ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಈ ಬಾರಿಯ ಮಳೆಗೆ ಭೂಕುಸಿತವಾಗಿದೆ. ಕೇರಳದ ವಯನಾಡಿನಲ್ಲಿ ಭೀಕರ ದುರಂತವೇ ನಡೆದಿದೆ. ಈ ನಡುವೆ ಹಲವು ಎಚ್ಚರಿಕೆಗಳನ್ನೂ ನೀಡಲಾಗಿದೆ. ಆದರೆ ಅನೇಕ ವರ್ಷಗಳ ಹಿಂದೆ ವಿಜ್ಞಾನ ಮಾಸ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಧ್ಭುತ ಸಂದೇಶ ಈ ದಿನಮಾನದಲ್ಲಿ ಹೆಚ್ಚು ಪ್ರಸ್ತುತ ಅನಿಸುತ್ತದೆ. ಇದನ್ನು ಕೆ ಪಿ ನಾಭ ಐಲ್ ಅವರು ಸಂಗ್ರಹಾನುವಾದ ಮಾಡಿದ್ದಾರೆ. ಪರಿಸರ ಪ್ರೇಮಿ ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಅವರ ಕಡತದಲ್ಲಿದ್ದ ಈ ಸಂಗ್ರಹ ಮತ್ತೆ ಇಲ್ಲಿ ಪ್ರಕಟಿಸಲಾಗಿದೆ.
ಇಂದು ಮಳೆ ನುಡಿಯಿತು…
ಅಂದು ನಾನು ಹಲವು ಬಾರಿ ಹೇಳಿದ್ದೆ..ಬೇಡ, ಬೇಡ ಅಂತ
ನೀವು ನನ್ನ ದಾರಿ ಅಡ್ಡಗಟ್ಟಿದಿರಿ…
ಹೊಳೆಯೂ ಹೇಳಿತು..
ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ…
ಆದರೆ ನೀವು ನನ್ನ ಹೃದಯ ಹಿಸುಕಿ ನನ್ನ ದಡವನ್ನು ಆಕ್ರಮಿಸಿದಿರಿ…
ಭೂಮಿಯೂ ಹೇಳಿತು…
ಅಂದು ನಾನು ಸಾಕಷ್ಟು ಜಲ ಹೀರಿದ್ದೆ…
ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ .. ನಾನು ನೀರು ಸಂಗ್ರಹಿಸುತ್ತಿದ್ದ ಹೊಲ .. ಜಲಾಶಯಕ್ಕೆ ಮಣ್ಣು ತುಂಬಿದಿರಿ….
ಬೆಟ್ಟವೂ ನುಡಿಯಿತು…
ಅಂದು ನಾನು ಭೀಕರ ಗಾಳಿ – ಮಳೆಗೆ ಅಲುಗಾಡದೆ ಗಟ್ಟಿಯಾಗಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ.. ನನಗೆ ಕಾಲು ಗಟ್ಟಿ ಊರಲು ಆಗದೆ ಭೂಮಿ ಕುಸಿದು ಬೀಳುತ್ತಿದೆ..
ಈಗ ಮಳೆ ಕೇಳುತ್ತಿದೆ…
ನೀವು ಮಣ್ಣು ತುಂಬಿದ ನದಿ ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ ?. ನಾನು ನನ್ನ ಪಾಡಿಗೆ ಹೋಗುವೆ…
ಹೊಳೆ ಕೇಳುತ್ತಿದೆ…
ನೀವು ನನ್ನಿಂದ ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ ? ನಾನು ನನ್ನ ಪಾಡಿಗೆ ಹೋಗುವೆ…
ಈಗ ಭೂಮಿ ಕೇಳುತ್ತಿದೆ..
ನಾನು ನೀರು ಸಂಗ್ರಹಿಸುತ್ತಿದ್ದ ಹೊಲ – ಜಲಾಶಯವನ್ನು ವಾಪಸ್ಸು ಕೊಡುವಿರಾ ? .. ನಾನಲ್ಲೇ ಹಾಯಾಗಿರುವೆ..
ಬೆಟ್ಟವೂ ಕೇಳುತ್ತಿದೆ..
ಇನ್ನಾದರೂ ನನ್ನ ಕಾಲು ಕಡಿಯುವುದನ್ನು ನಿಲ್ಲಿಸುವಿರಾ ?
ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ..
ನೆನಪಿರಲಿ
ನಾವು ಮಾನವರು ಪ್ರಕೃತಿಯ ಕಾವಲುಗಾರರು ಮಾತ್ರ, ಒಡೆಯರಲ್ಲ..
ಮರೆತರೆ
ಪ್ರಕೃತಿಯೇ…ಅದು ಏನೆಂಬುದನ್ನು ನಮಗೆ ಕಲಿಸಿಕೊಡುತ್ತದೆ
ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ
ಸಂಗ್ರಹಾನುವಾದ : ಕೆ ಪಿ ನಾಭ ಐಲ್