ಹಸಿವು ಏನು ಬೇಕಾದರು ಮಾಡಿಸುತ್ತದೆ. ಜಾತಿ, ಬೇಧ, ಮೇಲು-ಕೀಳು, ಪ್ರಾಣಿ-ಪಕ್ಷಿ ಯಾವುದಾದರೂ ಸರಿ.. ಈಗ ನಮೀಬಿಯಾ ಕತೆ ಕೇಳಿ.. ಅದು ಹೇಳಿ ಕೇಳಿ ಬಡ ದೇಶ. ಯಾವಾಗಲೂ ಆಹಾರದ ಕೊರತೆ ಅಲ್ಲಿನ ಜನರನ್ನು ಹೈರಣಾಗಿಸುತ್ತಲೇ ಇರುತ್ತದೆ. ಆಹಾರಕ್ಕಾಗಿ ಸಂಘರ್ಷಗಳು ನಡೆಯುತ್ತಲೇ ಇದೆ. ಈ ಬಾರಿಯ ಬರಗಾಲ ಇಡೀ ನಮೀಬಿಯಾವನ್ನು ಹೈರಾಣಾಗಿಸಿದೆ. ಹಸಿವಿನ ಸಂಕಷ್ಟ ಕಾಣಲು ಶುರುವಾಗಿದೆ. ಹೀಗಾಗಿ ನಮೀಬಿಯಾದಲ್ಲಿ ಸರ್ಕಾರವೇ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶಿಸಿದೆ.
ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿ, 56,800 ಕೆಜಿ ಮಾಂಸವನ್ನು ಜನರಿಗೆ ನೀಡಲಾಗಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾಗರಿಕರ ಅನುಕೂಲಕ್ಕಾಗಿ ಬಳಸಲು ನಮಗೆ ಸಂವಿಧಾನದಲ್ಲಿ ಅನುಮತಿ ಇದೆ ಎಂದು ನಮೀಬಿಯಾ ಸರ್ಕಾರ ಕಾಡು ಪ್ರಾಣಿಗಳ ಭೇಟೆಯಾಡುವ ಕ್ರಮವನ್ನು ಸಮರ್ಥಿಸಿಕೊಂಡಿದೆ.
ದಕ್ಷಿಣ ಆಫ್ರಿಕಾವು ಪ್ರಸ್ತುತ ದಶಕಗಳಲ್ಲಿ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ವಿಶ್ವಸಂಸ್ಥೆಯು ವರದಿ ಮಾಡಿದಂತೆ ಜುಲೈನಲ್ಲಿ ನಮೀಬಿಯಾ ಸಂಗ್ರಹಿಸಿಟ್ಟಿದ್ದ ಮೀಸಲು ಆಹಾರದಲ್ಲಿ 84% ರಷ್ಟು ಆಹಾರ ಖಾಲಿಯಾಗಿದೆ. ನಮೀಬಿಯಾದ ಜನಸಂಖ್ಯೆಯ ಅರ್ಧದಷ್ಟು ಜನರು ಮುಂಬರುವ ತಿಂಗಳುಗಳಲ್ಲಿ ಭಾರೀ ಆಹಾರದ ಸಮಸ್ಯೆ ಎದುರಿಸಬಹುದು. ಪರಿಸರ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸದಿದ್ದರೆ ಭೀಕರ ಬರಗಾಲವು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು. ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನಾ, ಅಂಗೋಲಾ ಮತ್ತು ನಮೀಬಿಯಾದಲ್ಲಿ ಅಂದಾಜು 2 ಲಕ್ಷ ಆನೆಗಳು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಆನೆಗಳು ಇಲ್ಲಿ ನೆಲೆಸಿವೆ. ಕಳೆದ ವರ್ಷ ಬೋಟ್ಸ್ವಾನಾ ಮತ್ತು ಜಿಂಬಾಬ್ವೆಯಲ್ಲಿ ನೂರಾರು ಆನೆಗಳು ಬರಗಾಲದಿಂದ ಸಾವನ್ನಪ್ಪಿದ್ದವು.
2022 ರಿಂದ ನಮೀಬಿಯಾದ ಒಮಾಹೆಕೆ ಪ್ರದೇಶದಲ್ಲಿ ಸುಮಾರು 800 ಜನರು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ನಮೀಬಿಯನ್ ಕಳೆದ ವಾರ ವರದಿ ಮಾಡಿದೆ. ಅದೇ ಎರಡು ವರ್ಷಗಳ ಅವಧಿಯಲ್ಲಿ ಈ ಪ್ರದೇಶವು 30 219 ಅಪೌಷ್ಟಿಕತೆ ಪ್ರಕರಣಗಳನ್ನು ದಾಖಲಿಸಿದೆ ಎಂದು ವರದಿಯಾಗಿದೆ.
ಈ ನಡುವೆ ನಮೀಬಿಯಾ ಅಧ್ಯಕ್ಷ ನಂಗೊಲೊ ಅಪೌಷ್ಟಿಕತೆ-ಸಂಬಂಧಿತ ಸಾವುಗಳ ಇತ್ತೀಚಿನ ವರದಿಗಳು ಆತಂಕಕಾರಿ ಎಂದಿದ್ದಾರೆ.
- ಅಂತರ್ಜಾಲ ಮಾಹಿತಿ