಟು ದಿನಗಳ ಹದಗಾರಿಕೆಯ ನಂತರ ಜಡೆಯ ಕೆಳ ತುದಿಗೆ ಮಣ್ಣಿನ ಮಡಕೆ ಕಟ್ಟುವುದಕ್ಕಾಗಿ ಕೌಶಲ್ಯ ಮಾಡುತ್ತಾರೆ. ಹಾಗೆ ಒಂದು ಮಡಕೆಯ ಬಾಯಿಯನ್ನು ಜಡೆಯ ತುದಿ ಮಾತ್ರಕ್ಕಷ್ಟೆ ತಾಗಿಸಿ ಮುಚ್ಚುತ್ತಾರೆ.
ಹಾಗೆ ಮುಚ್ಚುವಾಗ ಜಡೆಯ ತುದಿಯನ್ನು ಬಾರೀ ತೆಳುವಾಗಿ ಹೆರೆಯುತ್ತಾರೆ.ಹಾಗೆ ಹೊರೆದ ಕೂಡಲೆ ಮೊದಲೆ ಒಣಗಿದ್ದ ತುದಿ ಮತ್ತೆ ಹಸಿಯಾಗುತ್ತದೆ. ಹಾಗಾದರೆನೆ ತೊಟ್ಟು ತೊಟ್ಟಾಗಿ ಶೇಂಗಿ ಇಳಿದು ಮಡಕೆಯ ತಳ ಸೇರಿ ತುಂಬುತ್ತಿರುತ್ತದೆ. ದಿನಾಲು ಬೆಳಿಗ್ಗೆ ಮತ್ತು ಸಂಜೆ ಆ ಮಡಕೆಯಲ್ಲಿ ಸಂಗ್ರಹವಾಗಿದ್ದ ಕಲಿಯನ್ನು ಬೇರೆ ಮಡಕೆಗೆ ಬಗ್ಗಿಸಿ ತೆಗೆಯುವುದಕ್ಕುಂಟು. ಪ್ರತಿ ಸಲವೂ ಜಡೆಯ ತುದಿಯನ್ನು ತೆಳೂವಾಗಿ ಹೆರೆಯಲಿಕ್ಕುಂಟು. ರಾತ್ರಿಯ ತಂಪಿನಲ್ಲಿ ಮಡಕೆಗೆ ಇಳಿದ ಶೇಂದಿ ಬಹಳ ಸಿಹಿ ಇರುವುದು. ಹಗಲು ಬಿಸಿಲಿನ ವೇಳೆ ಇಳಿದ ಕಲಿ ಸ್ವಲ್ಪ ಹುಳಿಯಾಗಿರುವುದು ಅಂತ ಅದರ ರುಚಿಯ ಬಗ್ಗೆ ಶೇಂದಿ ಪ್ರಿಯರು ಹೇಳುವ ಸತ್ಯ. ಸಂಜೆಯ ಶೇಂದಿಗೆ ಇರುವಷ್ಟು ಅಮಲು ಬೆಳಗ್ಗಿನದಕ್ಕೆ ಇರುವುದಿಲ್ಲವಾದ ಕಾರಣ ಇಷ್ಟಪಡುವ ಮಹಿಳೆಯರು ಹೆಚ್ಚಾಗಿ ಬೆಳಗಿನ ಕಲಿಗೆ ಇಷ್ಟ ಪಡುವುದು!
ಈ ಬೈನೆ ಮರದ ಜಡೆಯನ್ನು ಬೇಲಿ ಕಟ್ಟುವುದಕ್ಕೆ, ಮುಳಿ ಹುಲ್ಲು ಮಾಡಿನ ಎಳೆ ಕಟ್ಟುವುದಕ್ಕೆ, ಅಕ್ಕಿ ಮುಡಿ, ಬೀಜದ ಭತ್ತದ ಮುಡಿ ಕಟ್ಟುವುದಕ್ಕೆ ಬಳಸುತ್ತಿದ್ದರು. ಈಗ ಹಳ್ಳಿಯಲ್ಲೂ ಕೂಡ ಪ್ಲಾಸ್ಟಿಕ್, ನೈಲಾನ್ ನೂಲುಗಳೇ ಬಳಕೆಯಾಗುತ್ತಿರುವುದು ಬೇರೆ ವಿಚಾರ. ಆ ಜಡೆಯ ಕಾಯಿಯು ಸಹ ತುಂಬಾ ತರಿಕೆ ಕೊಡುವಂಥದ್ದು. ಅದು ಹಣ್ಣಾದಾಗ ಮಂಗಗಳು, ದೊಡ್ಡ ಜಾತಿಯ ಹಕ್ಕಿಗಳು, ಬೆರು ಎನ್ನುವ ಒಂದು ಜಾತಿಯ ಪ್ರಾಣಿ ಅದನ್ನು ತಿನ್ನುತ್ತವೆ. ಬೆರು ಅನ್ನುವ ಪ್ರಾಣಿಗೆ ಬೈನೆ ಮರದ ಹಣ್ಣೇ ಭಾರೀ ಇಷ್ಟ. ಅದನ್ನು ಬೇಟೆಯಾಡಿ ಮಾಂಸ ಸೇವಿಸುತ್ತಾರೆ. ಅದು ನಿರುಪದ್ರ ಜೀವಿ. ಅದರ ದೇಹಾಕಾರವು ಉಡದ ಹಾಗೆಯೆ ತೋರುವುದು.
ಇನ್ನು, ಈ ಜಡೆಯ ಕಾಯಿಗಳನ್ನು, ಜಜ್ಜಿ ಬೇರೆ ಮನೆಯವರ ಸ್ನಾನದ ನೀರಿನ ಹಂಡೆಗೆ ಹಾಕುವ ಕ್ರೂರಿಗಳುದ್ದಾರೆ. ಸ್ನಾ ಮಾಡಿದ ನಂತರ ಮೈ ತುರಿಸುವ ಸಂಕಟ ವೇದನೆ ಅಂತಿಂಥದ್ದಲ್ಲ. ಹಿಂದೆಲ್ಲ ಹಳ್ಳಿಯಲ್ಲಿ ಮನೆಯಾಕೆಯ ಮೇಲೆ, ಯುವತಿಯ ಮೇಲೆ ಸೇಡು ತೀರಿಸಿಕೊಳ್ಳುವ ಕ್ರೂರಿಗಳು ಈ ಕೆಲಸ ಮಾಡಿ ಖುಷಿ ಪಡುತ್ತಿದ್ದರು. ಆಗೆಲ್ಲ ಸ್ನಾನದ ಬಚ್ಚಲು ಕೋಣೆ ಅಷ್ಟು ಭದ್ರವಾಗಿರುತ್ತಿದ್ದಿಲ್ಲ, ಮನೆ ಬದಿಯ ಗದ್ದೆಯಲ್ಲಿಯೂ ಒಲೆ ಮಾಡಿ ಗುಡಾಣ ಇಟ್ಟು ನೀರು ಕಾಯಿಸಿ ಸ್ನಾನ ಮಾಡುವುದಿತ್ತು.
ಬೈನೆ ಮರ ತುಂಬಾ ವರ್ಷ ಚೆನ್ನಾಗಿ ಬೆಳೆದ ನಂತರ ಅದನ್ನು ಕಡಿದು ಅದರ ತಿರುಳನ್ನು ತೆಗೆದು ಅದರಿಂದ ಹಿಟ್ಟು ಸಂಗ್ರಹ ಮಾಡುತ್ತಾರೆ. ಅದಕ್ಕೆ ಈಂದು ಹಿಟ್ಟು ಎನ್ನುತ್ತಾರೆ. ಆರಾರೂಟ್ ಹಿಟ್ಟಿನ ಹಾಗೆಯೆ ಇದು ಕೂಡಾ. ಆರಾರರೂಟಿನ ಬಳಕೆಯಂತೆ ಇದು ಕೂಡಾ. ಈಂದಿನ ಪುಡಿಗೆ ಬಾರೀ ಕ್ರಯ ಇರುವುದರಿಂದ ಅದಕ್ಕೆ ಆರಾರೂಟಿನ ಕಲಬೆರಕೆ ಮಾಡಿ ಮಾರಾಟ ಮಾಡುತ್ತಾರೆ. ದೇಹದ ಉಷ್ಣತೆಯನ್ನು ಕಾಪಾಡುವುದಕ್ಕೆ, ಸಮತೋಲನಗೊಳಿಸುವುದಕ್ಕೆ ಅದರ ಪಾನಕವನ್ನು ಮಾಡಿ ಸೇವಿಸುವುದು ಹಳ್ಳಿ ಔಷಧ. ಬೇಧಿಗೆ ಬಹಳ ಅತ್ಯುತ್ತಮ ಮದ್ದು. ಅದನ್ನು ಚೆನ್ನಾಗಿ ಕುದಿಸಿ ಬೇಯಿಸಿ ಕುಡಿದರೆ ಬೇರೆ ಔಷಧಿ ಬೇಡ. ಅದರ ಹಾಲು ಬಾಯಿ ಮಾಡುತ್ತಾರೆ, ತುಂಬಾ ರುಚಿಯಾಗುತ್ತದೆ. ಬೈನೆ (ಈಂದ್ ಪುಡಿ) ಈಗ ಮುಂಬೈ, ದುಬಾಯಿ ಮಾರ್ಕೇಟಲ್ಲೂ ದೊರೆಯುತ್ತದೆ. ಅಷ್ಟೇ ಬೇಡಿಕೆಯಿದೆ; ಕಲಬೆರಕೆದ್ದೇ ಭಯ!
ಅದು ದುಬಾರಿ ಎಂದು ಹೇಳುವುದಕ್ಕೆ ಸುಲಭ. ಆದರೆ ಅದನ್ನು ತಯಾರಿಸುವ ಕೆಲಸ ಮಾತ್ರ ಅಯ್ಯೋ ರಾಮ! ಮರದ ತಿರುಳನ್ನು ಒಣಕೆಯಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು.ಆ ಪುಡಿಯನ್ನು ನೀರಲ್ಲಿ ನೆನೆಸಿಟ್ಟು ನಂತರ ಅದನ್ನು ಬೇರೊಂದು ಪಾತ್ರೆಗೆ ತೆಳುವಾದ ಬಟ್ಟೆ ಮೂಲಕ ಸೋಸಬೇಕು. ಅದೇನು ಚಹಾ ಸೋಸುವ ಹಾಗೆ ಸುಲಭವಲ್ಲ. ಹಾಗೆ ಸೋಸಿದ್ದನ್ನು ದಿನಗಳವರೆಗೆ ತಣಿಯಲು ಇಟ್ಟಾಗ ಪಾತ್ರೆಯ ತಳಭಾಗದಲ್ಲಿ ಬಿಳಿ ಪುಡಿ ಸಂಗ್ರಹವಾಗಿರುತ್ತದೆ. ಆ ಮೇಲ್ನೀರನ್ನು ನಿಧಾನಕ್ಕೆ ಖಾಲಿ ಮಾಡಿ ಪೌಡರನ್ನು ತೆಗೆದು ಅದರ ತೇವಾಂಶವನ್ನು ಆವಿ ಮಾಡುವುದಕ್ಕಾಗಿ ಬಿಸಿಲಿಗೆ ಇಡಬೇಕು.
ಬೈನೆ ಮರದ ತಿರುಳು ತೆಗೆದ ನಂತರ ಆ ಮರದ ಕಾಂಡದ ಬೆನ್ನು ತೊಗಟೆ ಭಾಗ. ಅದರ ಒಳ ಭಾಗವನ್ನು ಚೆನ್ನಾಗಿ ಸಪಾಯಿ ಮಾಡಿದರೆ ಅದು ಹದಿನೈದು ಮೂವತ್ತು ಇಂಚು ವ್ಯಾಸದ ಕೊಳವೆಯನ್ನು ಸರೀ ಭಾಗವಾಗಿ ಸಿಗಿದಂತೆಯೆ! ಅದರನ್ನು ನೀರು ಹರಿಸುವುದಕ್ಕೆ ಬಳಸಲಾಗುತ್ತದೆ. ಮನೆಯ ಮಾಡು ಎ ಆಕಾರವಾಗಿದ್ದಾಗ ನಡುವೆ ನೀರು ಹರಿಯುವುದಕ್ಕೆ ಇದೇ ಮರದ ದಂಬೆಯನ್ನು ಉಪಯೋಗಿಸುವುದು. ಮನೆ ಮಾಡಿಗೆ ಅಡ್ಡ ಅಥವಾ ತಿರುಗಿ ಮುಂದುವರಿಯುವುದಿದ್ದಲ್ಲಿಯೂ ಅಲ್ಲಿ ಸೊಂಪು ಹಂಚಿನ ಬದಲು ಈ ದಂಬೆ ಬಳಸಲಾಗುತ್ತಿತ್ತು. ಈಗ ಎಲ್ಲವೂ ಕಂಪನಿಗಳ ಉತ್ಪನ್ನವೇ ಮನೆಮಾಡಿಕೊಂಡಿದೆ ಬಿಡಿ.
ಬೈನೆ ಮರದ ಸೊಪ್ಪು ಆನೆಗೆ ಬಲು ಇಷ್ಟ, ಹಿಂದೆ ಎಲ್ಲ ಹಳ್ಳಿ ಮಾರ್ಗದಲ್ಲಿ ಸಾಕಿದ ಆನೆ ಬರುವುದಕ್ಕಿದೆ ಎಂದಾಗುವಾಗ ಬೈನೆ ಮರದ ಸೊಪ್ಪನ್ನು ಸಂಗ್ರಹಿಸಿ ಕೊಡುವುದಿತ್ತು. ರಸ್ತೆ ಬದಿಯಲ್ಲಿ ಕಂಬಗಳನ್ನು ನೆಟ್ಟು ಬಣ್ಣದ ಕಾಗದದ ಅಲಂಕಾರ ಕಟ್ಟುವಾಗಲೂ ಬೈನೆ ಸೊಪ್ಪನ್ನು ಕಟ್ಟುತ್ತಾರೆ. ಪೂಜಾ ಕಾರ್ಯಕ್ರಮ,ಇನ್ನಿತರ ಕಾರ್ಯಕ್ರಮಕ್ಕಾಗಿ ಚಪ್ಪರ ಮತ್ತು ಸುತ್ತಲೂ ಮುಚ್ಚುವುದಕ್ಕೆ ತೆಂಗಿನ ಗರಿಗಳ ಬದಲಿಗೆ ಇದನ್ನೇ ಜಾಸ್ತಿ ಬಳಸುತ್ತಾರೆ. ಅದರ ಕಾರಣವೆಂದರೆ ದನ ಕರು ಜಾನುವಾರುಗಳು ಈ ಬೈನೆ ಸೊಪ್ಪನ್ನು ತಿನ್ನುವುದಿಲ್ಲ, ತೆಂಗಿನ ಮಡಲಿನ ಗರಿ, ತಟ್ಟಿ ಕಟ್ಟಿದರೆ ಜಾನುವಾರುಗಳು ಎಳೆದು ತಿಂದು ಹಾಳು ಮಾಡುತ್ತವೆ.
ಬೈನೆ ಮರದ ಗಿಡಗಳು ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುತ್ತವೆ. ಈಗ ಶೇಂದಿ ತೆಗೆಯುವವರ ಸಂಖ್ಯೆಯೇ ಬಹಳ ಇಳಿಮುಖವಾಗಿರುವುದರಿಂದಾಗಿ ಬೈನೆ ಮರ ಬೆಳೆಸುವುದು ಬಹಳ ಕಡಿಮೆ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…