ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅಡಿಯಲ್ಲಿ ಕೃಷಿ ಸಖಿಯರಿಗೆ “ನೈಸರ್ಗಿಕ ಕೃಷಿ” ಕುರಿತು ಐದು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಚಾಲನೆ ನೀಡಿದರು.
ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ಆರ್. ಚವ್ಹಾಣ್, ರಾಯಚೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪವಾರ್, ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ಎಂ. ಬಸವಣ್ಣೆಪ್ಪ, ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ್ ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದರು.
ಬಳಿಕ ಡಾ.ಹನುಮಂತಪ್ಪ, ಮಣ್ಣಿನ ಆರೋಗ್ಯವೇ ನಮ್ಮ ಆರೋಗ್ಯವಾಗಿದೆ. ಪ್ರಕೃತಿ ಜನ್ಯ ವಸ್ತುಗಳು ನೈಸರ್ಗಿಕ ಕೃಷಿ ಪದ್ಧತಿಗೆ ಆಧಾರವಾಗಿವೆ. ಮಾನವ ಮತ್ತು ಪ್ರಕೃತಿ ಸಮತೋಲನಕ್ಕಾಗಿ ನೈಸರ್ಗಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಮಣ್ಣಿನ ಗುಣಧರ್ಮ ನಾಶವಾಗಿದ್ದು, ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಅವಕಾಶ ನೀಡಬೇಕಾಗಿದೆ ಎಂದರು.
ಪ್ರಕಾಶ್ ಚವ್ಹಾಣ್ ಮಾತನಾಡಿ, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿವೆ. ನೈಸರ್ಗಿಕ ಕೃಷಿ, ಬೆಳೆ ಸಮೀಕ್ಷೆ ನೋಂದಣಿ, ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಸೇರಿದಂತೆ ಎಲ್ಲ ರೀತಿಯ ಸರ್ಕಾರದ ಯೋಜನೆಗಳ ಕುರಿತಂತೆ ರೈತರಿಗೆ ಅರಿವು ಮೂಡಿಸಬೇಕು ಎಂದರು.
ಡಾ.ಎಂ. ಬಸವಣ್ಣೆಪ್ಪ ಮಾತನಾಡಿ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ, ವಾತಾವರಣದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ಕಡಿಮೆ ಮಾಡಿ, ಮಣ್ಣಿನ ಫಲವತ್ತತೆ ಹೆಚ್ಚಳ ಮಾಡುವ ಸಂಬಂಧ, ಕೃಷಿ ಸಖಿಯರಿಗೆ ತರಬೇತಿ ನೀಡುತ್ತಿದ್ದು, ನೈಸರ್ಗಿಕ ಕೃಷಿಯ ಮೂಲ ತತ್ವಗಳನ್ನು ತಿಳಿಸಲಾಗುತ್ತಿದೆ ಎಂದರು.


