ರಾಜ್ಯದಲ್ಲಿ ಶರಣಾದ ನಕ್ಸಲರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ನಡುವೆ ಶರಣಾದ ಮಾವೋವಾದಿಗಳ ತನಿಖೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಕಾರಿ ಬಾಲಾಜಿ ಸಿಂಗ್ ಅವರನ್ನು ನಿಯೋಜಿಸಲಾಗಿದೆ.
ಸರ್ಕಾರದ ಮುಂದೆ ಶರಣಾದಾಗ ನಕ್ಸಲರು ಶಸ್ತಾಸ್ತ್ರಗಳನ್ನು ತ್ಯಜಿಸಿರಲಿಲ್ಲ. ಸಾಂಕೇತಿಕವಾಗಿ ಶರಣಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಿದ್ದಾರೆ. ಮುಂಡಗಾರು ಲತಾ, 85 ಪ್ರಕರಣಗಳನ್ನು ಎದುರಿಸುತ್ತಿದ್ದು, ಸುಂದರಿ 71, ಮಾರಪ್ಪ ಅರೋಲಿ 50, ವನಜಾಕ್ಷಿ 29, ವಸಂತ 8 ಮತ್ತು ಜೀಶಾ 11 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೆ ಮೂರು ಲಕ್ಷ ರೂಪಾಯಿ ಬಿಡುಗಡೆ ಮಾಡಲು ಚಿಕ್ಕಮಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಆದೇಶಿಸಿದೆ.
ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗಿರುವುದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರ ಮನ ಪರಿವರ್ತನೆಗೆ ಸರ್ಕಾರ ಅವಕಾಶ ಕೊಟ್ಟಿದೆ. ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸರ್ಕಾರದ ಮುಂದೆ ಶರಣಾಗಿದ್ದಾರೆ. ಶಸ್ತ್ರಾಸ್ತ್ರಗಳನ್ನು ಎಲ್ಲಿ ಎಸೆದು ಬಂದಿದ್ದಾರೆ ಎಂಬುದರ ಕುರಿತು ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ ಎಂದು ಹೇಳಿದ್ದಾರೆ. ಪರಿಶಿಷ್ಟ ಸಮುದಾಯದ ಸಮಾವೇಶದ ಕುರಿತು ಕರೆದಿದ್ದ ಸಭೆ ಮುಂದೂಡಲು ಅನೇಕ ಕಾರಣಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.