ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಇಂದು ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಾಗಬನ, ನಾಗ ಸನ್ನಿಧಿ, ನಾಗ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಭಕ್ತರ ದಂಡು ನೆರೆದಿದ್ದು, ನಾಗನಿಗೆ ತನು ಎರೆದು ಪೂಜೆ ಸಲ್ಲಿಸಿದ್ದಾರೆ. ದ ಕ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಸೇರಿದಂತೆ ವಿವಿಧ ದೇಗುಲಗಳಿಗೆ ಭಕ್ತರ ದಂಡೇ ಹರಿದು ಬಂದಿತ್ತು.
ಉಡುಪಿ ಜಿಲ್ಲೆಯ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ನಾಗ ಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗರ ಪಂಚಮಿಯನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಇಂದು ನಾಗರ ಪಂಚಮಿ ಅಂಗವಾಗಿ ವಿಶೇಷ ಪೂಜೆ ನಾಗರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂಜಾನೆಯಿಂದಲೆ ಭಕ್ತರು ಆಗಮಿಸಿ ನಾಗ ದೇವರ ಕಲ್ಲುಗಳಿಗೆ ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಶ್ರಾವಣ ಮಾಸದ ಹಬ್ಬಗಳ ಸಾಲಿನ ಮೊದಲ ಹಬ್ಬ ನಾಗರ ಪಂಚಮಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲಾಯಿತು. ಜನಪದರಲ್ಲಿ ಅಣ್ಣ ತಂಗಿಯರ ಬಾಂಧವ್ಯದ ಬೆಸುಗೆಯಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ನಾಗಪೂಜೆ ಪ್ರಮುಖವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಪುಣ್ಯಕ್ಷೇತ್ರದಲ್ಲಿನ ನಾಗರಕಲ್ಲುಗಳಿಗೆ ಭಕ್ತರು ಹಾಲೆರೆದು ಪೂಜೆ ಸಲ್ಲಿಸಿದರು.

