ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಕಡಿಮೆಯಾಗಿರುವ ಕಾರಣದಿಂದ ಮಿಜೋರಾಂ ಅಡಿಕೆ ರೈತರಿಗೆ ಸದ್ಯ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಕಳ್ಳಸಾಗಾಣಿಕೆ ಕಡಿಮೆಯಾಗಿರುವ ಕಾರಣದಿಂದ ರಾಜ್ಯದಲ್ಲೂ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ.
ಈ ವರ್ಷದ ಆರಂಭದಿಂದಲೇ ಮಿಜೋರಾಂ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಈ ವರ್ಷ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆದಿದ್ದಾರೆ. ಈ ವರ್ಷ ರೈತರು ಸುಮಾರು 50 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಕೊಯ್ಲು ಮಾಡಿದ್ದಾರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಲೆಗಳೂ ಉತ್ತಮವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಮಿಜೋರಾಂನ ಹಚ್ಚೇಕ್ ಪ್ರದೇಶದ ಸುಮಾರು 32 ಹಳ್ಳಿಗಳಲ್ಲಿ ಸುಮಾರು 30 ಹಳ್ಳಿಗಳಲ್ಲಿ ಅಡಿಕೆ ಬೆಳೆಯುತ್ತವೆ.
ತ್ರಿಪುರ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಮಾಮಿತ್ ಜಿಲ್ಲೆಯ ಹಚೇಕ್ ಪ್ರದೇಶದ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ವಿಕ್ಟರ್ ಎಂ.ಎಸ್. ಡಾಂಗ್ಲಿಯಾನ ಅವರ ಪ್ರಕಾರ, ಈ ವರ್ಷ ಈ ಪ್ರದೇಶದ ರೈತರಿಗೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ತಮ ಬೆಲೆಗಳು ಲಭ್ಯವಾಗಿದೆ. ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಕಡಿಮೆಯಾದ ಕಾರಣ ಸ್ಥಳೀಯವಾಗಿ ಉತ್ಪಾದಿಸುವ ಅಡಿಕೆ ಉತ್ತಮ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಅಡಿಕೆ ಕಳ್ಳಸಾಗಣೆ ವ್ಯಾಪಕವಾಗಿದ್ದ ಕಾಲದಲ್ಲಿ ಪ್ರತಿ ಚೀಲಕ್ಕೆ 1,200 ರಿಂದ 1,500 ರೂ.ವರೆಗೆ ಮಾರಾಟವಾಗುತ್ತಿದ್ದ ಅಡಿಕೆ ಈಗ ಪ್ರತಿ ಚೀಲಕ್ಕೆ 2,500 ರಿಂದ 3,000 ರೂ.ವರೆಗೆ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಡಿಕೆ ಕಳ್ಳಸಾಗಾಣಿಕೆ ತಡೆಯಾದಂತೆಯೇ ರಾಜ್ಯದಲ್ಲೂ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಈ ಬಾರಿ ಅಡಿಕೆಯ ಕೊರತೆಯೂ ಇರುವುದರಿಂದ ಹೊಸ ಅಡಿಕೆ ಧಾರಣೆ ಕೂಡಾ ಏರಿಕೆ ಸಾಧ್ಯತೆ ಇದೆ. ಕಳೆದ ವರ್ಷ ಮಾರ್ಚ್ ಬಳಿಕ ಹೊಸ ಅಡಿಕೆ ಧಾರಣೆ 450 ರೂಪಾಯಿ ತಲುಪಿದ್ದರೆ, ಈ ಬಾರಿ ಜನವರಿ ಅಂತ್ಯ-ಫೆಬ್ರವರಿಯ ಹೊತ್ತಿಗೆ 450 ರೂಪಾಯಿ ತಲಪುವ ನಿರೀಕ್ಷೆ ಇದೆ. ಹಳೆ ಅಡಿಕೆ ಧಾರಣೆ ಈಗಾಗಲೇ 500 ರೂಪಾಯಿ ದಾಟಿರುವುದರಿಂದ ಮುಂದೆ ಗಣನೀಯವಾಗಿ ಧಾರಣೆ ಏರಿಕೆಯ ನಿರೀಕ್ಷೆಯನ್ನು ಬೆಳೆಗಾರರು ಇಲ್ಲಿ ಇರಿಸಿಕೊಳ್ಳಬೇಕಾಗಿಲ್ಲ.


