ಸೆಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು | ನೈಸರ್ಗಿಕ ಕೃಷಿಯಲ್ಲಿ ದೇಸೀ ಗೋವಿನ ಮಹತ್ವ ಬಹಳ ಮುಖ್ಯ |

May 17, 2024
3:31 PM

ಸಸ್ಯಗಳು ಆರೋಗ್ಯಪೂರ್ಣವಾಗಿರಬೇಕಾದರೆ ಸರಿಯಾದ ಪೋಷಕಾಂಶಗಳು ಬೇಕು. ಗೋವಿನ ಸಗಣಿಯಲ್ಲಿ(Cow dung) ಪೂರ್ಣ ಪ್ರಮಾಣದ ಪೋಷಕಾಂಶಗಳನ್ನು ಪೂರೈಸುವ ಸೂಕ್ಷ್ಮಾಣು ಜೀವಿಗಳಿರುತ್ತವೆ. ಅದರಲ್ಲೂ ದೇಸೀ ಗೋವಿನ ಸೆಗಣಿ ಹೆಚ್ಚು ಮಹತ್ವ ಪಡೆದಿದೆ. ಹೀಗಾಗಿ ಮತ್ತೆ ಮತ್ತೆ ದೇಸೀ ಗೋವು ಹಾಗೂ ಅವುಗಳ ರಕ್ಷಣೆ ಮಹತ್ವದ ಪಾತ್ರ ವಹಿಸಿದೆ.

Advertisement

ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಅನೇಕ ಪೋಷಕಾಂಶಗಳ(Nutrition) ಅವಶ್ಯಕತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿಗೆ(Agriculture) ಮಣ್ಣಿನಲ್ಲಿ(Soil) ಇರಬೇಕಾಗಿದ್ದ ಸೂಕ್ಷ್ಮಾಣು ಜೀವಿಗಳು(Microorganisms) ರಾಸಾಯನಿಕ(Chemical) ಕೃಷಿಯಿಂದ ನಾಶವಾಗುತ್ತಿವೆ. ಈ ಕಾರಣದಿಂದ ಬೆಳೆಗಳಿಗೆ ದೊರಕುತ್ತಿದ್ದ ಪೋಷಕಾಂಶಗಳು ದೊರಕದಂತಾಗಿವೆ. ಈ ಪೋಷಕಾಂಶಗಳನ್ನು ತುಂಬಲು ಸಾವಯವ ಕೃಷಿಯಿಂದ(Organic Farming) ಸಾಧ್ಯವಾಗುವುದಿಲ್ಲ. ಏಕೆಂದರೆ ಸಾವಯವ ಗೊಬ್ಬರಗಳಲ್ಲಿ ಕೆಲವೇ ಕೆಲವು ಪೋಷಕಾಂಶಗಳು ಮಾತ್ರ ಇರುತ್ತವೆ. ಆದರೆ ನೈಸರ್ಗಿಕ ಕೃಷಿಯಲ್ಲಿ(Natural Farming) ಬಳಸುವ ದೇಶಿ ಗೋವಿನ ಸಗಣಿಯಲ್ಲಿ(Cow dung) ಪೂರ್ಣ ಪ್ರಮಾಣದ ಪೋಷಕಾಂಶಗಳನ್ನು ಪೂರೈಸುವ ಸೂಕ್ಷ್ಮಾಣು ಜೀವಿಗಳಿರುತ್ತವೆ. ಇಂಗಾಲ, ಜಲಜನಕ ಮತ್ತು ಆಮ್ಲಜನಕ ವಾತಾವರಣದಿಂದ ಲಭ್ಯವಾದರೆ, ಉಳಿದ  ಪೋಷಕಾಂಶಗಳಲ್ಲಿ 3 ಪ್ರಧಾನ ಪೋಷಕಾಂಶಗಳು ಮತ್ತು 3 ಲಘು ಪೋಷಕಾಂಶಗಳು ಸೇರಿದಂತೆ ಉಳಿದ  ಸೂಕ್ಷ್ಮ ಪೋಷಕಾಂಶಗಳ  ದೇಶಿ ಹಸುವಿನ ಸಗಣಿಯಲ್ಲಿ ಅಡಕವಾಗಿರುತ್ತವೆ.

ಆದರೆ ಬೇರೆ ಯಾವ ಪ್ರಾಣಿಗಳ ಮಲದಲ್ಲೂ ಈ ತರಹದ ಜೀವಾಣುಗಳಿರುವುದಿಲ್ಲ. ಈ ಕಾರಣಕ್ಕೆ ನೈಸರ್ಗಿಕ ಕೃಷಿಯಲ್ಲಿ ದೇಶಿ ಗೋವಿನ ಮಹತ್ವ ಬಹಳ ಮುಖ್ಯವಾದುದು ಎಂದೇ ಹೇಳಲಾಗುತ್ತದೆ. ಇದೇ ರೀತಿ ಕುರಿ, ಕೋಳಿ, ಹಂದಿ, ಕತ್ತೆ, ಕುದುರೆ ಮುಂತಾದ ಪ್ರಾಣಿಗಳ ಮಲ ಮೂತ್ರ ಹಾಗೂ ಕೃಷಿ ತ್ಯಾಜ್ಯದಿಂದ ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದು. ಈ ರೀತಿ ಮಾಡಿದ ಗೊಬ್ಬರ ಕೇವಲ ಪೋಷಕಾಂಶಗಳ ಆಗರವೇ ಹೊರತು ಜೀವಾಣುಗಳ ಸಮುಚ್ಚಯವಾಗಿರುವುದಿಲ್ಲ.

ಸಾಮಾನ್ಯವಾಗಿ ಯಾವುದೇ ಒಂದು ಪ್ರಾಣಿಯ ಘನ ರೂಪದ ವಿಸರ್ಜನೆಯನ್ನು ಗೊಬ್ಬರ ಎಂದು ಕರೆಯಲಾಗುತ್ತದೆ. ಪ್ರಾಣಿಯ ಗೊಬ್ಬರವನ್ನು ನೇರವಾಗಿ ಭೂಮಿಗೆ ಸೇರಿಸಲಾಗುವುದಿಲ್ಲ. ಭೂಮಿ ಅಥವಾ ಬೆಳೆಗಳಿಗೆ ಚೆನ್ನಾಗಿ ಕಳೆತ ಗೊಬ್ಬರವನ್ನು ಕೊಡಬೇಕು. ಹೀಗೆ ಕೊಡುವ ಗೊಬ್ಬರ ಕೊಳೆಯಬಾರದು, ಬದಲಿಗೆ ಕಳಿಯಬೇಕು. ಮೊದಲಿಗೆ ಕಳೆತ ಮತ್ತು ಕೊಳೆತ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ಯಾವುದೇ ಪ್ರಾಣಿಯ ಉದರದಲ್ಲಿ ಅದು ಸೇವಿಸುವ ಆಹಾರ ಪದಾರ್ಥದಲ್ಲಿರುವ ಪೋಷಕಾಂಶಗಳು ಶೇಕಡಾ 30ರಷ್ಟು ಮಾತ್ರ ವಿಘಟನೆಯಾಗಿ ವಿಸರ್ಜಿಸಲ್ಪಟ್ಟಿರುತ್ತವೆ. ಉಳಿದ ಶೇಕಡಾ 70ರಷ್ಟು ವಿಘಟನೆ ಸೂಕ್ಷ್ಮಾಣು ಜೀವಿಗಳ ಸಹಾಯದಿಂದ ಆಗುತ್ತದೆ. ಹೀಗೆ ಯಾವುದೇ ಪ್ರಾಣಿಯ ವಿಸರ್ಜನೆ ಅಥವಾ ಸಗಣಿಯಲ್ಲಿರುವ ಪದಾರ್ಥ ಶೇಕಡಾ 30ರಷ್ಟು ಮಾತ್ರ ಕಳೆದಿರುತ್ತದೆ. ಉಳಿದ ಶೇಕಡಾ 70ರಷ್ಟು ಪದಾರ್ಥ ಕಳಿಯಲು ಸೂಕ್ಷ್ಮಾಣು ಜೀವಿಗಳ ನೆರವಿನಿಂದ ಸ್ವಾಭಾವಿಕ ಕ್ರಿಯೆ ಮೂಲಕ ಆಗುತ್ತದೆ. ಹೀಗೆ ಆಗುವ ಸ್ವಾಭಾವಿಕ ಕ್ರಿಯೆಯ ತದ್ರೂಪಿ ಕ್ರಮದ ಮೂಲಕ ಮಾಡುವುದನ್ನು ಕಾಂಪೋಸ್ಟ್ ಗೊಬ್ಬರ ಎಂದು ಕರೆಯಲಾಗುತ್ತದೆ. ಹೀಗಾಗಿಯೇ ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದು ಕಾಂಪೋಸ್ಟ್ ಗೊಬ್ಬರದಿಂದ ಮಾತ್ರ ಸಾಧ್ಯ ಎಂದೇ ಹೇಳಲಾಗಿದೆ.

ಸಗಣಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು 7 ದಿನಗಳಲ್ಲೇ ಅಗಣಿತ ಪ್ರಮಾಣದಲ್ಲಿ ದ್ವಿಗುಣಗೊಂಡು ಮಣ್ಣಿಗೆ ಬಿದ್ದ ತಕ್ಷಣ ಮಣ್ಣಿನಲ್ಲಿದ್ದ ಪೋಷಕಾಂಶಗಳನ್ನು ಬೆಳೆಯ ಬೇರುಗಳಿಗೆ ಸರಬರಾಜು ಮಾಡುವ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ನೈಸರ್ಗಿಕ ಕೃಷಿಯ ಹರಿಕಾರರಾದ ಡಾ. ಸುಭಾಷ್ ಪಾಳೇಕರ್ ಹೇಳುವ ಪ್ರಕಾರ ನಮ್ಮ ದೇಶಿ ಗೋವಿನ ಒಂದು ಗ್ರಾಂ ಸಗಣಿಯಲ್ಲಿ 300 ರಿಂದ 500 ಕೋಟಿಯಷ್ಟು ಪರಿಣಾಮಕಾರಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ.

ಅಂದರೆ 10 ಕೆಜಿ ಸಗಣಿಯಲ್ಲಿ ಬಿಲಿಯನ್ ಸಂಖ್ಯೆಯ ಜೀವಾಣುಗಳು ಇರುತ್ತವೆ. ಇವುಗಳನ್ನು ದ್ವಿಗುಣಗೊಳಿಸಲು 200 ಲೀಟರ್ ನೀರಿಗೆ, 10 ಕೆಜಿ ಸಗಣಿ, 10 ಲೀಟರ್ ಗೋಮೂತ್ರ, 2 ಕೆಜಿ ಕಪ್ಪು ಬೆಲ್ಲ, 2 ಕೆಜಿ ದ್ವಿದಳ ಧಾನ್ಯದ ಹಿಟ್ಟು, ಜೀವಾಮೃತ ಕೊಡುವ ಜಮೀನಿನ ಒಂದು ಹಿಡಿ ಮಣ್ಣನ್ನು ಬೆರೆಸಿ ತಯಾರಿಸಿದ ಜೀವಾಮೃತವನ್ನು ಒಂದು ಎಕರೆಗೆ ಪ್ರತಿ ತಿಂಗಳು ನೀಡಬೇಕು. ರಾಸಾಯನಿಕಗಳನ್ನು ಬಳಸುವುದಕ್ಕಿಂತ ಮುಂಚೆ ಮಣ್ಣಿನಲ್ಲಿ ಅಪಾರ ಪ್ರಮಾಣದ ಸೂಕ್ಷ್ಮಾಣು ಜೀವಿಗಳಿದ್ದವು. ಈಗ ಅವುಗಳು ಪೂರ್ಣ ಪ್ರಮಾಣದಲ್ಲಿ ನಾಶವಾಗಿವೆ. ಪುನಃ ಅವುಗಳನ್ನು ನಮ್ಮ ಕೃಷಿ ಮಣ್ಣಿಗೆ ಜೀವಾಮೃತದ ಮೂಲಕ ಮರುಪೂರಣ ಮಾಡಬೇಕಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಸಗಣಿಯಲ್ಲಿ ರೈಜೋಬಿಯಂ ಜಾತಿಗೆ ಸೇರಿದ ಅಸಿಟೋ ಬ್ಯಾಕ್ಟೀರಿಯಾ, ಅಜಿಟೋ ಬ್ಯಾಕ್ಟೀರಿಯಾ, ಅಜೋಸ್ಪೈರಿಲಮ್ ಬ್ಯಾಕ್ಟೀರಿಯಾ ಮತ್ತು ಬೈಜಿರಿಂಕಿಯಾ ಬ್ಯಾಕ್ಟೀರಿಯಾ ಎಂಬ ನಾಲ್ಕು ಸೂಕ್ಷ್ಮಾಣು ಜೀವಿಗಳಿರುತ್ತವೆ. ಇವು ಜೀವಾಮೃತದಲ್ಲಿ ವೃದ್ಧಿಯಾಗಿ ಬೆಳೆಗಳಿಗೆ ಸಾರಜನಕವನ್ನು ಪೂರೈಸುತ್ತವೆ. ಹಾಗೆಯೇ ನಿಸರ್ಗದತ್ತವಾಗಿ ಮಣ್ಣಿನಲ್ಲಿ ರಂಜಕದ ಕಣಗಳು ಏಕದಳ, ದ್ವಿದಳ, ತ್ರಿದಳ ರೂಪಗಳಲ್ಲಿರುತ್ತವೆ. ಇವು ರಾಸಾಯನಿಕಗಳ ಬಳಕೆಯಿಂದ ಬೆಳೆಗಳಿಗೆ ಲಭ್ಯವಾಗದಂತೆ ಸಿಲಿಕೇಟ್ ಸಂಯುಕ್ತಗಳಿಂದ ಬಂಧಿಸಲ್ಪಟ್ಟಿರುತ್ತವೆ. ಜೊತೆಗೆ ರಾಸಾಯನಿಕ ಕೃಷಿಯಿಂದಾಗಿ ರಂಜಕವನ್ನು ಸರಬರಾಜು ಮಾಡುವ ಪಿ.ಎಸ್.ಬಿ. (ಪಾಸ್ಪೇಟ್ ಸಾಲ್ಯುಬಿಲೈಸಿಂಗ್ ಬ್ಯಾಕ್ಟೀರಿಯ)ಗಳು ನಾಶಗೊಂಡಿರುತ್ತವೆ. ಈಗಾಗಿ ಸಗಣಿಯಲ್ಲಿರುವ ಪಿ.ಎಸ್.ಬಿ. ಜೀವಾಣುಗಳನ್ನು ಜೀವಾಮೃತವು ವೃದ್ಧಿಮಾಡಿ ಮಣ್ಣಿಗೆ ಸೇರಿಸಿದಾಗ ಸಿಲಿಕೇಟ್ ಸಂಯುಕ್ತಗಳಿಂದ ಮುಚ್ಚಿಹೋಗಿದ್ದ ರಂಜಕದ ಕಣಗಳನ್ನು ವಿಭಜಿಸಿ ಅವಶ್ಯಕತೆಗೆ ಅನುಗುಣವಾಗಿ ಬೆಳೆಯ ಬೇರುಗಳಿಗೆ ಸರಬರಾಜು ಮಾಡುತ್ತದೆ. ಪೊಟ್ಯಾಷ್ ಪೂರೈಸುವ ಬ್ಯಾಸಿಲಸ್ ಸಿಲಿಕೆಸ್ ಬ್ಯಾಕ್ಟೀರಿಯಾಗಳು ಸಹ ರಾಸಾಯನಿಕ ಕೃಷಿಯಿಂದ ಮಣ್ಣಿನಲ್ಲಿ ನಾಶವಾಗಿರುತ್ತವೆ. ಜೊತೆಗೆ ಪೊಟ್ಯಾಷ್ ಕಣಗಳು ಸಹ ಸಿಲಿಕೇಟ್ ಸಂಯುಕ್ತದಿಂದ ಮುಚ್ಚಿ ಹೋಗಿರುತ್ತವೆ.

ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುವ ಉಪಯುಕ್ತ ಬ್ಯಾಕ್ಟೀರಿಯಾಗಳು ಸಗಣಿ ಮತ್ತು ಗೋಮೂತ್ರದ ಮೂಲಕ ಮಣ್ಣಿಗೆ ಲಭ್ಯವಾಗುತ್ತದೆ. ಇದರೊಂದಿಗೆ ಕ್ಯಾಲ್ಸಿಯಂ, ಸಲ್ಫರ್, ಮೆಗ್ನೀಷಿಯಂ ಮುಂತಾದ ಲಘು ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಮ್ಯಾಂಗನೀಸ್, ಬೋರಾನ್, ತಾಮ್ರ, ಸತು, ಕ್ಲೋರಿನ್, ಸೆಲನಿಯಂ, ಸಿಲಿಕಾಸ್, ಐಯೋಡಿನ್, ಕ್ರೋಮಿಯಂ, ಫ್ಲೋರೀನ್, ಬ್ರೋಮೈನ್, ಲಿಥಿಯಂ, ಸೋಡಿಯಂ ಸೇರಿದಂತೆ ಇನ್ನೂ ಹಲವಾರು ಸೂಕ್ಷ್ಮ ಪೋಷಕಾಂಶಗಳು ಗಿಡಗಳಿಗೆ ಬೇಕಾಗುತ್ತದೆ.

ಇವುಗಳನ್ನೆಲ್ಲ ಒದಗಿಸುವ ಜೀವಾಣುಗಳು ದೇಶಿ ಗೋವಿನ ಸಗಣಿಯಲ್ಲಿ ಮಾತ್ರ ಲಭ್ಯವಿದ್ದು, ಜೀವಾಮೃತದಿಂದ ದ್ವಿಗುಣಗೊಂಡು ಕೃಷಿ ಮಣ್ಣಿಗೆ ಬೆರೆತ ಕೂಡಲೇ ಬೇಕಾದ ಲಘು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ. ಹಾಗೆಯೇ ಸಗಣಿಯಿಂದ ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಸಗಣಿ ಅನಿಲವನ್ನು ತಯಾರಿಸಬಹುದು. ಹೀಗೆ ಸಗಣಿಯಿಂದ ಕೃಷಿಯಷ್ಟೇ ಅಲ್ಲದೆ ವಿವಿಧ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಇಷ್ಟೆಲ್ಲಾ ಜೀವಾಣುಗಳಿರುವ ಇದೇ ಸಗಣಿಯನ್ನು ತಿಪ್ಪೆ ಗೊಬ್ಬರವಾಗಿ ಮಾಡಿದ್ದಲ್ಲಿ ತಾಜಾ ಸಗಣಿಯಲ್ಲಿ ಲಭ್ಯವಿದ್ದ ಬಹುತೇಕ ಜೀವಾಣುಗಳು ನಾಶವಾಗಿ ಕೇವಲ ಪೋಷಕಾಂಶವಷ್ಟೇ ಇರುವ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಆದರೂ ಸಹ ಅದನ್ನು ಕೂಡ ಕೃಷಿಯಲ್ಲಿ ಬಳಸಬಹುದಾಗಿದೆ.

ಬಹಳಷ್ಟು ಜನರು ಸಗಣಿಯನ್ನೇ ಗೊಬ್ಬರ ಎಂದು ತಿಳಿದುಕೊಂಡಿದ್ದಾರೆ. ಆದರೆ ಸಗಣಿಯಷ್ಟೇ ಗೊಬ್ಬರವಲ್ಲ. ಸಗಣಿ ಎಂಬುದು ಗೊಬ್ಬರ ಮಾಡಲು ಬಳಸುವ ಒಂದು ಕಚ್ಚಾವಸ್ತು. ಸಗಣಿಯನ್ನು ಗೊಬ್ಬರ ಮಾಡದೇ ಭೂಮಿಯ ಮೇಲೆ ನೇರವಾಗಿ ಬಿಸಿಲು ಬೀಳುವ ಕಡೆ ಗುಡ್ಡೆ ಹಾಕುವುದರಿಂದ ಅಥವಾ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನಕ್ಕೊಳಗಾದ ಸಗಣಿ ರಾಶಿಯಿಂದ ಸಾರಜನಕ ಮತ್ತು ಇಂಗಾಲದ ಅಂಶ ಆವಿಯಾಗಿ ಹೋಗುತ್ತದೆ. ಹೀಗೆ ಅರೆಬೆಂದ ಸಗಣಿಯನ್ನು ಕೃಷಿಯಲ್ಲಿ ಬಳಸುವುದರಿಂದ ಹಣ ಮತ್ತು ಶ್ರಮ ಎರಡು ನಷ್ಟವಾಗುವುದರೊಂದಿಗೆ ಭೂಮಿಯ ಮತ್ತು ಬೆಳೆಯ ಆರೋಗ್ಯ ಕೂಡ ಕೆಡುತ್ತದೆ. ನೇರವಾಗಿ ಹಾಕುವುದರಿಂದ ಸಗಣಿಯಲ್ಲಿರುವ ವಿಷ ಅನಿಲಗಳಾದ ಹೈಡ್ರೋಸಲ್ಫೈಡ್, ಕಾರ್ಬನ್ ಮಾನಾಕ್ಸೈಡ್, ಮಿಥೇನ್ ಬಿಡುಗಡೆಯಾಗುವುದರೊಂದಿಗೆ ಬೆಳೆಯ ಬೇರು ಸುಡಲು ಸಹ ಇವುಗಳು ಕಾರಣವಾಗುತ್ತವೆ. ಅಷ್ಟೇ ಅಲ್ಲದೆ ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದರೊಂದಿಗೆ ಸಗಣಿಯಲ್ಲಿರುವ ಕಳೆ ಬೀಜಗಳು ಮರು ಹುಟ್ಟು ಪಡೆಯುತ್ತವೆ. ಮುಖ್ಯವಾಗಿ ಸೂಕ್ತ ಸಾರಜನಕ ಮತ್ತು ಇಂಗಾಲದ ಅನುಪಾತದ ಪ್ರಮಾಣ ದೊರೆಯದೇ ಪೋಷಕಾಂಶಗಳು ಬೆಳೆದ ಬೆಳೆಗೆ ದೊರೆಯದಂತಾಗುತ್ತದೆ. ಹೀಗೆ ಭೂಮಿಗೆ ನೇರವಾಗಿ ಸಗಣಿ ಹಾಕುವುದರಿಂದ ಸಾಕಷ್ಟು ಅನಾನುಕೂಲವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇಷ್ಟೆಲ್ಲಾ ಪೋಷಕಾಂಶಗಳು, ಸೂಕ್ಷ್ಮಾಣು ಜೀವಿಗಳು, ಪರಿಸರ ಸ್ನೇಹಿ ಬ್ಯಾಕ್ಟೀರಿಯಾಗಳು ಸೇರಿದಂತೆ ಸಾಕಷ್ಟು ಜೀವಾಣುಗಳು ಅಡಗಿರುವುದು ದೇಸೀ ಗೋವಿನ ಸಗಣಿಯಲ್ಲಿ ಮಾತ್ರ. ಹೀಗಾಗಿ ಇನ್ನು ಮುಂದಾದರೂ ದೇಸೀ ಗೋವಿನ ರಕ್ಷಣೆಯ ಕಡೆಗೆ ಗಮನಹರಿಸಿ.

(ಸಂಗ್ರಹ ಮಾಹಿತಿ)

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group