ಭಾರತದ ಅಡಿಕೆ ಮಾರುಕಟ್ಟೆಗೆ ವಿದೇಶಿ ಅಡಿಕೆ ಅಕ್ರಮವಾಗಿ ಪ್ರವೇಶಿಸುತ್ತಿರುವುದರ ಹಿಂದೆ ಬೃಹತ್ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆಹಚ್ಚಿದೆ. ಮ್ಯಾನ್ಮಾರ್ನಿಂದ ಮಿಜೋರಾಂ ಮೂಲಕ ಭಾರತಕ್ಕೆ ಅಡಿಕೆ ಕಳ್ಳಸಾಗಣೆ ಮಾಡಿ, ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗಳಿಗೆ ಪೂರೈಸುತ್ತಿದ್ದ ಸುಮಾರು ₹1,000 ಕೋಟಿ ಮೌಲ್ಯದ ಜಾಲವನ್ನು ಬಹಿರಂಗವಾಗಿದೆ.
ಜಾಗರಣ್ ವರದಿಯ ಪ್ರಕಾರ, ಕಳೆದ ಆರು ತಿಂಗಳಲ್ಲಿ ನಾಲ್ಕು ಹಂತಗಳಲ್ಲಿ ಮಿಜೋರಾಂ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ 55 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಡಿಕೆ ಕಳ್ಳಸಾಗಣೆಯ ಸಂಪೂರ್ಣ ಜಾಲದ ಹಲವು ಪ್ರಮುಖ ಕೊಂಡಿಗಳು ಪತ್ತೆಯಾಗಿವೆ.
ಮ್ಯಾನ್ಮಾರ್ನಿಂದ ಭಾರತದ ಮಾರುಕಟ್ಟೆಗೆ ಅಡಿಕೆ ಹೇಗೆ ಬರುತ್ತಿತ್ತು? : ಮಿಜೋರಾಂನ ಚಂಫೈ ಜಿಲ್ಲೆಯ ಜೋಖಾವ್ತಾರ್ ಪ್ರದೇಶವು ಅಡಿಕೆ ಕಳ್ಳಸಾಗಣೆಯ ಪ್ರಮುಖ ಸಾಗಣೆ ಕೇಂದ್ರವಾಗಿ ಬಳಕೆಯಾಗುತ್ತಿತ್ತು. ಮ್ಯಾನ್ಮಾರ್ ಮತ್ತು ಭಾರತದ ನಡುವಿನ ನೈಸರ್ಗಿಕ ಗಡಿಯಾಗಿರುವ ಟಿಯೌ ನದಿಯ ಮೂಲಕ ಸಣ್ಣ ದೋಣಿಗಳು ಮತ್ತು ಕೂಲಿಕಾರರ ನೆರವಿನಿಂದ ಅಡಿಕೆಯನ್ನು ಭಾರತಕ್ಕೆ ತರಲಾಗುತ್ತಿತ್ತು. ಮ್ಯಾನ್ಮಾರ್ ಮಾತ್ರವಲ್ಲದೆ ಥಾಯ್ಲೆಂಡ್ ಮತ್ತು ಇಂಡೋನೇಷ್ಯಾದಿಂದಲೂ ಅಡಿಕೆ ಪೂರೈಕೆಯಾಗುತ್ತಿತ್ತು ಎಂದು ವರದಿ ತಿಳಿಸಿದೆ.
ಮಿಜೋರಾಂನಲ್ಲಿ ಅಡಿಕೆ ಉತ್ಪಾದನೆ ಅತ್ಯಲ್ಪವಾಗಿದ್ದರೂ, ವಿದೇಶದಿಂದ ಅಕ್ರಮವಾಗಿ ತರಲಾಗುತ್ತಿದ್ದ ಅಡಿಕೆಯನ್ನು ಸ್ಥಳೀಯವಾಗಿ ಉತ್ಪಾದನೆಯಾದ ಅಡಿಕೆಯೆಂದು ದಾಖಲೆಗಳಲ್ಲಿ ತೋರಿಸಲಾಗುತ್ತಿತ್ತು. ಬಳಿಕ ನಕಲಿ ಜಿಎಸ್ಟಿ ಬಿಲ್ ಮತ್ತು ಇ-ವೇ ಬಿಲ್ಗಳ ಮೂಲಕ ಸಿಲ್ಚಾರ್ ಹಾಗೂ ಗುವಾಹಟಿಯ ಗೋದಾಮುಗಳಿಗೆ ಸಾಗಿಸಲಾಗುತ್ತಿತ್ತು.
ನಕಲಿ ಕಂಪನಿಗಳು, ದಾಖಲೆಗಳ ಮೂಲಕ ಅಕ್ರಮಕ್ಕೆ ಕಾನೂನುಬದ್ಧ ರೂಪ : ಈ ಕಳ್ಳಸಾಗಣೆ ಜಾಲದಲ್ಲಿ ವಿವಿಧ ರಾಜ್ಯಗಳಲ್ಲಿದ್ದ ವ್ಯಕ್ತಿಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ನೀಡಲಾಗಿತ್ತು. ಮಿಜೋರಾಂನಲ್ಲಿ ನಕಲಿ ಮಾಲೀಕರ ಹೆಸರಿನಲ್ಲಿ ಕಂಪನಿಗಳನ್ನು ನಡೆಸಲಾಗುತ್ತಿತ್ತು. ಅಸ್ಸಾಂನ ಸಿಲ್ಚಾರ್ನಲ್ಲಿ ಕುಳಿತು ಕಾರ್ಯಾಚರಣೆಯನ್ನು ನಿಯಂತ್ರಿಸುವವರು, ಗುವಾಹಟಿಯಲ್ಲಿ ಸಾಗಣೆ ವ್ಯವಸ್ಥೆ ನೋಡಿಕೊಳ್ಳುವವರು ಹಾಗೂ ಕೋಲ್ಕತ್ತಾದಲ್ಲಿ ನಕಲಿ ಬಿಲ್ ಸಿದ್ಧಪಡಿಸುವವರು ಈ ಜಾಲದ ಭಾಗವಾಗಿದ್ದರು.
ತನಿಖಾ ಸಂಸ್ಥೆಗಳ ಗಮನಕ್ಕೆ ಬಾರದಂತೆ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಹಳೆಯ ಕಂಪನಿಗಳನ್ನು ಮುಚ್ಚಿ ಹೊಸ ಕಂಪನಿಗಳನ್ನು ಆರಂಭಿಸಲಾಗುತ್ತಿತ್ತು. ಆದರೆ ಮೊಬೈಲ್ ಫೋನ್, ಪ್ಯಾನ್ ಕಾರ್ಡ್ ಹಾಗೂ ಇತರ ದಾಖಲೆಗಳ ಪರಿಶೀಲನೆಯಿಂದ ಈ ಕಂಪನಿಗಳ ನಡುವಿನ ಸಂಪರ್ಕವನ್ನು ಪತ್ತೆಹಚ್ಚಲಾಗಿದೆ.
ಗುವಾಹಟಿಯ ಗೋದಾಮುಗಳಿಗೆ ಅಡಿಕೆ ತಲುಪಿದ ಬಳಿಕ ಹೊಸ ದಾಖಲೆಗಳನ್ನು ಸೃಷ್ಟಿಸಿ, ಬೇರೆ ಚೀಲಗಳಲ್ಲಿ ತುಂಬಿ ಮರುಪೂರೈಕೆ ಮಾಡಲಾಗುತ್ತಿತ್ತು. ಈ ಕಾರ್ಯವನ್ನು ಸಂಘಟಿತ ಲಾಜಿಸ್ಟಿಕ್ಸ್ ಕಂಪನಿಗಳು ನಿರ್ವಹಿಸುತ್ತಿದ್ದವು.
ಒಂದೇ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಸುಮಾರು ₹876 ಕೋಟಿ ಹಣ ಜಮೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಣದ ಬಹುಪಾಲು ದೇಶದ ವಿವಿಧ ಭಾಗಗಳ ಅಡಿಕೆ ವ್ಯಾಪಾರಿಗಳಿಂದ ಬಂದಿತ್ತು ಎಂದು ವರದಿ ತಿಳಿಸಿದೆ.
ಸಿಲಿಗುರಿ ಕಾರಿಡಾರ್ನಲ್ಲಿ ರಕ್ಷಣಾ ಜಾಲ..! : ಅಡಿಕೆ ಕಳ್ಳಸಾಗಣೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಕಾರಿಡಾರ್ ಪ್ರಮುಖ ಪಾತ್ರ ವಹಿಸಿತ್ತು. ಈ ಪ್ರದೇಶದ ಮೂಲಕ ಉತ್ತರ ಬಂಗಾಳದಿಂದ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಅಡಿಕೆ ಸಾಗಿಸಲಾಗುತ್ತಿತ್ತು.
ಕಳ್ಳಸಾಗಣೆ ವಾಹನಗಳು ತಪಾಸಣೆಯಿಂದ ತಪ್ಪಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನ ಸಾಗಣೆ ನಡೆಯುತ್ತಿದ್ದ ವಾಹನಗಳಿಗೆ ನಿರ್ದಿಷ್ಟ ಸಂಸ್ಥೆಯ ಹೆಸರಿನ ಮುದ್ರಿತ ಚೀಟಿಗಳನ್ನು ನೀಡಲಾಗುತ್ತಿತ್ತು. ಈ ಚೀಟಿಗಳನ್ನು ತೋರಿಸಿದರೆ ವಾಹನಗಳನ್ನು ತಪಾಸಣೆ ಇಲ್ಲದೆ ಮುಂದಕ್ಕೆ ಬಿಡುವ ವ್ಯವಸ್ಥೆ ಇತ್ತು ಎಂದು ವರದಿ ವಿವರಿಸಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಈ ಮಾರ್ಗದಲ್ಲಿ ಪ್ರತಿ ತಿಂಗಳು ಸುಮಾರು 100ರಿಂದ 120 ವಾಹನಗಳು ಕಳ್ಳಸಾಗಣೆ ಅಡಿಕೆಯನ್ನು ಸಾಗಿಸುತ್ತಿದ್ದವು. ವಾಹನಗಳ ಸಾಗಣೆಗೆ ಸುರಕ್ಷಿತ ಮಾರ್ಗ ಕಲ್ಪಿಸುವ ವ್ಯವಸ್ಥೆಯ ಭಾಗವಾಗಿ ಪ್ರತಿ ತಿಂಗಳು ₹5ರಿಂದ ₹7 ಲಕ್ಷದವರೆಗೆ ನಗದು ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಣದಲ್ಲಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳಿಗೂ ಪಾಲು ಹೋಗುತ್ತಿತ್ತು ಎಂದು ವರದಿ ತಿಳಿಸಿದೆ.
500 ಮೆಟ್ರಿಕ್ ಟನ್ಗೂ ಅಧಿಕ ಅಡಿಕೆ ಪತ್ತೆ : 2023ರ ಜೂನ್ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯ ವೇಳೆ ಇದೇ ಗುಂಪಿಗೆ ಸಂಬಂಧಿಸಿದ ಅಮಿಂಗಾಂವ್ ಗೋದಾಮಿನಲ್ಲಿ 500 ಮೆಟ್ರಿಕ್ ಟನ್ಗೂ ಅಧಿಕ ಲೆಕ್ಕವಿಲ್ಲದ ಅಡಿಕೆ ಪತ್ತೆಯಾಗಿತ್ತು.
ಎರಡು ಸಂಸ್ಥೆಗಳು ಕಳೆದ ಎಂಟು ವರ್ಷಗಳಲ್ಲಿ ₹400 ಕೋಟಿಗೂ ಅಧಿಕ ಮೌಲ್ಯದ ಅಡಿಕೆ ಖರೀದಿ ಮಾಡಿದ್ದವು. ಇವು ಅಡಿಕೆ ಖರೀದಿಸಿದ್ದ ಆರು ಪ್ರಮುಖ ಸಂಸ್ಥೆಗಳಲ್ಲಿ ಐದು ಸಂಸ್ಥೆಗಳಿಗೆ ಯಾವುದೇ ಅಧಿಕೃತ ವ್ಯಾಪಾರ ಸ್ಥಳ, ಗೋದಾಮು ಅಥವಾ ಕಚೇರಿಯೇ ಇರಲಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ. ಈ ಐದು ಸಂಸ್ಥೆಗಳೇ ₹100 ಕೋಟಿಗೂ ಅಧಿಕ ಮೌಲ್ಯದ ಅಡಿಕೆಯನ್ನು ಪೂರೈಸಿದ್ದವು ಎಂಬ ಅಂಶವೂ ವರದಿಯಲ್ಲಿದೆ.
ಹವಾಲಾ ಮೂಲಕ ಮ್ಯಾನ್ಮಾರ್ಗೆ ಹಣ ವರ್ಗಾವಣೆ : ಅಡಿಕೆ ಕಳ್ಳಸಾಗಣೆಯಿಂದ ಬಂದ ಹಣವನ್ನು ಹವಾಲಾ ಮಾರ್ಗದ ಮೂಲಕ ಮ್ಯಾನ್ಮಾರ್ನಲ್ಲಿರುವ ಪೂರೈಕೆದಾರರಿಗೆ ತಲುಪಿಸಲಾಗುತ್ತಿತ್ತು ಎಂಬುದಕ್ಕೆ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಗಳು ದೊರೆತಿವೆ ಎಂದು ವರದಿ ತಿಳಿಸಿದೆ.
2024ರಲ್ಲಿ ಗುವಾಹಟಿ ಹೈಕೋರ್ಟ್ ನೀಡಿದ ನಿರ್ದೇಶನದ ಆಧಾರದ ಮೇಲೆ ಸಿಬಿಐ ತನಿಖೆ ಆರಂಭವಾಗಿತ್ತು. ನಂತರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ. ತನಿಖೆ ಕೈಗೆತ್ತಿಕೊಂಡಿತ್ತು.
ಮ್ಯಾನ್ಮಾರ್ನಿಂದ ಅಕ್ರಮವಾಗಿ ತರಲಾಗುವ ವಿದೇಶಿ ಅಡಿಕೆಗೆ ನಕಲಿ ದಾಖಲೆಗಳ ಮೂಲಕ ದೇಶೀಯ ಅಡಿಕೆಯ ರೂಪ ನೀಡಲಾಗುತ್ತಿತ್ತು. ಹೀಗೆ ಕಳ್ಳಸಾಗಣೆ, ನಕಲಿ ಬಿಲ್ಲಿಂಗ್, ಸಾಗಣೆ ಮತ್ತು ಹವಾಲಾ ಹಣ ವರ್ಗಾವಣೆಯ ಮೂಲಕ ಬೃಹತ್ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ವಿದೇಶಿ ಅಡಿಕೆಯ ಅಕ್ರಮ ಪ್ರವೇಶ ಮತ್ತು ಅದರ ವಹಿವಾಟಿನ ಹಿಂದೆ ಎಷ್ಟು ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
The Enforcement Directorate has uncovered an alleged ₹1,000-crore organised betel nut smuggling syndicate operating from Myanmar through Mizoram into several Indian states. According to Jagran report, searches were conducted at 55 locations across six states in four phases over six months. The network allegedly used fake GST invoices, shell companies, fabricated transport documents and hawala channels to move foreign-origin arecanut into domestic markets. Investigators also found that a single company’s bank account received credits of around ₹876 crore. The Siliguri corridor reportedly served as a major route for transporting smuggled betel nuts to Bihar, Uttar Pradesh and Maharashtra.


