ಪ್ರತಿ ವರ್ಷ ಭಾರತದಲ್ಲಿ(India) ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನ ಆಚರಣೆ ಮಾಡಲಾಗುತ್ತದೆ. 1905ರ ಸ್ವದೇಶಿ ಚಳವಳಿಯ ಸವಿನೆನಪಿಗಾಗಿ 2015 ರಲ್ಲಿ ಮೊದಲ ಬಾರಿಗೆ ಆಗಸ್ಟ್ 7 ರಂದು ‘ರಾಷ್ಟ್ರೀಯ ಕೈಮಗ್ಗ ದಿನ’ವನ್ನಾಗಿ ಕೇಂದ್ರ ಸರ್ಕಾರ(Central Govt) ಆಚರಿಸಿತು. ಕೈಮಗ್ಗ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳನ್ನು ಆವಿಷ್ಕರಿಸಿದವರಿಗೆ 2015 ರಿಂದ ಸಂತ ಕಬೀರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
1905 ಆಗಸ್ಟ್ 7 ರಂದು ಬಂಗಾಳದಲ್ಲಿ ಸ್ವದೇಶಿ ಚಲುವಳಿ ಪ್ರಾರಂಭವಾಗಿತ್ತು. ಆ ಚಳುವಳಿಯ ಮೂಲ ಉದ್ದೇಶ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಿ, ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಉತ್ತೇಜಿಸುವುದಾಗಿದೆ. ಹಾಗಾಗಿ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 2015 ರಲ್ಲಿ ಪ್ರಧಾನಿ ಮೋದಿ ಅವರು ದೇಶದಲ್ಲಿ ಇರುವ ನೇಕಾರರ ಕೆಲಸ ಮತ್ತು ಅವರ ಶ್ರಮವನ್ನು ಶ್ಲಾಘಿಸುವ ಮೂಲಕ ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟನೆ ಮಾಡಿದ್ದರು.
ರಾಷ್ಟ್ರೀಯ ಕೈಮಗ್ಗ ದಿನದ ಮಹತ್ವ: ಭಾರತ ದೇಶದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪ್ರತಿಕವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಣೆ ಮಾಡಲಾಗುತ್ತದೆ. ಕೈಮಗ್ಗವು ದೇಶದ ಮಹಿಳೆಯರಿಗೆ ಪ್ರಮುಖ ಜೀವನೋಪಾಯದ ಮೂಲವಾಗಿದೆ. ಇದು ದೇಶದ ಕೈಮಗ್ಗ ನೇಕಾರರನ್ನು ಗೌರವಿಸುವ ದಿನವೂ ಹೌದು. ದೇಶದ ನೇಕಾರರ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.