ರಾಜ್ಯದಲ್ಲಿ ಒಂದು ತಿಂಗಳು ಗ್ರಾಹಕ ಸ್ನೇಹಿಯಾಗಿ ನಂದಿನಿ ಸಿಹಿ ಉತ್ಸವವನ್ನು ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಆಚರಣೆ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.
ಅವರು ಡಿ.19ರ ಸೋಮವಾರ ಮಂಗಳೂರು ನಗರದ ರಥಬೀದಿಯಲ್ಲಿರುವ ಸುಪ್ರಿಯಾ ಫ್ರಾಂಚೈಸಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿಹಿ ಉತ್ಸವದ ಅಂಗವಾಗಿ ಪ್ರತಿ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹಾಲು ಒಕ್ಕೂಟದ ರೈತರ ಸೇವೆಯೊಂದಿಗೆ ಗ್ರಾಹಕರ ಸಂತೃಪ್ತಿ, ಕಾರ್ಮಿಕ ಕಲ್ಯಾಣದ ಉದ್ದೇಶ ಹೊಂದಿರುವ ಸಂಸ್ಥೆಯಾಗಿದೆ. ನಂದಿನಿ ಸಿಹಿ ಉತ್ಸವ ಮೂಲಕ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿದ್ದು, ಈ ಮೂಲಕ ಹೈನುಗಾರರಿಗೂ ಪ್ರೋತ್ಸಾಹ ಸಿಗಲಿದೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್ ಅವರು ಮಾತನಾಡಿ, ಕ್ರಿಸ್‍ಮಸ್, ಮಕರ ಸಂಕ್ರಾಂತಿ, ಹೊಸ ವರ್ಷಾಚರಣೆಗಳು ಬರುತ್ತಿದ್ದು, ಈ ಸಂಭ್ರಮವನ್ನು ನಂದಿನಿ ಸಿಹಿ ಉತ್ಸವದೊಂದಿಗೆ ಆಚರಿಸೋಣ ಎಂದರು. ನಂದಿನಿ ಹಾಲಿನೊಂದಿಗೆ 59 ಬಗೆಯ ಸಹ ಉತ್ಪನ್ನಗಳಿದ್ದು, ಇವುಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಮಾರಾಟ ಮಳಿಗೆಯಲ್ಲಿ ಸಿಗಲಿವೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸುಭದ್ರ ರಾವ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ರವಿರಾಜ್ ಉಡುಪ, ಉಪವ್ಯವಸ್ಥಾಪಕಿ ಜಾನೆಟ್, ಸಹಾಯಕ ವ್ಯವಸ್ಥಾಪಕ ಸಚಿನ್, ಸಿಬ್ಬಂದಿ ಅಭಿಷೇಕ್ ಮತ್ತು ರಮೇಶ್ ಬೂದಿಗಟ್ಟಿ ಇದ್ದರು.