ಈಚೆಗೆ ನಾಗರಪಂಚಮಿ ಎಲ್ಲೆಡೆ ಸಂಭ್ರಮದಿಂದ ನಡೆಯಿತು. ತುಳುನಾಡಿನಲ್ಲಿ ನಾಗ ಬನಗಳಲ್ಲಿ, ನಾಗನ ಕಟ್ಟೆಗಳಲ್ಲಿ ನಾಗನ ಕಲ್ಲಿಗೆ ಹಾಲೆರೆದು ವಿಶೇಷ ಪೂಜೆಯ ಮೂಲಕ ಆಚರಣೆ ನಡೆಯಿತು. ಆದರೆ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಿಜ ನಾಗರಹಾವನ್ನು ಕಾಡಿನಿಂದ ತಂದು ವಿಶೇಷ ಪೂಜೆ ಮಾಡಿ ಮತ್ತೆ ಕಾಡಿಗೆ ಬಿಡುವ ವಿಶೇಷ ಆಚರಣೆ ಅನೇಕ ಸಮಯಗಳಿಂದ ನಡೆಯುತ್ತಿದೆ.
ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಬತ್ತಿಸ್ ಶಿರಾಳ ಎಂಬ ಊರಿನಲ್ಲಿ ಈ ಆಚರಣೆ ನಡೆಯುತ್ತದೆ. ಅಲ್ಲಿ ಪ್ರತಿವರ್ಷ ನಾಗರ ಪಂಚಮಿಯಂದು ಲೈವ್ ಆಗಿ ಆಚರಿಸುತ್ತಾರೆ. ಈ ಆಚರಣೆಗೆ ಎರಡು ದಿನ ಮುನ್ನ ಕಾಡಿಗೆ ಹೋಗಿ ಜನರು ನಿಜ ನಾಗರಹಾವನ್ನು ಹಿಡಿದುಕೊಂಡು ಬರುತ್ತಾರೆ. ಎಲ್ಲರೂ ಊರಿನ ಹೊರಭಾಗದಲ್ಲಿ ಸೇರುತ್ತಾರೆ ನಂತರ ಮೆರವಣಿಗೆ ಮೂಲಕ ಬರುತ್ತಾರೆ. ಮಣ್ಣಿನ ಮಡಿಕೆಯಲ್ಲಿ ನಿಜ ಹಾವನ್ನು ಇರಿಸಿ ಮನೆಗೆ ತಂದು ಮನೆಯಲ್ಲಿ ಎರಡು ದಿನಗಳ ಕಾಲ ಪೂಜಿಸಿ ನಂತರ ಪುನಃ ಕಾಡಿಗೆ ಹೋಗಿ ಬಿಟ್ಟು ಬರುತ್ತಾರೆ.
ಈ ಆಚರಣೆಯನ್ನು ನೂರಾರು ವರ್ಷಗಳಿಂದ ಈ ಹಳ್ಳಿಯ ಜನರು ಮಾಡುತ್ತಾ ಬಂದಿದ್ದಾರೆ. ಇನ್ನೊಂದು ವಿಶೇಷವೇನೆಂದರೆ, ಇದುವರೆಗೂ ಯಾವ ಹಾವಿಗೂ ಹಿಂಸೆ ತೊಂದರೆ ಮಾಡಿಲ್ಲ. ಈ ಸಮಯದಲ್ಲಿ ಯಾವ ಹಾವುಗಳು ಮನುಷ್ಯರಿಗೆ ಕಚ್ಚಿದ ಉದಾಹರಣೆಗಳು ಕಡಿಮೆ. ಇಂತಹ ವಿಶೇಷ ಆಚರಣೆಯ ಮೂಲಕ ನಾಗರಪಂಚಮಿಯು ಶಿರಾಳ ಎಂಬ ಊರಿನಲ್ಲಿ ಗಮನ ಸೆಳೆದಿದೆ.