ನಾಗಾಲ್ಯಾಂಡ್ ಒಂದಿಲ್ಲೊಂದು ಕಾರಣದಿಂದ ಸುದ್ದಿ ಮಾಡುತ್ತಲೇ ಇರುತ್ತದೆ. ಈ ಬಾರಿ ಆ ಪುಟ್ಟ ಹಳ್ಳಿಯ ಜನರ ಒಗ್ಗಟ್ಟಿನ ಮೂಲಕ ಸುದ್ದಿಯಾಗಿದೆ. ಅದು ಸುಮಾರು 2 ತಿಂಗಳ ಹಿಂದಿನ ಕತೆ. ಈ ಗ್ರಾಮದ ಸಾವಿರಾರು ಮಂದಿ ಸೇರಿ ಕಮರಿಗೆ ಬಿದ್ದ ಲಾರಿಯನ್ನು ಎಳೆದು ಮೇಲಕ್ಕೆತ್ತಿದ ರೀತಿ ಹಾಗೂ ಒಗ್ಗಟ್ಟು ಇಡೀ ದೇಶಕ್ಕೆ ಮಾದರಿಯಾಯಿತು.
ನಾಗಾಲ್ಯಾಂಡ್‌ನ ಫೆಕ್ ಜಿಲ್ಲೆಯ ಕುಟ್ಸಾಪೋ ಗ್ರಾಮದಲ್ಲಿ ನಡೆದ ಘಟನೆ ಇದು. ಶುಂಠಿ ತುಂಬಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯಿಂದ ಸುಮಾರು 100-120 ಅಡಿಗಳಷ್ಟು ಕೆಳಗೆ ಬಿದ್ದಿತ್ತು. ಲಾರಿಯಲ್ಲಿ ಒಟ್ಟು 8 ಜನರಿದ್ದರು, ಮತ್ತು ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿತ್ತು.ಮೂಲಭೂತ ಸೌಲಭ್ಯದ ಕೊರತೆ ಇರುವ ಈ ಹಳ್ಳಿಯ ಜನರು ಲಾರಿಗೆ ಹಗ್ಗ ಕಟ್ಟಿ ಊರಿನ ಜನರೆಲ್ಲಾ ಸೇರಿ ಎಳೆದೇ ಬಿದ್ದ ಲಾರಿಯನ್ನು ಮೇಲಕ್ಕೆತ್ತಿದ್ದರು. ಈ ಹಳ್ಳಿಯಲ್ಲಿ ಯಾರಿಗೆ ಏನೇ ಆದರೂ ಎಲ್ಲರೂ ಒಂದಾಗಿ ಸಹಾಯ ಮಾಡುವುದು ಇಲ್ಲಿನ ಜನರ ಸ್ವಭಾವ. ಹೀಗಾಗಿ ಅಲ್ಲಿ ಇದು ಅಚ್ಚರಿಯ ಸಂಗತಿಯಲ್ಲ, ಆದರೆ ಅಧಿಕಾರಿಯೊಬ್ಬರು ಹಾಗೂ ಜನಪ್ರತಿನಿಧಿಯೊಬ್ಬರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ಎಲ್ಲೆಡೆ ಈ ಹಳ್ಳಿಯ ಒಗ್ಗಟ್ಟು ಬೆಳಕಿಗೆ ಬಂದಿದೆ ಹಾಗೂ ಅಚ್ಚರಿಗೂ ಕಾರಣವಾಯಿತು.
ಗ್ರಾಮಸ್ಥರ ಪ್ರಕಾರ, ನಾಗಾಲ್ಯಾಂಡ್ ನ ಈ ಪ್ರದೇಶದಲ್ಲಿ ಕಿರಿದಾದ ರಸ್ತೆ ಇರುವುದರಿಂದ ಲಾರಿಯು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿತ್ತು. ಈ ಜಿಲ್ಲೆಯಲ್ಲಿ ಬಹುತೇಕ ಮಂದಿ ಶುಂಠಿ ಬೆಳೆಯುತ್ತಾರೆ, ಹೀಗಾಗಿ ಇದರ ಸಾಗಾಟದ ಸಂದರ್ಭ ಲಾರಿ ಉರುಳಿ ಬಿದ್ದಿತ್ತು. ಹೀಗೆ ಬಿದ್ದ ಲಾರಿಯನ್ನು ತಕ್ಷಣವೇ ತೆಗೆಯುವ ಪ್ರಯತ್ನ ನಡೆದಿರಲಿಲ್ಲ. ಊರಿನ ಜಾತ್ರೆ ಮುಗಿದ ಬಳಿಕ ಜನರೆಲ್ಲಾ ಸೇರಿ ಲಾರಿಯನ್ನು ಎಳೆದರು. ಸುಮಾರು ಅರ್ಧ ಗಂಟೆಯ ಪ್ರಯತ್ನದಲ್ಲಿ ಗ್ರಾಮಸ್ಥರು ಲಾರಿಯನ್ನು ಎಳೆದರು. ಬಳ್ಳಿ ಕಟ್ಟಿ ಎಳೆಯುತ್ತಾ ಬಂದರೆ , ಲಾರಿ ಹಿಂದಕ್ಕೆ ಜಾರದಂತೆ ಸಲಾಕೆ ಇತ್ಯಾದಿಗಳನ್ನು ಕಟ್ಟಿದ್ದರು.
ಈ ಘಟನೆಯ ಬಗ್ಗೆ ಮಾತನಾಡಿದ ಅಲ್ಲಿನ ವಿಭಾಗೀಯ ಅಧಿಕಾರಿ ಭವಾನಿ ಅವರು, ಈ ಗ್ರಾಮದ ನಿವಾಸಿಗಳು ಸೌಹಾರ್ದತೆ ಹಾಗೂ ಒಗ್ಗಟ್ಟಿಗೆ ಅಚ್ಚರಿ ಪಡಬೇಕಿಲ್ಲ. ಇಲ್ಲಿ ಇದು ಮಾಮೂಲು ಸಂಗತಿಯಾಗಿದೆ.ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದೆ. ಇಲ್ಲಿನ ಒಂದು ಕುಟುಂಬವು ತೊಂದರೆಯಲ್ಲಿದ್ದರೆ ಇಡೀ ಗ್ರಾಮವೇ ಅವರ ಜೊತೆ ನಿಲ್ಲುತ್ತದೆ ಎನ್ನುತ್ತಾರೆ.