ಅಂತಾರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಮಾರು 27 ವರ್ಷಗಳ ಗಮನಾರ್ಹ ಸೇವೆ ಸಲ್ಲಿಸಿರುವ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಸಂಸ್ಥೆಯಿಂದ ನಿವೃತ್ತರಾಗಿದ್ದಾರೆ. ಕಳೆದ ತಿಂಗಳು 27ರಂದು ಜಾರಿಗೆ ಬರುವಂತೆ ಸುನೀತಾ ವಿಲಿಯಮ್ಸ್ ಅವರು ನಿವೃತ್ತರಾಗಿದ್ದಾರೆ ಎಂದು ನಾಸಾ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಾಸಾ, ಸುನೀತಾ ವಿಲಿಯಮ್ಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂರು ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ ಎಂದು ತಿಳಿಸಿದೆ. ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿರುವ ಅವರು, ನಾಸಾ ಗಗನಯಾತ್ರಿಗಳ ಪೈಕಿ ಎರಡನೇ ಅತಿ ಹೆಚ್ಚು ದಿನ ಬಾಹ್ಯಾಕಾಶದಲ್ಲಿದ್ದ ಸಾಧನೆಗೆ ಪಾತ್ರರಾಗಿದ್ದಾರೆ.
ಇದಲ್ಲದೇ, ಸುನೀತಾ ವಿಲಿಯಮ್ಸ್ ಅವರು 9 ಬಾರಿ ಬಾಹ್ಯಾಕಾಶ ನಡಿಗೆಗಳನ್ನು (Spacewalks) ಪೂರ್ಣಗೊಳಿಸಿದ್ದು, ಒಟ್ಟು 62 ಗಂಟೆಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದು ಒಬ್ಬ ಮಹಿಳಾ ಗಗನಯಾತ್ರಿ ಸಾಧಿಸಿರುವ ಅತಿ ಹೆಚ್ಚಿನ ಬಾಹ್ಯಾಕಾಶ ನಡಿಗೆ ಸಮಯವೆಂದು ನಾಸಾ ತಿಳಿಸಿದೆ.
ವಿಶೇಷವೆಂದರೆ, ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ಎಂಬ ಗೌರವವೂ ಸುನೀತಾ ವಿಲಿಯಮ್ಸ್ ಅವರಿಗೆ ಸಲ್ಲುತ್ತದೆ. ಅವರ ಈ ಸಾಧನೆಗಳು ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲುಗಳಾಗಿ ಗುರುತಿಸಿಕೊಂಡಿವೆ.
ಭಾರತೀಯ ಮೂಲದ 60 ವರ್ಷದ ಸುನೀತಾ ವಿಲಿಯಮ್ಸ್ ಅವರು ತಮ್ಮ ವೃತ್ತಿ ಜೀವನದಾದ್ಯಂತ ಗಗನಯಾತ್ರಿಯಾಗಿ ಅನೇಕ ಸವಾಲುಗಳನ್ನು ಎದುರಿಸಿ, ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.



