ಸ್ವರ್ಗದಲ್ಲಿ ನಮ್ಮ ಪುಣ್ಯ ವ್ಯಯವಾದರೆ, ನರಕದಲ್ಲಿ ನಮ್ಮ ಪಾಪ ವ್ಯಯವಾಗುತ್ತದೆ. ದುಃಖ ಪಾಪವನ್ನು ಕಳೆಯುವಂಥದ್ದು. ಮನಸ್ಸಿಗೆ ನೋವಾದಾಗ ಅದು ಪಾಪ ಕಳೆಯಲು ಬಂದಿದ್ದು ಎಂಬ ಭಾವನೆ ನಮ್ಮದಾಗಬೇಕು. ನರಕ ನಿಜ ಅರ್ಥದಲ್ಲಿ ಭಗವಂತನ ಚಿಕಿತ್ಸಾಲಯ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಏಳನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.
ಪುಣ್ಯ ವ್ಯಯವಾದಾಗ ಮತ್ತೆ ಮತ್ತೆ ಇಹಲೋಕಕ್ಕೆ ಬರಬೇಕಾಗುತ್ತದೆ. ಆದರೆ ನರಕದಲ್ಲಿ ನಮ್ಮ ಪಾಪ ವ್ಯಯವಾಗುತ್ತದೆ. ಮಾಡಿದ ಪಾಪ, ದುಷ್ಕರ್ಮಗಳು ನಾಶವಾಗಿ ಆತ್ಮವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ವಿಶ್ಲೇಷಿಸಿದರು.
ಎದುರಿಸು. ಎದುರಿಸಲು ಸಾಧ್ಯವಾಗದಿದ್ದರೆ ದಿಕ್ಕು ತಪ್ಪಿಸು ಎಂಬ ತತ್ವ ರಾಜನೀತಿಯಲ್ಲಿದೆ. ಬಂಡಾಸುರನ ಉಪಟಳ ತಾಳಲಾರದೇ ದೇವತೆಗಳು ಕಂಗೆಟ್ಟಾಗ ಮೋಹನಿಯ ರೂಪದಲ್ಲಿ ರಾಜರಾಜೇಶ್ವರಿಯ ಪ್ರವೇಶವಾಗುತ್ತದೆ. ಬಂಡಾಸುರ ಮೋಹಪಾಶದಲ್ಲಿ ಸಿಲುಕುತ್ತಾನೆ. ಮೋಹ ಪಾಶದಲ್ಲಿ ಸಿಕುಲಿದವನಿಗೆ ಅದು ತಿಳಿಯುವುದಿಲ್ಲ. ಆದರೆ ಬೇರೆಯವರಿಗೆ ತಿಳಿಯುತ್ತದೆ. ಮೋಹಪಾಶದಲ್ಲಿ ಬಿದ್ದವರು ತಮ್ಮ ಕರ್ತವ್ಯವನ್ನು ಮರೆತು, ಶ್ರೇಷ್ಠ ಮಾರ್ಗವನ್ನು ತ್ಯಜಿಸಿ ಅದನ್ನೊಂದನ್ನೇ ಮಾಡುತ್ತಿರುತ್ತಾರೆ. ಬಂಡಾಸುರದ ಸ್ಥಿತಿಯೂ ಇದೇ ಆಗುತ್ತದೆ. ಮಮಕಾರದಲ್ಲಿ ಮುಳುಗಿ ತನ್ನ ಎಲ್ಲ ಸತ್ಪಥಗಳಿಂದ ವಿಮುಖನಾಗುತ್ತಾನೆ ಎಂದು ವಿವರಿಸಿದರು.
ಗುರುನಿಷ್ಠೆ, ಶಿವಭಕ್ತಿ, ಸತ್ಪಥದ ಮೂಲಕ ಸುಖವಾಗಿ ಇದ್ದ ಬಂಡಾಸುರನ ಗಮನ ಮೋಹಿನಿಯ ಕಡೆ ಇದ್ದ ಕಾರಣ ಲೋಕಕ್ಕೆ ಉಪಟಳ ಕಡಿಮೆಯಾಯಿತು. ನಾರದನ ಪ್ರವೇಶದ ಬಳಿಕ ದೇವೇಂದ್ರ ಅಪರೂಪಕ್ಕೆ ಸಿಂಹಾಸನ ಏರುತ್ತಾನೆ. ಆದಿಮಾಯೆ ಪರಾಶಕ್ತಿಯ ಸೇವೆ ಮಾಡುವಂತೆ ನಾರದರು ಮರ್ಗದರ್ಶನ ನೀಡುತ್ತಾರೆ. ಚಕ್ರಾರ್ಚನೆಯ ವಿಧಿಯನ್ನು ಬೋಧಿಸಿ ಇದು ದುಃಖದಿಂದ ಮುಕ್ತಿ ಪಡೆಯುವ ಸಾಧನ ಎಂದು ಮಹಾವಿಷ್ಣು ಕೂಡಾ ಬೋಧಿಸುತ್ತಾನೆ ಎಂದು ಹೇಳಿದರು.
ಮೋಹಪಾಶದಿಂದ ಬಂಡಾಸುರ ಹೊರಬಂದರೆ ಮೂರು ಲೋಕವನ್ನೂ ಭಸ್ಮಮಾಡುವ ಶಕ್ತಿ ಆತನಿಗೆ ಇದೆ. ಮಾಯಾಬಲ, ತೇಜೋಬಲ ಹೊಂದಿರುವ ಆತ ಶಾಶ್ವತವಾಗಿ ಎಚ್ಚೆತ್ತುಕೊಳ್ಳದಂತೆ ಉಪಾಯ ಮಾಡಬೇಕೆಂದು ಸೂಚಿಸುತ್ತಾರೆ. ಬಂಡಾಸುರನ ನಾಶಕ್ಕೆ ಪರಾಶಕ್ತಿಯ ಆರಾಧನೆಯೊಂದೇ ದಾರಿ ಎಂದು ಸ್ಪಷ್ಟವಾಗಿ ಹೇಳಿ ಉಪಾಸನೆ ಮಾರ್ಗ ಬೋಧಿಸಿದರು. ದೇವತೆಗಳೆಲ್ಲರೂ ಒಗ್ಗೂಡಿ ಇಂದ್ರಪ್ರಸ್ಥದಲ್ಲಿ 10 ಸಾವಿರ ವರ್ಷ ದೇವಿಯ ತಪಸ್ಸು ಮಾಡುತ್ತಾರೆ. ಆದಿಮಾಯೆ ಮಹಾಶಕ್ತಿಯ ಉಪಾಸನೆ ಸರ್ವ ದುಃಖಗಳಿಂದ ಮುಕ್ತಿ ಪಡೆಯುವ ಸಾಧನ ಎಂದು ವಿವರಿಸಿದರು.
ದೃಷ್ಟಿ, ಕರುಣೆ, ಕ್ಷಮೆಯ ಪ್ರತಿರೂಪವೇ ಗುರು. ಶಿಷ್ಯ ತಪ್ಪು ಮಾಡಿದಾಗ ಗುರುವಾದವನು ಆತನಿಗೆ ತಿಳಿಹೇಳಿ ಸರಿದಾರಿಯಲ್ಲಿ ಮುನ್ನಡೆಸಬೇಕು. ಇದರಂತೆ ಅಸುರಗುರು ಶುಕ್ರಾಚಾರ್ಯರು ಮೋಹಪಾಶದಲ್ಲಿ ಸಿಲುಕಿದ ಬಂಡಾಸುರನಿಗೆ ಎಚ್ಚರಿಕೆ ನೀಡುತ್ತಾರೆ. ಮೋಹಿನಿ ವಿಷ್ಣುಪತ್ನಿ; ಮೋಹಪಾಶದಿಂದ ಹೊರಬಂದು ಕರ್ತವ್ಯಪಥದಲ್ಲಿ ಮುನ್ನಡೆಯುವಂತೆ ಸೂಚಿಸುತ್ತಾರೆ ಎಂದು ಬಣ್ಣಿಸಿದರು.
ಮಂತ್ರಿಯ ಸಲಹೆಯಂತೆ ಬಂಡಾಸುರ ದೇವತೆಗಳ ತಪ್ಪಸು ಕೆಡಿಸಿ, ತನ್ನ ತಪಸ್ಸು ಮುಂದುವರಿಸಲು ನಿರ್ಧರಿಸುತ್ತಾನೆ. ಬಂಡಾಸುರ ಇಂದ್ರಪ್ರಸ್ಥದ ಸನಿಹಕ್ಕೆ ಬಂದಾಗ ಉಜ್ವಲ ಕೋಟೆ ಗೋಚರಿಸುತ್ತದೆ. ತಪಸ್ಸು ಮಾಡುತ್ತಿರುವ ದೇವತೆಗಳ ರಕ್ಷಣೆಗೆ ಜಗದಾಂಬೆ ಕಟ್ಟಿದ ಮಾಯಾಕೋಟೆ ಅದು. ಅದನ್ನು ಬಂಡಾಸುರ ಧ್ವಂಸಗೊಳಿಸುತ್ತಿದ್ದಂತೆ ಮತ್ತೆ ಮತ್ತೆ ಕೋಟೆ ನಿರ್ಮಾಣವಾಗುತ್ತದೆ. ಕೊನೆಗೆ ವಿಷಣ್ಣನಾದ ಬಂಡಾಸುರ ಮತ್ತೆ ಮೋಹಪಾಶಕ್ಕೆ ಸಿಲುಕುತ್ತಾನೆ ಎಂದು ಹೇಳಿದರು.
ವಿಶ್ವೇಶ್ವರ ಭಟ್ ಉಂಡೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತಾರ ಕಲ್ಲಡ್ಕ ಡಾ.ಪ್ರಭಾಕರ ಭಟ್, ಹೊಸದಿಗಂತ ಪತ್ರಿಕೆಯ ಸಿಇಓ ಪಿ.ಎಸ್.ಪ್ರಕಾಶ್, ಭಾಸ್ಕರ ದೇವಸ್ಯ, ವಿಠಲ ಕುಲಾಲ್, ಕರ್ನಾಟಕ ಬ್ಯಾಂಕ್ ಡಿಜಿಎಂ ಹರಳೆ ವಸಂತ್ ಆರ್, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಭಟ್ ಪುಳು, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಂಗಳೂರು ಮಂಡಲ ಕಾರ್ಯದರ್ಶಿ ಮಹೇಶ್ ಕುದುಪುಲ ಮತ್ತಿತರರು ಉಪಸ್ಥಿತರಿದ್ದರು.
ನಮಗೆ ಸಂಬಂಧಿಸಿದ್ದ ಅಲ್ಲ, ಕಾನೂನು ಇದೆ, ಇಲಾಖೆಗಳು ಇವೆ, ತನಿಖೆಯಾಗುತ್ತಿದೆ. ಹೀಗಾಗಿ ಮಾತನಾಡಬಾರದು,…
ನರೇಗಾ ಸೇರಿದಂತೆ ಇತರೆ ಗ್ರಾಮೀಣ ಕೆಲಸಗಳಲ್ಲಿ ದುಡಿಯುವ ಮಹಿಳೆಯರ ನೆರವಿಗೆ ಬಂದಿರುವ ರಾಜ್ಯ…
ಕಳೆದ 11 ವರ್ಷಗಳಲ್ಲಿ ಎನ್ ಡಿಎ ಸರ್ಕಾರ ರೈತರ ಆದಾಯ ದ್ವಿಗುಣ ಮತ್ತು…
ಕೃಷಿ ಬದುಕಿನ ಮಹಿಳೆಯೊಬ್ಬರು ತನ್ನದೇ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕೋಚ ತೋರದೆ, ಅಡಿಕೆ…
ಮಂಗಳವಾರ ಉತ್ತರಾಖಂಡದ ಗುಡ್ಡಗಾಡು ರಾಜ್ಯದ ಧರಾಲಿ ಜಿಲ್ಲೆಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಖೀರ್…
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹನುಮಂತಪುರ ಗ್ರಾಮದ ಕೆರೆಯ ಕೋಡಿ ನೀರು ಹರಿಯುವ…